ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹ್ಮದ್ ಅಧಿಕಾರಿಗಳ ಸಭೆ ನಡೆಸಿದರು. ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಸಿ ಗುರುನಾಥ ದಡ್ಡಿ ಇತರರಿದ್ದಾರೆ.
- ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾರ್ ಅಹ್ಮದ್ ಹೇಳಿಕೆ
- 3 ತಿಂಗಳಲ್ಲಿ ಈ ದತ್ತಾಂಶ ಸಂಗ್ರಹಣೆ ಕಾರ್ಯ ಪೂರ್ಣ
- ಪ್ರಾಥಮಿಕ ಯೋಜನೆ ಕೈಗೆತ್ತಿಕೊಂಡ ಇಲಾಖೆ
ವಿಜಯಪುರ: ಸಾಕ್ಷರತಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ 6 ವರ್ಷದ ಮಕ್ಕಳ ಸಮಗ್ರ ಸಮೀಕ್ಷೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ನಿರ್ದೇಶನ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಹೇಳಿದರು.
ಶಾಲೆಯಲ್ಲಿರುವ 6 ವರ್ಷದ ಮಕ್ಕಳ ಸಂಖ್ಯೆ ಇದೆ. ಆದರೆ ಶಾಲೆಯಿಂದ ಅನೇಕ ಮಕ್ಕಳು ಹೊರಗುಳಿದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ರಾಜ್ಯದಲ್ಲಿರುವ ಆರು ವರ್ಷದ ಮಕ್ಕಳ ಸಂಖ್ಯೆ ದತ್ತಾಂಶಗಳ ಸಂಗ್ರಹಣೆಯೇ ಇಲ್ಲ, ಕಳೆದ ಒಂದು ವರ್ಷದಿಂದ ಈ ನಿಖರವಾದ ದತ್ತಾಂಶ ಸಂಗ್ರಹಣೆ ಪ್ರಯತ್ನ ನಡೆಸಲಾಗುತ್ತಿದೆ. 100 ಮಕ್ಕಳು 6 ವರ್ಷದವರು ಇದ್ದರೆ ಅದರಲ್ಲಿ ಶಾಲೆಗೆ ಸೇರಿದ ಮಕ್ಕಳ ಸಂಖ್ಯೆ 80 ಇರಬಹುದು. ಶಾಲೆಯಲ್ಲಿರುವ ಮಕ್ಕಳು ಹೊರತುಪಡಿಸಿ 6 ವರ್ಷದ ಮಕ್ಕಳ ಸಂಖ್ಯೆ ಈವರೆಗೂ ಲಭ್ಯವಾಗಿಲ್ಲ. ಹೀಗಾಗಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ 3 ತಿಂಗಳಲ್ಲಿ ಈ ದತ್ತಾಂಶ ಸಂಗ್ರಹಣೆ ಕಾರ್ಯ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದೊಂದು ಪ್ರಾಥಮಿಕ ಯೋಜನೆ ಎಂದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳ ಅನುಷ್ಟಾನ, ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಮುಟ್ಟುತ್ತಿರುವ ಬಗ್ಗೆ ಸುದೀರ್ಘವಾದ ಸಭೆ ನಡೆಸಿ ಸಂಬಂಧಿಸಿದ ಇಲಾಖೆಯ ಪರಾಮರ್ಶನ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ರೀತಿಯ ಸಂದೇಶವನ್ನು ನೇರವಾಗಿ ಡಿಲೀಟ್ ಮಾಡುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ, ಫೋಸ್ಟ್ ಹಾಕಿದವರಿಗೆ ಈ ಕಂಟೆಂಟ್ ಅಳಿಸಿ ಹಾಕಿ ಎಂದು ಸೂಚನೆ ನೀಡುವ ಅಧಿಕಾರ ಇದೆ. ಈ ನಿಟ್ಟಿನಲ್ಲಿ ವಿಜಯಪುರ ಪೊಲೀಸರು ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ವರ್ಷ ಇಂಥ 21 ಪೋಸ್ಟ್‌ಗಳನ್ನು ಅಳಿಸಿ ಹಾಕಿದ್ದು, ಈ ವರ್ಷ ಈಗಾಗಲೇ 21 ಪೋಸ್ಟ್‌ಗಳನ್ನು ಅಳಿಸಿ ಹಾಕಿದ್ದಾರೆಂದರು.
ಉದ್ಯೋಗವಕಾಶಕ್ಕೆ ವೇದಿಕೆ
ಉದ್ಯೋಗ ಕಲ್ಪಿಸುವ ಕಾರ್ಯಕ್ಕೂ ಆಯೋಗ ವಿಶೇಷ ಮುತವರ್ಜಿ ಹಾಗೂ ಈ ನಿಟ್ಟಿನಲ್ಲಿ ವಿಶೇಷ ಹೆಜ್ಜೆ ಇರಿಸಿದೆ. ಅಲ್ಪಸಂಖ್ಯಾತ ಆಯೋಗ ಉದ್ಯೋಗ ಮೇಳವನ್ನು ಪ್ರಥಮ ಬಾರಿಗೆ ಆಯೋಜಿಸಿದೆ. ಬೆಂಗಳೂರಿನಲ್ಲಿ ವಿಶ್ವ ವಿದ್ಯಾಲಯವೊಂದರ ಸಹಯೋಗದಲ್ಲಿ 200 ಕ್ಕೂ ಹೆಚ್ಚು ಕಂಪನಿಗಳನ್ನು ಆಹ್ವಾನಿಸಲಾಗಿದ್ದು, ಸಾವಿರಾರು ಉದ್ಯೋಗಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಆದೇಶ ಪತ್ರ ಒದಗಿಸುವ ಕೆಲಸ ಮಾಡಲಾಗಿದೆ. ಉದ್ಯೋಗ ಮಾಹಿತಿ ಒದಗಿಸುವ ‘ಎಂಪ್ಲಾಯಿಮೆಂಟ್ ಪ್ಲಾಟ್‌ಫಾರ್ಮ್’ ರೂಪಿಸುವ ಕೆಲಸ ಮಾಡಲಾಗಿದೆ ಎಂದರು.
ಆಯೋಗದ ಜಾಲತಾಣವನ್ನು ಉದ್ಯೋಗ, ಜ್ಞಾನ ಮಾಹಿತಿ ನೀಡುವ ನಿಟ್ಟಿನಲ್ಲಿ ಸಮಗ್ರವಾಗಿ ರೂಪಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವ ನಿಟ್ಟಿನಲ್ಲಿಯೂ ಆಯೋಗ ಕಾರ್ಯೋನ್ಮುಖವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಈ ತರಬೇತಿಗೆ ಆದ್ಯತೆ ನೀಡಲಾಗಿದೆ ಎಂದರು.
ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಸಿ ಗುರುನಾಥ ದಡ್ಡಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ ಜಫಾರಿ, ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾದ ಸೈಯದ್ ನೂರುಲ್ ಹಸನ್ ಎಸ್.ಬೀಳಗಿಪೀರ, ಬಸೀರ ಅಹ್ಮದ್ ರಿಸಲ್ದಾರ್, ಎಸ್.ಎಸ್. ತಜಂತ್ರಕ, ನೆಲ್ಸನ್ ನಾರ್ಮನ್ ಐಝಾಕ್, ಜ್ಯೋತಿಂದ್ರ ಆಯಿತವಾಡ, ಬಂದೇನವಾಜ ಮುಲ್ಲಾ ಇತರರಿದ್ದರು.