ವಿಜಯಪುರ ನಗರದ ಕಸಾಪ ಜಿಲ್ಲಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅರವಿಂದ ಕುಲಕರ್ಣಿ ಮಾತನಾಡಿದರು. ಎಂ.ಜಿ. ಯಂಕಂಚಿ, ಪಾಂಡು ಹ್ಯಾಟಿ ಮತ್ತಿತರರಿದ್ದಾರೆ. 
ವಿಜಯಪುರ

ಬೂದಿಹಾಳ-ಪೀರಾಪೂರ ಯೋಜನೆ ಶೀಘ್ರ ಪೂರ್ಣಗೊಳಿಸಿ

ವಿಜಯವಾಣಿ ಸುದ್ದಿಜಾಲ, ವಿಜಯಪುರ
ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಬಾಕಿ ಉಳಿದ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಧರಣಿ ಸಂದರ್ಭದಲ್ಲಿ ನೀಡಿದ ಭರವಸೆ ಕೇವಲ ಮಾತಿಗೆ ಸೀಮಿತವಾಗಿ ಉಳಿದಿದೆ. ಸಚಿವರು ಕೇವಲ ಭರವಸೆ ನೀಡುವ ಮೂಲಕ ರೈತರಿಗೆ ದಿಕ್ಕು ತಪ್ಪಿಸುತ್ತಿದದ್ದಾರೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುರಾಜ ಪಡಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಸಾಪ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಭಯ ರೈತ ಮುಖಂಡರು, ಯೋಜನೆಗೆ ಸಂಬಧಿಸಿದ ಪೀರಾಪೂರ ಏತ ನೀರಾವರಿ ಯೋಜನೆ ಬಾಕಿ ಉಳಿದ ಕಿರು ಕಾಲುವೆ (ಎ-ï‌ಐಸಿ) ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ, ಪ್ರತಿಯೊಬ್ಬ ರೈತನ ಜಮೀನಿಗೆ ನೀರು ಒದಗಿಸಬೇಕು ಎಂದು ಆಗ್ರಹಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಕಳೆದ ೨೦೨೫ರಿಂದ ತಾಳಿಕೋಟಿ ತಾಲೂಕಿನ ಕೊಡಗಾನೂರ ಕ್ರಾಸ್ ಬಳಿ ೩೮ ಹಳ್ಳಿಗಳ ರೈತರೊಂದಿಗೆ ೧೨ ದಿನಗಳವರೆಗೆ ಧರಣಿ ಹಮ್ಮಿಕೊಳ್ಳಲಾಗಿತ್ತು. ಧರಣಿ ಸ್ಥಳಕ್ಕೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಆಗಮಿಸಿ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಶೀಘ್ರದಲ್ಲಿ ಮುಕ್ತಾಯಗೊಳಿಸಲಾಗುವುದೆಂದು ಧರಣಿ ನಿರತ ರೈತರಿಗೆ ಮಾತು ಕೊಟ್ಟಿದ್ದರು. ಸದ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಮೌನವಾಗಿದ್ದಾರೆ ಎಂದು ಆರೋಪಿಸಿದರು.
ತಾಳಿಕೋಟಿ ಭಾಗದ ಅಸ್ಕಿ, ನೀರಲಗಿ, ಬೆಕಿನಾಳ, ಜಲಪೂರ, ಬೆನ್ನಟ್ಟಿ, ಬೂದಿಹಾಳ, ಹಾಳಗುಂಡಕನಾಳ, ರಾಂಪೂರ, ವಣಕಿಹಾಳ, ತುರಕನಕೇರಿ ಸೇರಿ ೩೮ ಗ್ರಾಮಗಳಲ್ಲಿ ನೀರಿನ ಭವಣೆ ಗಂಭೀರವಾಗಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿವೆ. ಕೃಷಿಗೂ ಕೂಡ ನೀರಿಲ್ಲ. ಅಂದಾಜು ನಾಲ್ಕೈದು ಕಿಮೀ. ವರೆಗೆ ನೀರು ಇದ್ದಲ್ಲಿ ಹುಡುಕಿಕೊಂಡು ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಸಿದ್ದಾಪೂರ ಮಾತನಾಡಿ, ಸದರಿ ಯೋಜನೆ ಪೂರ್ಣಗೊಂಡರೆ ೫೦,೬೫೭ ಎಕರೆ ಜಮೀನು ನೀರಾವರಿಗೆ ಒಳಪಡುತ್ತದೆ. ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಯ ೧ನೇ ಹಂತದ ಉದ್ಘಾಟನೆ ಮಾಡಿ ೨ನೇ ಹಂತದ ಶಂಕು ಸ್ಥಾಪನೆ ನೆರವೇರಿಸಿದ್ದರು. ಆದರೆ, ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಈಗಾಗಲೇ ಶೇ. ೯೦ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೇವಲ ಶೇ. ೧೦ರಷ್ಟು ಪ್ರಮಾಣದಲ್ಲಿ ಕಾಮಗಾರಿ ಬಾಕಿ ಉಳಿದಿದ್ದು, ಅದಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಿ ಬಾಕಿ ಉಳಿದ ಕಾಮಗಾರಿ ಮುಕ್ತಾಯಗೊಳಿಸಬೇಕು. ಇಲ್ಲದಿದ್ದರೆ ಮತ್ತೆ ತಾಳಿಕೋಟಿ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ೩೮ ಹಳ್ಳಿಗಳ ರೈತರೊಂದಿಗೆ ಸಭೆ ಸೇರಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಎಂ.ಜಿ. ಯಂಕಂಚಿ ಮಾತನಾಡಿದರು. ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವನ ಬಾಗೇವಾಡಿ ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಮಹಾದೇವಪ್ಪ ತೇಲಿ, ಶ್ರೀಶೈಲ ತಾಳಿಕೋಟಿ, ದತ್ತಾತ್ರೆಯ ಕುಲಕರ್ಣಿ, ಅರವಿಂದ ತೇಲಿ, ಗುರುನಾಥ ಬಾಗೇವಾಡಿ ಸುದ್ದಿಗೋಷ್ಠಿಯಲ್ಲಿದ್ದರು.