ಸಿಂದಗಿ ನಗರದ ಬಸವೇಶ್ವರ ವೃತ್ತದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರ ರಾಜೀನಾಮೆ ಖಂಡಿಸಿ ಸಿಂದಗಿ ಹಾಗೂ ಆಲಮೇಲ ಕುರುಬ ಸಂಘ ಮತ್ತು ಅಹಿಂದ ವರ್ಗದ ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ಧರಿಸಿ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ನಿಂಗಣ್ಣ ಬುಳ್ಳಾ, ಸಿದ್ದು ಕೆರಿಗೊಂಡ, ಶಿವಾನಂದ ಗಣಿಹಾರ, ದತ್ತು ಎಡಗಿ ಮತ್ತಿತರಿದ್ದರು. 
ವಿಜಯಪುರ

ಕೈ ನಾಯಕರ ಕುಮ್ಮಕ್ಕಿನಿಂದ ಸಿಎಂ ಸಿದ್ದರಾಮಯ್ಯ ರಾಜೀನಾಮೆ

ವಿಜಯವಾಣಿ ಸುದ್ದಿಜಾಲ, ಸಿಂದಗಿ
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಜಾತ್ಯತೀತ ಆಡಳಿತದ ಮೂಲಕ ಜನಪರ ಯೋಜನೆಗಳನ್ನು ನೀಡಿ, ಜನಮನದಲ್ಲಿ ಧೀಮಂತ ನಾಯಕನಾಗಿದ್ದ ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ನಾಯಕರ ಕುಮ್ಮಕ್ಕಿನಿಂದ ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದ್ದಾರೆ ಎಂದು ತಾಲೂಕು ಕುರುಬ ಸಮಾಜದ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸಿಂದಗಿ ಹಾಗೂ ಆಲಮೇಲ ತಾಲೂಕು ಕುರುಬರ ಸಂಘ ಮತ್ತು ಅಹಿಂದ ಕಾರ್ಯಕರ್ತರು ಗುರುವಾರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಖಂಡಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು, ಟೈಯರ್ ಸುಟ್ಟು ಪ್ರತಿಭಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ನಾಯಕನಿಗೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪಕ್ಷದ ೧೩೦ ಕ್ಕೂ ಅಧಿಕ ಶಾಸಕರು ಚುನಾಯಿತರಾಗಿದ್ದಾರೆ. ಸಿದ್ದರಾಮಯ್ಯನವರ ರಾಜೀನಾಮೆ ನೀಡಿದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕುರುಬ ಸಮಾಜ ಸೇರಿ ಅಹಿಂದ ವರ್ಗ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ಶಾಸಕರು ಕೂಡಾ ಚುನಾವಣೆ ವೇಳೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯನವ ಹೆಸರು ಮುಂದಿಟ್ಟುಕೊಂಡು ಮತ ಕೇಳಿ ಅಹಿಂದ ವರ್ಗಗಳ ಮತ ಪಡೆದು ಅಧಿಕಾರ ಹಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಹಿಂದ ವರ್ಗಕ್ಕೆ ಸಾಕಷ್ಟು ನೋವುಂಟು ಮಾಡಿದೆ ಅಹಿಂದ ವರ್ಗಗಳ ಮತ ಪಡೆದ ಶಾಸಕ ಅಶೋಕ ಮನಗೂಳಿ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಅಗ್ರಹಿಸಿದರು.
ಸಿಂದಗಿ ತಾಲೂಕು ಕುರುಬ ಸಂಘದ ಅಧ್ಯಕ್ಷ ನಿಂಗಣ್ಣ ಬುಳ್ಳಾ, ಆಲಮೇಲ ತಾಲೂಕು ಕುರುಬ ಸಂಘದ ಅಧ್ಯಕ್ಷ ಸಿದ್ದು ಕೆರಿಗೊಂಡ, ಶಿವಾನಂದ ಗಣಿಹಾರ, ದತ್ತು ಎಡಗಿ, ಯಲ್ಲು ಬಮನಳ್ಳಿ, ಭೀಮರಾಯ ಸಿತೀಮನಿ, ಮಾಳು ಗಡೆದ, ಲಕ್ಷ್ಮಣ ಜೇವರ್ಗಿ, ಬಾಪುಗೌಡ ಪಾಟೀಲ್, ಸಿದ್ದು ತಮದೊಡ್ಡಿ, ನಿಂಗಣ್ಣ ಬಿಸಾನಾಳ, ವಿಠಲ ನಾಯಿಕೋಡಿ, ಮಡಿವಾಳಪ್ಪ ಪೂಜಾರಿ ಬಸನಗೌಡ ಪಾಟೀಲ, ಸಿದ್ದರಾಮಯ್ಯ ಅಭಿಮಾನಿಗಳಿದ್ದರು.