ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಡಾ.ರವಿ ಬಿರಾದಾರ, ಫಯಾಜ್ ಕಲಾದಗಿ, ವಸಂತ ಹೊನಮೋಡೆ ಇದ್ದಾರೆ. 
ವಿಜಯಪುರ

ಸಿಎಂ ಬದಲಾವಣೆ ಚರ್ಚೆ, ಪ್ರತಿಪಕ್ಷ ನಾಯಕರಿಗೆ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನೆ, ‘ದಲಿತ ಸಿಎಂ’ ಕೂಗು ಬಿಜೆಪಿ ಆಡಳಿತದಲ್ಲೇಕಿಲ್ಲ?

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ
  • ಪ್ರತಿಪಕ್ಷ ನಾಯಕರಿಗೆ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನೆ
  • ‘ದಲಿತ ಸಿಎಂ’ ಕೂಗು ಬಿಜೆಪಿ ಆಡಳಿತದಲ್ಲೇಕಿಲ್ಲ?
ವಿಜಯಪುರ: ‘ರಾಜ್ಯದಲ್ಲಿ ಒಂದೇ ಅವಧಿಗೆ ಮೂರು ಬಾರಿ ಸಿಎಂ ಸ್ಥಾನ ಬದಲಾವಣೆಯಾದಾಗ ದಲಿತ ಸಿಎಂ ಪ್ರಶ್ನೆ ಉದ್ಭವಿಸಲಿಲ್ಲವೇಕೆ? ಸಂಸದರಾದ ರಮೇಶ ಜಿಗಜಿಣಗಿ ಮತ್ತು ಗೋವಿಂದ ಕಾರಜೋಳ ಆಗ ಸುಮ್ಮನಿದ್ದಿದ್ದೇಕೆ? ಉಪ ಮುಖ್ಯಮಂತ್ರಿಯಾಗುವ ಬದಲು ಕಾರಜೋಳ ಅವರು ಸಿಎಂ ಸ್ಥಾನವನ್ನೇ ಏಕೆ ಕೇಳಲಿಲ್ಲ? ಸಿಎಂ ಆಗಲು ಹೈಕಮಾಂಡ್‌ಗೆ 2500 ಕೋಟಿ ರೂಪಾಯಿ ಕೊಡಬೇಕೆಂದು ಈ ಹಿಂದೆ ಬಿಜೆಪಿಯಲ್ಲಿದ್ದ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದಾಗ ಆರ್.ಅಶೋಕ ಆದಿಯಾಗಿ ಬಿಜೆಪಿ ಮುಖಂಡರು ಮೌನವಾಗಿದ್ದುದ್ದು ಏಕೆ.....?
ಹೀಗೆ ಸಾಲು ಸಾಲು ಪ್ರಶ್ನೆಗಳ ಮೂಲಕ ಬಿಜೆಪಿ ನಾಯಕರನ್ನು ತಿವಿದ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದೆಂದು ಹೇಳಿದರೂ ಪದೇ ಪದೇ ಬಿಜೆಪಿ ನಾಯಕರು ದಲಿತ ಸಿಎಂ ವಿಚಾರ ಪ್ರಸ್ತಾಪಿಸುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.
‘ಕಾಂಗ್ರೆಸ್‌ನಿಂದ ದಲಿತ ಮುಖ್ಯಮಂತ್ರಿ ಅಸಾಧ್ಯ’ ಎಂದಿರುವ ಸಂಸದ ರಮೇಶ ಜಿಗಜಿಣಗಿ ಅವರು 40 ವರ್ಷಗಳ ಕಾಲ ರಾಜಕೀಯದಲ್ಲಿದ್ದು ಅಧಿಕಾರ ಅನುಭವಿಸುತ್ತಿದ್ದಾರೆ. ಈವರೆಗೆ ಅವರು ಸಿಎಂ ಆಗಿಲ್ಲವೇಕೆ? ಅಷ್ಟಕ್ಕೂ ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ಎಷ್ಟು ರಾಜ್ಯಗಳಲ್ಲಿ ದಲಿತರನ್ನು ಸಿಎಂ ಮಾಡಿದ್ದೀರಿ ಎಂದ ಗಣಿಹಾರ, ಕೇವಲ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಿ ಬಿಜೆಪಿಯಲ್ಲಿ ದಲಿತ ಸಿಎಂಗಾಗಿ ಬೇಡಿಕೆ ಇರಿಸಿ. ಹಾಗೊಂದು ವೇಳೆ ತಾವು ಬಿಜೆಪಿಯಿಂದ ಸಿಎಂ ಆದರೆ ನಮಗೂ ಸಂತೋಷ. ಏಕೆಂದರೆ ದಲಿತರು ಸಿಎಂ ಆಗಬೇಕೆಂಬುದು ನಮ್ಮದೂ ಅಭಿಲಾಷೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸತ್ತಿದೆ, ಆಡಳಿತ ಯಂತ್ರ ಕುಸಿದಿದೆ, ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸುವ ಬಿಜೆಪಿ ನಾಯಕರು, ಈ ಹಿಂದೆ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಹಾಕುತ್ತಿದ್ದಾಗ ಸರ್ಕಾರ ಸತ್ತಿದೆ ಎಂದು ಯಾಕೆ ಹೇಳಲಿಲ್ಲ? ಮಲ್ಲಿಕಾರ್ಜುನ ಖರ್ಗೆ ಅವರು ನಾಮಕಾವಸ್ಥೆ ಎಐಸಿಸಿ ಅಧ್ಯಕ್ಷರು ಎಂದು ಟೀಕಿಸುವ ಬಿಜೆಪಿಗರನ್ನು ಕುರಿತು ಜೆ.ಪಿ. ನಡ್ಡಾ ಮತ್ತು ನರೇಂದ್ರ ಮೋದಿ ನಾಮಕಾವಸ್ಥೆ ಪ್ರಧಾನಿ ಎಂದು ಆರೋಪಿಸಬಹುದೇ? ಎಂದು ಪ್ರಶ್ನಿಸಿದರು.

ಸ್ವಪಕ್ಷದ ನಡೆಗೆ ಗಣಿಹಾರ ಖಂಡನೆ

ಸರ್ಕಾರಿ ವೈದ್ಯಕೀಯ ಕಾಲೇಜ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂಬ ವಿಚಾರವನ್ನು ಖಂಡಿಸಿದ ಎಸ್.ಎಂ. ಪಾಟೀಲ ಗಣಿಹಾರ ಅವರು, ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಆಗಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ. ಹಾಗೊಂದು ವೇಳೆ ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲವೆಂದರೆ ಅದಕ್ಕೆ ನಮ್ಮ ಖಂಡನೆ ಇದೆ ಎಂದರು.
ಮುಂದುವರಿದು ತಮಗಿರುವ ಮಾಹಿತಿ ಪ್ರಕಾರ ಹೋರಾಟ ಸಮಿತಿಯವರು ಮುಖ್ಯಮಂತ್ರಿಗಳ ಭೇಟಿಗೆ ಹೋದಾಗ ಅವರ ಆರೋಗ್ಯ ಸರಿಯಿರಲಿಲ್ಲ, ಹೀಗಾಗಿ ಅವಸರದಲ್ಲಿ ಪರಿಪೂರ್ಣವಾಗಿ ಸಮಸ್ಯೆ ಆಲಿಸಲಾಗಿಲ್ಲ. ಬರುವ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವೊಲಿಸುವುದಾಗಿ ತಿಳಿಸಿದರು.
ಇನ್ನು ಆದಿಲ್ ಶಾಹಿ ಸುಲ್ತಾನರ ಕಾಲದ ಐತಿಹಾಸಿಕ ಸ್ಮಾರಕಗಳು ಸಂಪೂರ್ಣ ಹಾಳಾಗುತ್ತಿದ್ದು, ನಿರ್ಲಕ್ಷೃಕ್ಕೆ ಒಳಗಾಗಿವೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಈ ಸ್ಮಾರಕಗಳು ನಿರ್ಲಕ್ಷೃಕ್ಕೆ ತುತ್ತಾಗುತ್ತಿವೆ. ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಚರ್ಚಿಸಿ ದಿಟ್ಟ ಹೆಜ್ಜೆಯನ್ನಿರಿಸಲಾಗುವುದು ಎಂದರು.

ಸಮುದಾಯಗಳ ಬೇಡಿಕೆ ಸಹಜ

ಮುಖಂಡ ಡಾ.ರವಿ ಬಿರಾದಾರ ಮಾತನಾಡಿ, ಸಿಎಂ ಸ್ಥಾನಕ್ಕೆ ಬೇಡಿಕೆ ಇರಿಸುವುದು ಮತ್ತು ಕೆಲವು ಸಮುದಾಯಗಳು ಹಕ್ಕೊತ್ತಾಯ ಮಂಡಿಸುವುದು ಸಾಮಾನ್ಯ. ಲಿಂಗಾಯತರಲ್ಲಿಯೂ ಎಂ.ಬಿ. ಪಾಟೀಲರು ಸಿಎಂ ಆಗಬೇಕೆಂಬ ಮನದಿಂಗಿತ ಇದೆ. ಭವಿಷ್ಯದಲ್ಲಿ ಅವರು ಸಿಎಂ ಆಗುವರೆಂಬ ಆಶಾಭಾವ ಕೂಡ ಇದೆ. ಹಾಗಂತ ಸದ್ಯಕ್ಕೆ ಜಾತಿಯಾಧಾರಿತವಾಗಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸಲಾಗುತ್ತದೆಯೇ? ಎಲ್ಲ ಸಮುದಾಯದವರಿಗೂ ಅವಕಾಶ ಸಿಗಬೇಕು. ಆದರೆ, ಸದ್ಯಕ್ಕೆ ಸಿಎಂ ಬದಲಾವಣೆ ಚರ್ಚೆ, ಆರೋಪ ಮತ್ತು ಪ್ರತ್ಯಾರೋಪಗಳು ಅಪ್ರಸ್ತುತ ಎಂದರು.
ಮುಖಂಡ ಫಯಾಜ್ ಕಲಾದಗಿ, ವಸಂತ ಹೊನಮೋಡೆ ಮತ್ತಿತರರಿದ್ದರು.