ಮಾಜಿ ಶಾಸಕ ಪಿ.ರಾಜೀವ ಸುದ್ದಿಗೋಷ್ಠಿ
- ಮಾಜಿ ಶಾಸಕ ಪಿ.ರಾಜೀವ ಸುದ್ದಿಗೋಷ್ಠಿ
- ರಾಜ್ಯಾದ್ಯಂತ ಕಾರ್ಯಕರ್ತರ ಆಗಮನ
- ಯಡಿಯೂರಪ್ಪ ಸಾಧನೆಯ ಸ್ಮರಣೆ
ವಿಜಯಪುರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಚಿತ್ರದುರ್ಗ ಸಜ್ಜಾಗಿದ್ದು, ಮೇ 9ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯಿಂದ ಅಂದಾಜು 20 ಸಾವಿರ ಜನ ಭಾಗವಹಿಸಲಿದ್ದಾರೆಂದು ಮಾಜಿ ಶಾಸಕ ಪಿ.ರಾಜೀವ ಹೇಳಿದರು.
ಯಡಿಯೂರಪ್ಪ ನಾಡು ಕಂಡ ಶ್ರೇಷ್ಠ ಹೋರಾಟಗಾರ. ಯಾವ ವಿಷಯಗಳಿಗಾಗಿ ಹೋರಾಟ ಮಾಡಿದ್ದರೋ ಆ ವಿಷಯಗಳನ್ನು ಅಧಿಕಾರಕ್ಕೆ ಬರುತ್ತಿದ್ದಂತೆ ಈಡೇರಿಸಿದ ಧೀಮಂತ ನಾಯಕ. ಹೀಗಾಗಿ ಅವರನ್ನು ಹೃದಯಸ್ಪರ್ಶಿಯಾಗಿ ಅಭಿನಂದಿಸುವ ದೃಷ್ಠಿಯಿಂದ ಈ ಸಮಾವೇಶ ಹಮ್ಮಿಕೊಂಡಿರುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಭಾಗ್ಯಲಕ್ಷ್ಮಿ, ಮಕ್ಕಳಿಗೆ ಸೈಕಲ್ ವಿತರಣೆ ಹೀಗೆ ಅನೇಕ ಮಹತ್ತರ ಯೋಜನೆಗಳ ಮೂಲಕ ಕರ್ನಾಟಕದ ಕಲ್ಯಾಣಕ್ಕಾಗಿ ಶ್ರಮಿಸಿದ ಯಡಿಯೂರಪ್ಪನವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಹೀಗಾಗಿ ನಾಡಿನ ಹಲವಾರು ಮಠಾಧೀಶರು, ಯಡಿಯೂರಪ್ಪ ಅವರ ಹೋರಾಟದಲ್ಲಿ ಹೆಜ್ಜೆ ಹಾಕಿದ ಒಡನಾಡಿಗಳು ಎಲ್ಲರೂ ಈ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮೀತ್ ಷಾ ಸೇರಿ ಅನೇಕ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ, 12 ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ, ಬಿಸಿಲಿನ ಹಿನ್ನೆಲೆಯಲ್ಲಿ ವಾತಾನುಕೂಲ ರೂಪದ ಶಾಮಿಯಾನ ಅಳವಡಿಕೆ ಹೀಗೆ ವಿವಿಧ ಸಿದ್ಧತೆಗಳು ಭರದಿಂದ ಸಾಗಿವೆ ಎಂದರು.
ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಬಿಜೆಪಿಯನ್ನು ಸಂಘಟನಾತ್ಮಕವಾಗಿ ಕಟ್ಟಿದ ಬಿ.ಎಸ್. ಯಡಿಯೂರಪ್ಪ ಒಂದು ಆಧಾರಸ್ತಂಭ, ಪ್ರತಿಯೊಬ್ಬ ಕಾರ್ಯಕರ್ತ, ಪದಾಧಿಕಾರಿಗಳು ಅಭಿಮಾನದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ, ಯಡಿಯೂರಪ್ಪ ಒಬ್ಬ ಅಜಾತಶತ್ರು, ಸಕಲ ಧರ್ಮಗಳನ್ನು ಗೌರವದಿಂದ ಕಂಡ ನಾಯಕ, ಅವರ ಅಭಿಮಾನೋತ್ಸವ ಕಾರ್ಯಕರ್ತರಿಗೆ, ಅಭಿಮಾನಿಗಳ ಪಾಲಿಗೆ ಉತ್ಸವ ಹಾಗೂ ಹಬ್ಬದ ಸ್ವರೂಪ ಎಂದರು.
ಕೃಷ್ಣಾ ಮೇಲ್ದಂಡೆ ಬಿ ಸ್ಕೀಂ, ಕೆರೆಗಳಿಗೆ ನೀರು ತುಂಬುವ ಯೋಜನೆ, ಚಿಮ್ಮಲಗಿ ಏತ ನೀರಾವರಿಗೆ ಆಡಳಿತಾತ್ಮಕ ಅನುಮೋದನೆ ಹೀಗೆ ಅವರು ಜಿಲ್ಲೆಗೆ ಅವರು ನೀಡಿದ ಕೊಡುಗೆ ಅನನ್ಯ, ಕೆಲವರು ಯಡಿಯೂರಪ್ಪ ಅವರ ಕೊಡುಗೆ ಜಿಲ್ಲೆಗೆ ಇಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ಅವರು ಕೊಟ್ಟ ಕೊಡುಗೆ ಯಾವ ಮುಖ್ಯಮಂತ್ರಿಯೂ ನೀಡಿಲ್ಲ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಅತಿವೃಷ್ಟಿ ಬಂದಾಗ ವಿಜಯಪುರದಲ್ಲಿ ದೊಡ್ಡ ಹೋರಾಟ ಮಾಡಿದ್ದ ಯಡಿಯೂರಪ್ಪ ಅವರು ಅನೇಕ ಬಾರಿ ಬಸ್ ಮೂಲಕ ವಿಜಯಪುರ ಜಿಲ್ಲೆಗೆ ಆಗಮಿಸಿ ಪಕ್ಷ ಸಂಘಟಿಸಿದ ನಿದರ್ಶನಗಳಿವೆ. ಯಡಿಯೂರಪ್ಪ ಅವರ ಪ್ರಯತ್ನದಿಂದಾಗಿಯೇ ವಿಜಯಪುರದಲ್ಲಿ ಕಮಲ ಅರಳುವಂತಾಗಿದೆ ಎಂದರು.
ವಿಜುಗೌಡ ಪಾಟೀಲ ಮಾತನಾಡಿ, ಆಟೋರಿಕ್ಷಾ, ಟಾಂಗಾ, ಬಸ್, ಸೈಕಲ್ ಮೂಲಕವೂ ಸಂಚರಿಸಿ ಬಿಜೆಪಿ ಪಕ್ಷವನ್ನು ಬೇರುಮಟ್ಟದಿಂದ ಬೆಳೆಸಿದ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮುಖಂಡರಾದ ಉಮೇಶ ಕಾರಜೋಳ, ಸಂಜಯ ಪಾಟೀಲ, ರಮೇಶ ಭೂಸನೂರ, ಕಾಸುಗೌಡ ಬಿರಾದಾರ ಇತರರಿದ್ದರು.