- ರಾಣಿ ಚನ್ನಮ್ಮ ಪ್ರತಿಮೆ ಲೋಕಾರ್ಪಣೆ
- ಕೇಂದ್ರ ಬಸ್ ನಿಲ್ದಾಣ ಎದುರು ಉದ್ಘಾಟನೆ
- ಜ. 9 ರಂದು ನಡೆಯಲಿರುವ ಕಾರ್ಯಕ್ರಮ
ವಿಜಯಪುರ: ಸ್ವಾತಂತ್ರೃ ಹೋರಾಟಗಾರ್ತಿ, ವೀರರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆ ಲೋಕಾರ್ಪಣೆಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಷ್ಟಾಪಿಸಿರುವ ಕಿತ್ತೂರು ಚನ್ನಮ್ಮಳ ಬೃಹತ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಜ.9 ರಂದು ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಲಾಗಿದೆ ಮಾಹಿತಿ ಇದ್ದು, ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರಿಂದ ಪ್ರತಿಮೆ ಲೋಕಾರ್ಪಣೆಗೆ ಅವಕಾಶ ಕೊಡಬಾರದೆಂಬ ತೀರ್ಮಾನ ಪ್ರಕಟಗೊಂಡಿದೆ.
ಕಾರ್ಯಕ್ರಮ ಹಿನ್ನೆಲೆ ಸೋಮವಾರ ನಗರದ ಕಿತ್ತೂರು ಚನ್ನಮ್ಮ ಸಮುದಾಯ ಭವನದಲ್ಲಿ ಸಭೆ ಸೇರಿದ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್‌ನ ಪದಾಧಿಕಾರಿಗಳು ‘ಸಿಎಂ ಸಿದ್ದರಾಮಯ್ಯ ಅವರಿಂದ ಪ್ರತಿಮೆ ಲೋಕಾರ್ಪಣೆಗೆ ಅವಕಾಶ ಬೇಡ’ ಎಂಬ ನಿರ್ಧಾರ ಪ್ರಕಟಿಸಿದ್ದಾರೆ.
ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಬೆಳಗಾವಿಯಲ್ಲಿ ನಡೆದ ಮೀಸಲಾತಿ ಹೋರಾಟದಲ್ಲಿ ಸಮಾಜದ ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಲಾಠಿ ಚಾರ್ಜ್ ಮಾಡಿಸಿದ್ದ ಕಾರಣ ಸಿದ್ದರಾಮಯ್ಯ ಅವರಿಂದ ಮೂರ್ತಿ ಲೋಕಾರ್ಪಣೆ ಮಾಡಬಾರದು ಎಂಬ ಆಕ್ರೋಶ ವ್ಯಕ್ತವಾಗಿದೆ.
ಸಿಎಂ ಅವರಿಗೆ ಸಮಾಜದ ಕುರಿತು ಕಳಕಳಿ ಇದ್ದರೆ, ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಹೋರಾಟದಲ್ಲಿ ಪಂಚಮಸಾಲಿ ಸಮಾಜದ ಜನರ ಮೇಲೆ ಹಾಕಿದ ಎಲ್ಲ ಕೇಸಗಳನ್ನು ಹಿಂಪಡೆದುಕೊಳ್ಳಬೇಕು ಮತ್ತು ಹಲ್ಲೆಗೆ ಒಳಗಾದ ಎಲ್ಲ ಜನರಿಗೆ ನೆರವು ನೀಡಬೇಕು. ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಯವರಿಗೆ ಕ್ಷಮೆ ಕೋರಬೇಕೆಂದು ಆಗ್ರಹಿಸಲಾಗಿದ್ದು, ಇದಕ್ಕೆ ಒಪ್ಪದೇ ಪ್ರತಿಮೆ ಲೋಕಾರ್ಪಣೆಗೆ ಮುಂದಾದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂಬ ಸಂದೇಶ ರವಾನಿಸಲಾಗಿದೆ ಎಂದು ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಮುಖಂಡ ಶ್ರೀಶೈಲ ಮುಳಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.