ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಿಇಒ ರಿಷಿ ಆನಂದ ವಿಡಿಯೋ ಸಂವಾದ ನಡೆಸಿದರು. ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಂಜಯ ಕೋಟೆನ್ನವರ ಇದ್ದಾರೆ.
- ಅಧಿಕಾರಿಗಳಿಗೆ ಸಿಇಒ ರಿಷಿ ಆನಂದ ಸೂಚನೆ
- ಜಿಲ್ಲಾ ಪಂಚಾಯಿತಿಯಲ್ಲಿ ವಿಡಿಯೋ ಸಂವಾದ
- ವಿಜಯಪುರದಲ್ಲಿ ಹೆಚ್ಚುತ್ತಿರುವ ತಾಪಮಾನ ಹಿನ್ನೆಲೆ
ವಿಜಯಪುರ: ಜಿಲ್ಲೆಯಲ್ಲಿ ತಾಪಮಾನದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಜನ-ಜಾನವಾರುವಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗೃತೆ ಕ್ರಮ ಕೈಗೊಳ್ಳಲು ಸಿಇಒ ರಿಷಿ ಆನಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಸೋಮವಾರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗಬಾರದು. ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಎಲ್ಲ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಮೂಲಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದರು.
ಹಾಳಾಗಿರುವ ಪಂಪ್‌ಸೆಟ್‌ಗಳು ಹಾಗೂ ಪೈಪ್ ಲೈನ್‌ಗಳನ್ನು ತಕ್ಷಣ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ಸಮಸ್ಯಾತ್ಮಕ ಗ್ರಾಮಗಳ ಮೇಲೆ ಹೆಚ್ಚು ನಿಗಾ ವಹಿಸಬೇಕು. ಎಲ್ಲ ತಾಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆಗಳು ಸ್ಥಗಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಗುಣಮಟ್ಟ ಪರೀಕ್ಷಿಸಿ
ಮುಂಬರುವ ದಿನಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬಹುದಾದ ಗ್ರಾಮಗಳ ಪಟ್ಟಿ ತಯಾರಿಸಿ ಎರಡು ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪೂರ್ವ ಕಡ್ಡಾಯವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಕ್ಷೇತ್ರ ಪರೀಕ್ಷಾ ಕಿಟ್‌ಮೂಲಕ ನೀರನ್ನು ತಪ್ಪದೇ ಪರೀಕ್ಷೆ ಮಾಡಬೇಕು. ಗ್ರಾಮೀಣ ಜನತೆಗೆ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಟಾಸ್ಕ್‌ಫೋರ್ಸ್ ಸಭೆ ನಡೆಸಿ
ತಾಲೂಕು ಹಂತದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ನಡೆಸಿ ಕುಡಿಯುವ ನೀರಿನ ನಿರ್ವಹಣೆ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ನೀರು ವ್ಯರ್ಥವಾಗುವುದನ್ನು ತಡೆಯಲು ಸ್ವಚ್ಛ ಭಾರತ ಮಿಷನ್(ಗ್ರಾಮೀಣ) ಯೋಜನೆಯ ಸ್ವಚ್ಛ ವಾಹಿನಿಗಳ ಮೂಲಕ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ನೀರಿನ ಸರಬರಾಜು ವ್ಯತ್ಯಯ ಉಂಟಾದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ಜಲಧಾರೆ ಯೋಜನೆ 1 ಮತ್ತು 2 ಅಡಿ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಕುರಿತಂತೆ ಖಾಲಿ ಸ್ಥಳ ಗುರುತಿಸುವಿಕೆ ಕೆಲಸ ಕೂಡಲೇ ಪೂರ್ಣಗೊಳ್ಳಬೇಕು ಎಂದರು.
ಉದ್ಯೋಗ ಖಾತ್ರಿ ಯೋಜನೆ
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಬೇಕು. ಪ್ರಸ್ತುತ ಬೇಸಿಗೆ ಇರುವುದರಿಂದ ಗ್ರಾಮೀಣ ಜನರಿಗೆ ಉದ್ಯೋಗದ ಕೊರತೆ ಇರುವುದರಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗರಿಷ್ಠ ಕೂಲಿಕಾರರಿಗೆ ಉದ್ಯೋಗ ಒದಗಿಸಿ, ನಿಗದಿತ ಗುರಿಗೆ ಎದುರಾಗಿ ಮಾನವದಿನಗಳ ಸೃಜನೆ ಮಾಡಬೇಕು. ಯೋಜನೆಯಡಿ ನೋಂದಾಯಿತ ಕೂಲಿಕಾರರ ಇ-ಕೆವೈಸಿ ಬಾಕಿ ಉಳಿದಿರುವ ಕೂಲಿಕಾರರ ಇ-ಕೆವೈಸಿಯನ್ನು ಇದೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸಿಇಒ ರಿಷಿ ಆನಂದ ಸೂಚಿಸಿದರು.
ನಂತರ ಗ್ರಾಪಂ ಹಂತದಲ್ಲಿ ತೆರಿಗೆ ಸಂಗ್ರಹಣೆ ಕುರಿತಂತೆ, ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಪ್ರತಿ ತಿಂಗಳು ಕನಿಷ್ಠ ಶೇ.10 ರಷ್ಟು ಗುರಿ ನಿಗದಿಪಡಿಸಿಕೊಂಡು ಕಡ್ಡಾಯವಾಗಿ ತೆರಿಗೆ ವಸೂಲಾತಿ ಪ್ರಗತಿ ಸಾಧಿಸಬೇಕು. ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಯವರು ಪ್ರತಿದಿನ ಕಡ್ಡಾಯವಾಗಿ ಇ-ಹಾಜರಾತಿ ಮೂಲಕ ತಮ್ಮ ತಮ್ಮ ಹಾಜರಾತಿಯನ್ನು ಸಲ್ಲಿಸಬೇಕು. ಪ್ರತಿದಿನ ಇ-ಹಾಜರಾತಿ ಪರಮಾಣವು ಶೇ.100 ರಷ್ಟು ಇರುವಂತೆ ಕ್ರಮಕೈಗೊಳ್ಳಬೇಕು ಎಂದರು.
ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಂಜಯ ಕೋಟೆನ್ನವರ ಇತರರಿದ್ದರು.