DDPI-OFFICE 
ವಿಜಯಪುರ

ಶಿಕ್ಷಣ ಇಲಾಖೆಯಲ್ಲಿ ಅಕ್ರಮ ಪ್ರಕರಣ, ಶಿಸ್ತು ಕ್ರಮಕ್ಕೆ ಸಿಇಒ ಶಿಫಾರಸು

ಪ್ರಮುಖ ಮುಖ್ಯಾಂಶಗಳು

  • ಶಾಲೆಗಳ ಪ್ರಥಮ ಮಾನ್ಯತೆ
  • ಮಾನ್ಯತೆ ನವೀಕರಣ ಪ್ರಕರಣ
  • ಜಿಲ್ಲಾ ಪಂಚಾಯಿತಿಯಿಂದ ತನಿಖೆ
  • ಶಿಕ್ಷಣ ಇಲಾಖೆಗೆ ವರದಿ ಸಲ್ಲಿಕೆ
ವಿಜಯಪುರ: ಕಳೆದೊಂದು ತಿಂಗಳಿನಿಂದ ತೀವ್ರ ಸಂಚಲನ ಮೂಡಿಸಿರುವ ಹಾಗೂ ರಾಜ್ಯಮಟ್ಟದಲ್ಲಿ ಚರ್ಚೆಗೆ ಕಾರಣವಾಗಿರುವ ‘ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಪ್ರಕರಣದ ಅಕ್ರಮ’ಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಜಿಲ್ಲಾ ಪಂಚಾಯಿತಿ ಶಾಲೆ ಶಿಕ್ಷಣ ಇಲಾಖೆಗೆ ವರದಿಯೊಪ್ಪಿಸಿ ಕ್ರಮಕ್ಕೆ ಶಿಫಾರಸ್ಸು ಮಾಡಿದೆ.
ಕಳೆದ ವಾರವೇ ವರದಿ ರವಾನಿಸಿರುವ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಸಮಗ್ರ ತನಿಖೆ ಕೈಗೊಳ್ಳಲಾಗಿ ಹಲವು ಲೋಪ-ದೋಷಗಳು ಕಂಡು ಬಂದಿವೆ. ದಾಖಲೆಗಳ ಪರಿಶೀಲನೆ ನಡೆಸಲಾಗಿ ಲೋಪಗಳಿದ್ದು, ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ. ವರದಿಯ ಪ್ರತಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಧಾರವಾಡದ ಅಪರ ಆಯುಕ್ತರ ಕಚೇರಿಗೆ ರವಾನಿಸಲಾಗಿದೆ.
ಶಾಲೆಗಳ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಕೂಡ ಚರ್ಚೆಯಾಗಿತ್ತು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ವಿಪ ಸದಸ್ಯ ಕೇಶವ ಪ್ರಸಾದ ಈ ಕುರಿತು ಬೆಳಕು ಚೆಲ್ಲಿದ್ದರು. ಆಗ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದರು. ಇದಕ್ಕೂ ಮುನ್ನವೇ ಜಿಲ್ಲಾ ಪಂಚಾಯಿತಿಯಿಂದ ಈ ಕುರಿತು ತನಿಖೆಗೆ ಮುಂದಾಗಿತ್ತು. 2025 ಆಗಸ್ಟ್‌ನಲ್ಲಿಯೇ 5 ಜನರ ತಂಡ ರಚಿಸಲಾಗಿತ್ತು. ಮುಂದುವರಿದ ಭಾಗವಾಗಿ ‘ವಿಜಯವಾಣಿ’ಯಲ್ಲಿ ನಿರಂತರವಾಗಿ ವರದಿ ಪ್ರಕಟಿಸುವ ಮೂಲಕ ಅಕ್ರಮದ ಕುರಿತು ಬೆಳಕು ಚೆಲ್ಲುತ್ತಿದ್ದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿತು. ಇದೀಗ ತನಿಖಾ ವರದಿಯೊಪ್ಪಿಸಿರುವುದಾಗಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಪರಿಶೀಲನೆ ವೇಳೆ ಕಂಡಿದ್ದೇನು?

ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿಯಿಂದ ರಚಿಸಲಾಗಿರುವ ಐವರ ತಂಡ 2-3 ಬಾರಿ ಶಾಲೆಗಳಿಗೆ ಹಾಗೂ ಶಿಕ್ಷಣ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆನ್‌ಲೈನ್‌ನಲ್ಲಿ ಕೂಡ ಪರಿಶೀಲಿಸಿದ್ದು ದಾಖಲೆಗಳು ಅಸಮರ್ಪಕವಾಗಿರುವುದು ಕಂಡು ಬಂದಿದೆ. 2023-24 ಹಾಗೂ 2025-26ನೇ ಸಾಲಿನಲ್ಲಿ ಪ್ರಥಮ ಮಾನ್ಯತೆ ನೀಡಿರುವ ಹಾಗೂ ಮಾನ್ಯತೆ ನವೀಕರಿಸಿರುವ ದಾಖಲೆ ಪರಿಶೀಲನೆ ನಡೆಸಲಾಗಿದೆ. ಒಟ್ಟು 411 ಅನುದಾನ ರಹಿತ ಶಾಲೆಗಳ ಪ್ರಾರಂಭಕ್ಕೆ ಪ್ರಥಮ ಮಾನ್ಯತೆ ನೀಡಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಅಂದಾಜು 274 ಅರ್ಜಿಗಳು ಪುರಸ್ಕೃತವಾಗಿರುವುದು ಕಂಡು ಬಂದಿದೆ. ಸುಮಾರು 133 ಅರ್ಜಿಗಳು ತಿರಸ್ಕೃತಗೊಂಡಿದ್ದು, 4 ಅರ್ಜಿಗಳು ಬಾಕಿ ಇವೆ. ಅನುದಾನಿತ ಶಾಲೆಗಳಿಂದ 284 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ 215 ಪುರಸ್ಕೃತಗೊಂಡರೆ 28 ಅರ್ಜಿ ತಿರಸ್ಕೃತಗೊಂಡಿವೆ. 
ಇನ್ನು ಮಾನ್ಯತೆ ನವೀಕರಣಕ್ಕಾಗಿ ಸಲ್ಲಿಕೆಯಾಗಿರುವ 918 ಅರ್ಜಿಗಳ ಪೈಕಿ 885ಪುರಸ್ಕೃತಗೊಂಡಿರುವುದು ಕಂಡು ಬಂದಿದೆ. ಈ ಅವಧಿಯಲ್ಲಿ ನಾಲ್ವರು ಡಿಡಿಪಿಐ, ಇಬ್ಬರು ಕಚೇರಿ ಗೆಜೆಟೆಡ್ ಮ್ಯಾನೇಜರ್ ಹಾಗೂ ವಿಷಯ ನಿರ್ವಾಹಕರು ಕಾರ್ಯನಿರ್ವಹಿಸಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

ನಿಯಮ ಉಲ್ಲಂಘನೆ ಸ್ಪಷ್ಟ

ಸುತ್ತೋಲೆ ಪ್ರಕಾರ ವಿಷಯ ನಿರ್ವಾಹಕರು, ಪತ್ರಾಂಕಿತ ವ್ಯವಸ್ಥಾಪಕರು ಹಾಗೂ ಗೆಜೆಟೆಡ್ ಮ್ಯಾನೇಜರ್‌ಗಳು ಅರ್ಜಿಗಳನ್ನು ಪರಿಶೀಲಿಸಿ ಡಿಡಿಪಿಐಗೆ ಅಭಿಪ್ರಾಯ ಸಲ್ಲಿಸಬೇಕು. ಬಳಿಕ ಡಿಡಿಪಿಐ ಪರಿಶೀಲಿಸಿ ಅನುಮೋದಿಸುವ ಮೂಲಕ ನವೀಕರಣ ಮಾಡಬಹುದಾಗಿದೆ. ಆದರೆ, ಇಲ್ಲಿ ಯಾವುದೇ ಕಡತ, ದಾಖಲೆ ಪರಿಶೀಲಿಸದೇ ನಿಯಮ ಗಾಳಿಗೆ ತೂರಿ ಡಿಡಿಪಿಐಗಳು ಶಾಲೆ ತೆರೆಯಲು ಅನುಮತಿ ನೀಡಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಧಾರವಾಡದ ಅಪರ ಆಯುಕ್ತರಿಗೆ ಪತ್ರ ರವಾನಿಸಿರುವ ಮಾಹಿತಿ ಲಭ್ಯವಾಗಿದೆ.
"

ಶಿಕ್ಷಣ ಇಲಾಖೆಯಲ್ಲಿ ಕಂಡು ಬಂದಿರುವ ಶಾಲೆಗಳಿಗೆ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣದಲ್ಲಾದ ಲೋಪ-ದೋಷಗಳಿಗೆ ಸಂಬಂಧಿಸಿದಂತೆ ಐವರ ತಂಡ ಅನಿಖೆ ಪೂರ್ಣಗೊಳಿಸಿದೆ. ಲೋಪ-ದೋಷಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿ ವರದಿಯೊಪ್ಪಿಸಲಾಗಿದೆ. ಕಠಿಣ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.