ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ವಿಕಲಚೇತನರ ವಿಶ್ವ ದಿನಾಚರಣೆ’ಯನ್ನು ಜಿಲ್ಲಾಧಿಕಾರಿ ಡಾ.ಆನಂದ ಕೆ ಉದ್ಘಾಟಿಸಿದರು. ಜಿಪಂ ಸಿಇಒ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ, ಎಸ್.ಎನ್. ಬಸವರೆಡ್ಡಿ ಮತ್ತಿತರರಿದ್ದಾರೆ. 
ವಿಜಯಪುರ

ವಿಕಲಚೇತನರ ವಿಶ್ವ ದಿನ ಆಚರಣೆ, ಜಿಲ್ಲಾಧಿಕಾರಿ ಡಾ. ಆನಂದ.ಕೆ ಭರವಸೆ, ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ

ಪ್ರಮುಖ ಮುಖ್ಯಾಂಶಗಳು

  • ಅಂಗ ವಿಕಲರಿಗೆ ಪ್ರಥಮಾದ್ಯತೆ ಮೇರೆಗೆ ಮೂಲ ಸೌಕರ್ಯ
  • ಜಿಲ್ಲಾಧಿಕಾರಿ ಡಾ.ಆನಂದ ಕೆ ಭರವಸೆ
  • ಅಂಗ ವಿಕಲರಿಗೆ ಮುಖ್ಯವಾಹಿನಿಗೆ ತರಲು ಪ್ರಯತ್ನ
ವಿಜಯಪುರ: ಸರ್ಕಾರಿ ಕಚೇರಿ, ಸಾರ್ವಜನಿಕ ಕಟ್ಟಡಗಳಲ್ಲಿ ಅಂಗ ವಿಕಲರಿಗೆ ಪ್ರಥಮಾದ್ಯತೆ ಮೇರೆಗೆ ಮೂಲ ಸೌಕರ್ಯ ಕಲ್ಪಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಭರವಸೆ ನೀಡಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಅಂಗವಿಕಲರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಕಲಚೇತನರ ವಿಶ್ವ ದಿನಾಚರಣೆ’ಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಂಗವಿಕಲರ ಅಭಿವೃದ್ಧಿಗಾಗಿ ‘ವಿಕಲಚೇತನರ ಹಕ್ಕುಗಳ ಕಾಯ್ದೆ 2016’ರನ್ವಯ ಅಂಗವಿಕಲರಿಗೆ ಅನುಕಂಪ ತೊರದೇ ಅವರಿಗೆ ಅವಕಾಶಗಳನ್ನು ನೀಡಿ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು. ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ಸಮಸ್ಯೆ ಆಲಿಸಲಾಗಿದೆ. ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲು ತಾಲೂಕು ಮಟ್ಟದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ, ಪರಿಹಾರಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಅನುದಾನದ ಸದ್ಭಳಕೆ

ಅಂಗವಿಕಲರಿಗೆ ಮೀಸಲಿಟ್ಟ ಶೇ.5ರಷ್ಟು ಅನುದಾನವನ್ನು ವಿವಿಧ ಯೋಜನೆಗಳಡಿ ಬಳಕೆಯಾಗಿರುವ ಕುರಿತು ಪ್ರದರ್ಶನಾ ಫಲಕಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕರು ವೀಕ್ಷಿಸುವ ಅನುಕೂಲಕ್ಕಾಗಿ ಕ್ರಮವಹಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಹಾಗೂ ಮತಗಟ್ಟೆಯಲ್ಲಿ ವೈಜ್ಞಾನಿಕವಾಗಿ ರ‌್ಯಾಂಪ್ ಅಳವಡಿಸಿರುವ ಕುರಿತು, ಸರ್ಕಾರ ನಿಗದಿ ಪಡೆಸಿದ ಗುರಿಯನ್ವಯ ಆದ್ಯತೆ ಮೇರೆಗೆ ವಸತಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಯುಡಿಐ ಹೊಂದಿರದ ಫಲಾನುಭವಿಗಳಿಗೆ ಒಗ್ಗೂಡಿಸಿ ಶಿಬಿರ ಆಯೋಜಿಸಿ ಗುರುತಿನ ಕಾರ್ಡ್ ವಿತರಣೆಗೂ ಕ್ರಮವಹಿಸಲಾಗಿದೆ. ಅರ್ಹರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ಹೇಳಿದರು.

ಪ್ರೇರಣಾದಾಯಕ ನುಡಿ

ಸರ್ಕಾರ ಅನುಷ್ಠಾನಗೊಳಿಸುವ ಯೋಜನೆಗಳ ಲಾಭ ಪಡೆದು ಸ್ವಾವಲಂಬಿಯಾಗಿ ಜೀವನ ನಿರ್ವಹಿಸಿ. ಜೀವನದಲ್ಲಿ ಆಶಾಭಾವನೆ ಹೊಂದುವ ಮೂಲಕ ಸಾಧಕರನ್ನು ಪ್ರೇರಣೆ ಹೊಂದಬೇಕು. ಸಮಸ್ಯೆಗಳಿಗೆ ಕುಗ್ಗದೇ ಅವುಗಳನ್ನು ಎದುರಿಸಿ ಮಾನಸಿಕ ಸದೃಢತೆ ಮೂಲಕ ಸಾಧನೆ ಮಾಡಿ, ಆತ್ಮವಿಶ್ವಾಸ ಹೊಂದಿ ಮುನ್ನಡೆಯಬೇಕು. ತಾವು ಹೊಂದಿರುವ ಪ್ರತಿಭೆಯಿಂದ ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಾಧನೆ ಮಾಡಿ ಎಂದು ಅಂಗವಿಕಲರಿಗೆ ಹೇಳಿದರು.

ಸಮಸ್ಯೆಗೆ ತ್ವರಿತ ಸ್ಪಂದನೆ

ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಆತ್ಮವಿಶ್ವಾಸ ಅಗತ್ಯ. ಸಕಾರಾತ್ಮವಾಗಿ ಯೋಚನೆ ಮಾಡಿ ಸಮಸ್ಯೆಗಳಿಂದ ಹೊರ ಬಂದು ಉತ್ತಮ ಸುಗಮ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಬೇಕು. ತಮ್ಮ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನಮ್ಮನ್ನು ಅಥವಾ ಸಂಬಂಧಿಸಿದ ಅಧಿಕಾರಿಗಳಿಗೆ ಸಂಪರ್ಕಿಸಿ ಸಮಸ್ಯೆಗಳನ್ನು ಇತ್ಯರ್ಥ ಪಡೆಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಸಹಾಯ-ಸಹಕಾರ ನೀಡಲಾಗುವುದು. ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲಾಗುವುದು ಎಂದರು.
ಈಗಾಗಲೇ ಅಂಗವಿಕಲರಿಗೆ ತಾಲೂಕು ಮಟ್ಟದಲ್ಲಿ ಕ್ರೀಡೆಗಳನ್ನು ಆಯೋಜಿಸಿ, ಪ್ರತಿಭಾನ್ವಿತ ಕ್ರೀಡಾಪಟುಗಳು ತಮ್ಮ ಆಸಕ್ತಿಯ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮವಾಗಿ ಪ್ರದರ್ಶನ ನೀಡಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ತೋರಬೇಕೆಂದು ಅಂಗವಿಕಲರಿಗೆ ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಮಾತನಾಡಿದರು. ಎಸ್.ಎನ್. ಬಸವರೆಡ್ಡಿ ಉಪನ್ಯಾಸ ನೀಡಿದರು. ಸಾಧಕರನ್ನು ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವಾಣ್, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಕೆ. ಚವಾಣ್, ಅಧಿಕಾರಿ ಜಗದೀಶ ಕೆ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ಲ ಹನುಮಂತರಾಯ ರಂಗಮಂದಿರದವರೆಗೆ ಇಂಧನ ಚಾಲಿತ ತ್ರಿಚಕ್ರವಾಹನಗಳ ಜಾಥಾ ನಡೆಯಿತು.