DDPI-OFFICE 
ವಿಜಯಪುರ

ಶಾಲೆ ಮಾನ್ಯತೆ ನವೀಕರಣಕ್ಕೆ ಪ್ರಕರಣ, ಡಿಡಿಪಿಐ ಕರ್ತವ್ಯ ಲೋಪ...ಬೇಜವಾಬ್ದಾರಿ !

ಪ್ರಮುಖ ಮುಖ್ಯಾಂಶಗಳು

  • ತಂತ್ರಾಂಶ ನಿರ್ವಹಣೆಯಲ್ಲಿ ವಿಫಲ
  • ಅರ್ಜಿ ಇತ್ಯರ್ಥ ಪಡಿಸಲು ವಿಳಂಬ
  • ಕಾರಣ ಕೇಳಿ ಎರಡು ಬಾರಿ ನೊಟೀಸ್
ವಿಜಯಪುರ: ‘ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಡಿಪಿಐ ಕರ್ತವ್ಯ ಲೋಪ, ಉದಾಸೀನತೆ ಮತ್ತು ಬೇಜವಾಬ್ದಾರಿತನ’ ಎದ್ದು ಕಾಣುತ್ತಿದೆ !
ಇದಕ್ಕೆ ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ ಎರಡು ಬಾರಿ ನೀಡಿದ ‘ಕಾರಣ ಕೇಳಿ ನೋಟಿಸ್’ ಸಾಕ್ಷಿಯಾಗಿದ್ದು. ನಿಗದಿತ ಅವಧಿಯಲ್ಲಿ ಅರ್ಜಿಗಳನ್ನು ಇತ್ಯರ್ಥಪಡಿಸದೇ ವಿಳಂಬ ನೀತಿ ಅನುಸರಿಸಿರುವ ಡಿಡಿಪಿಐಗೆ 2026ರ ಫೆ. 17 ಮತ್ತು ಮಾ.12ರಂದು ನೋಟಿಸ್ ನೀಡಲಾಗಿದ್ದು, ಅದರಲ್ಲಿ ಡಿಡಿಪಿಐ ಅನುಸರಿಸಿರುವ ವಿಳಂಬ ನೀತಿ, ಉದಾಸೀನತೆ ಹಾಗೂ ಬೇಜವಾಬ್ದಾರಿತನದ ಉಲ್ಲೇಖವಿದೆ.ಆಯುಕ್ತರ ಕಚೇರಿಯ ಈ ನೋಟಿಸ್‌ಗೆ ಡಿಡಿಪಿಐ ಉತ್ತರ ನೀಡಿದರಾ? ಎಂಬುದೇ ಸದ್ಯಕ್ಕಿರುವ ಯಕ್ಷಪ್ರಶ್ನೆ.

ಸುತ್ತೋಲೆಯ ಉಲ್ಲಂಘನೆ

2026ರ ಫೆ. 17 ಮತ್ತು ಮಾ.12ರಂದು ನೀಡಲಾಗಿರುವ ‘ಕಾರಣ ಕೇಳಿ ನೋಟಿಸ್’ ನಲ್ಲಿ ಸರ್ಕಾರದ ಸುತ್ತೋಲೆಯನ್ನು ಉಲ್ಲೇಖಿಸಿದ್ದು ‘ಯಾವುದೇ ಅರ್ಜಿಯನ್ನು ತಮ್ಮ ಲಾಗಿನ್‌ನಲ್ಲಿ ಪರಿಶೀಲಿಸಿ ಅನುಮೋದಿಸಿದಲ್ಲಿ ಅಥವಾ ತಿರಸ್ಕರಿಸಿದಲ್ಲಿ ಕಡ್ಡಾಯವಾಗಿ ಅದೇ ದಿನ ತಮ್ಮ ಡಿಎಸ್‌ಸಿ ಅಳವಡಿಸಿ ಪ್ರಮಾಣ ಪತ್ರ ಜನರೇಟ್ ಮಾಡುವುದು’ ಎಂಬ ಸ್ಪಷ್ಟ ನಿರ್ದೇಶನ ಇದ್ದರೂ ಡಿಎಸ್‌ಸಿ ಅನುಮೋದಿಸಿಲ್ಲ ಎಂದು ತಿಳಿಸಲಾಗಿದೆ.
ಅಲ್ಲದೇ, ‘ಆಯುಕ್ತರು ಹಾಗೂ ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ದೂರವಾಣಿ ಮೂಲಕ ಅರ್ಜಿ ಇತ್ಯರ್ಥ ಪಡಿಸಲು ಮೌಖಿಕವಾಗಿ ಅನೇಕ ಬಾರಿ ಆದೇಶಿಸಿದ್ದರೂ ನಿಮ್ಮ ಹಂತದಲ್ಲಿ ಸೂಕ್ತ ಕ್ರಮ ವಹಿಸಲು ವಿಫಲರಾಗಿರುತ್ತೀರಿ’ ಎಂದಿದ್ದಾರೆ. ಜೊತೆಗೆ ‘ನಿಗದಿತ ಅವಧಿಯಲ್ಲಿ ಅರ್ಜಿಗಳನ್ನು ಇತ್ಯರ್ಥಪಡಿಸದೇ (ಡಿಎಸ್‌ಸಿ ಅಳವಡಿಸದೇ) ವಿಳಂಬ ಮಾಡಿರುವುದು ಮತ್ತು ಉದಾಸೀನತೆ ಎಂದು ಪರಿಗಣಿಸಿದೆ. ಇದರಿಂದ ಇಲಾಖೆ ಮುಜುಗರಕ್ಕೀಡಾಗಿದೆ ಹಾಗೂ ಪಾರದರ್ಶಕವಾಗಿ ಶಾಲಾ ಸ್ನೇಹಿ ತಂತ್ರಾಂಶದ ನಿರ್ವಹಣೆಗೆ ಅಡಚಣೆಯನ್ನುಂಡು ಮಾಡಿರುತ್ತೀರಿ’ ಎಂದು ಅಸಮಾಧಾನ ತೋರಲಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ‘ಲಿಖಿತವಾಗಿ ವಿವರಣೆ ನೀಡಲು ಎರಡು ದಿನಗಳ ಕಾಲಾವಕಾಶ ನೀಡಿದ್ದು, ವಿವರಣೆಯನ್ನು ಖುದ್ದಾಗಿ ಸಲ್ಲಿಸಲು ತಿಳಿಸಲಾಗಿದೆ. ತಪ್ಪಿದ್ದಲ್ಲಿ ನೀವು ಹೇಳುವುದು ಏನೂ ಇಲ್ಲವೆಂದು ಭಾವಿಸಿ ವಿಳಂಬಕ್ಕೆ ಕಾರಣರಾದ ನಿಮ್ಮ ವಿರುದ್ಧ ಏಕಪಕ್ಷೀಯವಾಗಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲು ಶಿಸ್ತು ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದಿದೆ.
ಅಂದರೆ, ಡಿಡಿಪಿಐ ತಂತ್ರಾಂಶ ನಿರ್ವಹಣೆಯಲ್ಲಿ ವಿಫಲತೆಯೂ, ಶಾಲೆಗಳ ಮಾನ್ಯತೆ ನವೀಕರಣದಲ್ಲಿ ವಿಳಂಬ ನೀತಿಯೂ, ಕರ್ತವ್ಯ ಲೋಪ ಎಸಗಿದ್ದಾರೆಂಬುದಾಗಿಯೂ ವೇದ್ಯವಾಯಿತಲ್ಲವೇ?

ನುಣುಚಿಕೊಳ್ಳುವ ಯತ್ನ?

ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಬರತೊಡಗುತ್ತಿದ್ದಂತೆ ಡಿಡಿಪಿಐ ಅಳೆದು ತೂಗಿ ತಂತ್ರಾಂಶ ದುರುಪಯೋಗದ ಕುರಿತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯುತ್ತಾರೆ. ಆ ಪತ್ರ ಪರಿಶೀಲಿಸಿದ ಆಯುಕ್ತರು ಬಹಳ ಸ್ಪಷ್ಟವಾಗಿ ಮಾರ್ಗದರ್ಶನ ನೀಡಿದ್ದೇನೆಂದರೆ-‘ಮಾನ್ಯತೆ ನವೀಕರಿಸುವ, ಪ್ರಥಮ ಮಾನ್ಯತೆ ನೀಡುವ ಅಥವಾ ತಿರಸ್ಕರಿಸುವ ಸೂಕ್ತ ಪ್ರಾಧಿಕಾರ ತಾವೇ ಆಗಿರುತ್ತೀರಿ. ಈ ಕುರಿತಂತೆ ಅಕ್ರಮವಾಗಿರುವ ಕುರಿತು ಸೂಕ್ತ ದಾಖಲೆಗಳೊಂದಿಗೆ ಸಂಬಂಧಿಸಿದ ನೌಕರರು, ಅಧಿಕಾರಿಗಳ ವಿರುದ್ಧ ನಿಮ್ಮ ಹತ್ತಿರದ ಠಾಣೆ ಅಥವಾ ಸೈಬರ್ ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ’ ತಿಳಿಸಿದ್ದು. ಆದರೆ, ಎಫ್‌ಐಆರ್‌ನಲ್ಲಿ ಎಲ್ಲೂ ಸೂಕ್ತ ದಾಖಲೆ ಸಲ್ಲಿಸಿದ್ದಾಗಲಿ, ಸಂಬಂಧಿಸಿದ ಅಧಿಕಾರಿ ಅಥವಾ ನೌಕರರ ಹೆಸರು ಉಲ್ಲೇಖಿಸಿದ್ದಾಗಲಿ ಕಂಡು ಬಂದಿಲ್ಲ. ಆದರೆ, ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಅಸಲಿಗೆ ಸೂಕ್ತ ಪ್ರಾಧಿಕಾರ ಡಿಡಿಪಿಐ ಅವರೇ ಆಗಿದ್ದಾರೆಂದ ಮೇಲೆ ತಂತ್ರಾಂಶದ ಗೌಪ್ಯತೆಯ ವಿವರ ಅನ್ಯರು ಬಳಸಲು ಹೇಗೆ ಸಾಧ್ಯ? ಒನ್‌ಟೈಮ್ ಪಾಸ್‌ವರ್ಡ್ (ಒಟಿಪಿ)ಯಾರ ಮೊಬೈಲ್‌ಗೆ ಬರುತ್ತಿತ್ತು? ಅನುಮೋದನೆ ನೀಡಿದ್ದು ಯಾರು? ಸುತ್ತೋಲೆ ಪ್ರಕಾರ ‘ಯಾವುದೇ ಅರ್ಜಿಯನ್ನು ತಮ್ಮ ಲಾಗಿನ್‌ನಲ್ಲಿ ಪರಿಶೀಲಿಸಿ ಅನುಮೋದಿಸಿದಲ್ಲಿ ಅಥವಾ ತಿರಸ್ಕರಿಸಿದಲ್ಲಿ ಕಡ್ಡಾಯವಾಗಿ ಅದೇ ದಿನ ತಮ್ಮ ಡಿಎಸ್‌ಸಿ ಅಳವಡಿಸಿ ಪ್ರಮಾಣ ಪತ್ರ ಜನರೇಟ್ ಮಾಡುವುದು’ ಎಂದಿದ್ದು, ಆಗಲೇ ಡಿಡಿಪಿಐ ಗಮನಕ್ಕೆ ಬರದಿರಲು ಹೇಗೆ ಸಾಧ್ಯ? ಆ ಕ್ಷಣವೇ ಆಯುಕ್ತರಿಗೆ ಪತ್ರ ಬರೆಯದೇ ಮತ್ತು ಆಯುಕ್ತರ ಮಾರ್ಗದರ್ಶನ ಸಿಕ್ಕ ತಕ್ಷಣವೇ ದೂರು ದಾಖಲಿಸಿದೇ ವಿಳಂಬ ನೀತಿ ಅನುಸರಿಸಿದ್ದರ ಹಿಂದಿನ ಉದ್ದೇಶವೇನು? ಎಂಬಿತ್ಯಾದಿ ಸಾಲು ಸಾಲು ಪ್ರಶ್ನೆಗಳಿಗೆ ಸಮಗ್ರ ತನಿಖೆಯೊಂದೇ ಉತ್ತರ ನೀಡಬಲ್ಲುದು.