ಮೆಕ್ಕೆಜೋಳ ಖರೀದಿಗೆ ವಿಧಿಸಿದ ಮಾನದಂಡ ರದ್ದುಪಡಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಸದಾಶಿವ ಬಟರಗಿ, ಹೊನ್ನಪ್ಪ ಗೋಟ್ಯಾಳ ಮತ್ತಿತರರಿದ್ದಾರೆ. 
ವಿಜಯಪುರ

ಮೆಕ್ಕೆಜೋಳ ಖರೀದಿಗೆ ವಿಧಿಸಿದ ಮಾನದಂಡ ರದ್ದುಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಅಖಂಡ ಕರ್ನಾಟಕ ರೈತ ಸಂಘದಿಂದ ಮನವಿ ಸಲ್ಲಿಕೆ
ವಿಜಯಪುರ: ಮೆಕ್ಕೆಜೋಳ ಖರೀದಿಗೆ ವಿಧಿಸಿದ ಮಾನದಂಡ ರದ್ದುಪಡಿಸಿ ಜಿಲ್ಲೆಗಳಲ್ಲೇ ಖರೀದಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಗುರುವಾರ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರೈತರು ಬೆಳೆದ ಮೆಕ್ಕೆಜೋಳ ಖರೀದಿಸಲು ಸರ್ಕಾರ ಹಲವು ಮಾನದಂಡಗಳನ್ನು ವಿಧಿಸುವ ಮೂಲಕ ರೈತರ ಬದುಕು ಬೀದಿಗೆ ತರಲು ಹೊರಟಿದೆ. ಆಯಾ ಜಿಲ್ಲೆಯ ವ್ಯಾಪ್ತಿಯ ಪ್ರತಿಯೊಂದು ಪಿಕೆಪಿಎಸ್‌ಗೆ ನೀಡಿ ಅಲ್ಲೇ ಮೆಕ್ಕೆ ಜೋಳ ಖರೀದಿಸಬೇಕು. ಅದನ್ನು ಬಿಟ್ಟು ಧಾರವಾಡದಲ್ಲಿ ಖರೀದಿಸಲು ಸರ್ಕಾರ ನಿರ್ಧರಿಸುವುದು ಇದು ಸಂಪೂರ್ಣ ರೈತ ವಿರೋಧಿಯಾಗಿದೆ ಎಂದು ದೂರಿದರು.
ಅಲ್ಲದೆ, ರೈತರು ಮಾರಾಟ ಮಾಡುವ ಮೊದಲು ಮೆಕ್ಕೆಜೋಳ ಮಾದರಿ ಪರಿಷ್ಕರಣೆಗಾಗಿ ಪ್ರತಿಯೊಬ್ಬ ರೈತನಿಂದ ಒಂದು ಕೆ.ಜಿ. ಮೆಕ್ಕೆಜೋಳವನ್ನು ಧಾರವಾಡಕ್ಕೆ ಕಳುಹಿಸಲು ಕೆಎಂಎಫ್ ಅಧಿಕಾರಿಗಳ ಮೂಲಕ ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಟೆಸ್ಟ್ ಮಾಡಿಸಿ ನಂತರ ಗುಣಮಟ್ಟದ ಮೆಕ್ಕೆಜೋಳ ಎಂದು ತಿಳಿದಾಗ ಮಾತ್ರ ರೈತರಿಂದ ಖರೀದಿಸಲು ಸರ್ಕಾರ ತೀರ್ಮಾನಿಸಿದೆ. ಅಷ್ಟೇ ಅಲ್ಲದೆ, ಪ್ರತಿ ರೈತನಿಂದ 20 ಕ್ವಿಂಟಾಲ್‌ ಮೆಕ್ಕೆಜೋಳ ಖರೀದಿಸುವುದೆಂದು ಸರ್ಕಾರ ಹೇಳಿರುವ ಕ್ರಮ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡಕ್ಕೆ ಮೆಕ್ಕೆಜೋಳ ತೆಗೆದುಕೊಂಡು ಹೋಗುವುದರಿಂದ ವಾಹನ ಬಾಡಿಗೆ ಸೇರಿ ರೈತರಿಗೆ ಸಾಕಷ್ಟು ತೊಂದರೆಯಾಗಲಿದೆ. ಮೊದಲೇ ತೊಗರಿ ಬೆಳೆ ಹಾಳಾಗಿ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸರ್ಕಾರ ಕೂಡಲೇ ಈ ನಿರ್ಣಯ ಕೈಬಿಟ್ಟು ಆಯಾ ಜಿಲ್ಲೆಯ ಪ್ರತಿ ಪಿಕೆಪಿಎಸ್‌ನಲ್ಲಿ ಖರೀದಿಸುವಂತಾಗಬೇಕೆಂದು ಆಗ್ರಹಿಸಿದರು.
ಸದಾಶಿವ ಬಟರಗಿ, ಹೊನ್ನಪ್ಪ ಗೋಟ್ಯಾಳ, ಶಿವು ಬಿರಾದಾರ, ಲಕ್ಷ್ಮಣ ಕುಂಬಾರ, ಜಗನ್ನಾಥ ಮಸರಕಲ್ಲ, ಶಿವರಾಜ ಡೋರಗಿಹಳ್ಳಿ, ಗುರು ಕೋಟ್ಯಾಳ, ಮಲ್ಲು ಕೊಕಟನೂರ, ಪ್ರಹ್ಲಾದ ನಾಗರಾಳ, ಹೊನಕರೇರಪ್ಪ ತೆಲಗಿ ಮತ್ತಿತರರಿದ್ದರು.