ಆಲಮೇಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ನೂತನ ಶಾಖೆ ಹಾಗೂ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಸಂಘಟನೆಯ ಬೆಳಗಾವಿ ವಿಭಾಗೀಯ ಸಂಚಾಲಕ ಸಂಜು ಕಂಬಾಗಿ ಆದೇಶ ಪತ್ರ ವಿತರಿಸಿದರು, ಶಿವಕುಮಾರ ಮೇಲಿನಮನಿ, ಶಶಿಧರ ನಾಯ್ಕೋಡಿ, ದಲಿತ ಮುಖಂಡರಾದ ದತ್ತಾತ್ರಾಯ ಆಲಮೇಲ್ಕರ, ಸಂತೋಷ ಭಾಸ್ಕರ, ನವಿನ ವಗ್ಗಿ ಮತ್ತಿತರರಿದ್ದರು.
- ಸಂಚಾಲಕ ಸಂಜು ಕಂಬಾಗಿ ಸಲಹೆ
- ನೂತನ ಶಾಖೆ, ಪದಾಧಿಕಾರಿಗಳ ನೇಮಕ
ಆಲಮೇಲ: ಸ್ವಾತಂತ್ರೃ, ಸಮಾನತೆ ಮತ್ತು ಬಂಧುತ್ವದ ತತ್ವಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಹಕ್ಕೋತ್ತಾಯಕ್ಕಾಗಿ ಆಗ್ರಹಿಸಿ ಜು.3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಸಂಘಟನಾ ಸಂಚಾಲಕ ಮಾವಳ್ಳಿ ಶಂಕರ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ಪ್ರತಿಯೊಂದು ಗ್ರಾಮಗಳಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಘಟನೆ ಬೆಳಗಾವಿ ವಿಭಾಗೀಯ ಸಂಚಾಲಕ ಸಂಜು ಕಂಬಾಗಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕಿನ ನೂತನ ಶಾಖೆ ಹಾಗೂ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ, ಬೆಂಗಳೂರಿನಲ್ಲಿ ನಡೆಯಲ್ಲಿರುವ ದಲಿತ ಜನಜಾಗೃತಿ ಸಮಾವೇಶ ಕುರಿತು ಮಾತನಾಡಿದ ಅವರು, ದಲಿತ ಸಮುದಾಯದ ಪ್ರಮುಖ ಬೇಡಿಕೆಗಳಾದ ಭೂಮಿ ಮತ್ತು ವಸತಿ ಹಕ್ಕು, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ, ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆ ಹಾಗೂ ವಿಶೇಷ ಘಟಕ ಯೋಜನೆ ಮತ್ತು ಏಕಗವಾಕ್ಷಿ ನೀತಿಯ ಸಮರ್ಪಕ ಅನುಷ್ಠಾನದ ಜತೆಗೆ ರಾಜ್ಯ ಸರ್ಕಾರ ದಲಿತರ ಅಭಿವದ್ಧಿಗೆ ಮಿಸಲಿರುವ ಎಸ್ಸಿ/ಎಸ್ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಇದನ್ನು ವಿರೋಧಿಸಿ ಸರ್ಕಾರಕ್ಕೆ ಮನವರಿಕೆ ಮಾಡಿ ದಲಿತರಿಗೆ ಮೀಸಲಿರುವ ಹಣವನ್ನು ದಲಿತರಿಗಾಗಿ ಬಳಕೆ ಮಾಡುವಂತೆ ಹೋರಾಟದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಜಿಲ್ಲಾ ಪ್ರಧಾನ ಸಂಚಾಲಕ ಶಿವಕುಮಾರ ಮೇಲಿನಮನಿ ಮಾತನಾಡಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಸುಮಾರು ಎರಡು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ, ಅದಕ್ಕಾಗಿ ವಿಜಯಪುರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಬೇಕು ಎಂದರು.
ತಾಲೂಕು ಪ್ರಧಾನ ಸಂಚಾಲಕರಾಗಿ ಶಶಿಧರ ನಾಯ್ಕೋಡಿ, ಸಂಘಟನಾ ಸಂಚಾಲಕ ಸಂಜು ಇಟಗಾರ, ಸದಸ್ಯರಾಗಿ ಹುಚ್ಚಪ್ಪ ಶಿಂಗೆ, ಪುಂಡಲೀಕ ಗುಂದಗಿ, ಸುರೇಶ ನಾಟೀಕಾರ, ಮಾದವರಾವ ಕಡಣಿ, ದಾವಲಮಲೀಕ ದೇವರಮನಿ, ಖಾಜು ಐರೋಡಗಿ, ರಾಜು ಸಿಂಗೆ, ಅಲ್ಪಸಂಖ್ಯಾತ ಘಟಕಕ್ಕೆ ಬಸೀರ ತಾಬೋಳಿ, ಆಲಮೇಲ ನಗರ ಘಟಕದ ಸಂಚಾಲಕ ರಾಗಿ ರಾಜು ಮೇತ್ರಿ, ಶರಣು ಬಿಳಂಬಗಿ, ಪ್ರಕಾಶ ಬ್ಯಾಕೋಡ ಅವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ವಿತರಿಸಿದರು.
ದಲಿತ ಮುಖಂಡರಾದ ದತ್ತಾತ್ರಾಯ ಆಲಮೇಲ್ಕರ, ಸಂತೋಷ ಭಾಸ್ಕರ, ನವಿನ ವಗ್ಗಿ ಸೇರಿ ಹಲವರು ಉಪಸ್ಥಿತರಿದ್ದರು.