ವಿಜಯಪುರ ನಿವಾಸದಲ್ಲಿ ಸಚಿವ ಎಂ.ಬಿ. ಪಾಟೀಲರಿಗೆ ರೈತರು ದ್ರಾಕ್ಷಿ ತಿನ್ನಿಸಿ ಸಂಭ್ರಮ ವ್ಯಕ್ತಪಡಿಸಿದರು.
- ರೈತರಿಗೆ ಉತ್ಕೃಷ್ಟ ದ್ರಾಕ್ಷಿ ಪರಿಚಯ
- ಔರಾ-36 ತಳಿಯ ಪರಿಚಯ
- ತಿಕೋಟಾ ವ್ಯಾಪ್ತಿಯಲ್ಲಿ ಪ್ರಯೋಗ
- ಮೊದಲ ಹಂತದಲ್ಲಿ 100 ಎಕರೆಯಲ್ಲಿ ಬೆಳೆ
ವಿಜಯಪುರ: ನಡೆದಾಡುವ ದೇವರು ಖ್ಯಾತಿಯ ಲಿಂ.ಸಿದ್ಧೇಶ್ವರ ಶ್ರೀಗಳ ಆಶಯದಂತೆ ಬಬಲೇಶ್ವರ ಕ್ಷೇತ್ರ ಅಮೇರಿಕಾದ ಕ್ಯಾಲಿಫೋರ್ನಿಯಾ ಮೀರಿಸಲು ಮುಂದಡಿಯಿಟ್ಟಿದೆ ಎಂಬುದಕ್ಕೆ ಕ್ಯಾಲಿಫೋರ್ನಿಯಾದ ದ್ರಾಕ್ಷಿ ತಳಿಯೊಂದು ತಿಕೋಟಾ ಭಾಗ ಹುಡುಕಿಕೊಂಡು ಬಂದಿರುವುದೇ ಸಾಕ್ಷಿ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ತಿಕೋಟಾದ ಕೃಷ್ಣವೇಣಿ ಎಫ್.ಬಿ.ಓ (ಫಾರ್ಮರ್ಸ್ ಪ್ರೊಡ್ಯೂಜರ್ಸ್ ಆರ್ಗಾನೈಜೇಶನ್) ಇಂದು ಮಹಾರಾಷ್ಟ್ರದ ನಾಸಿಕನ ಸಹ್ಯಾದ್ರಿ ಫಾರ್ಮ್ಸ್‌ನ ಶ್ರೀ ವಿಲಾಸರಾವ ಶಿಂಧೆ ಅವರ ಸಹಯೋಗದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಔರಾ-36 ತಳಿಯ ದ್ರಾಕ್ಷಿ ಬೆಳೆಯನ್ನು 100 ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಒಂದು ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಣೆ ಮಾಡುವ ಗುರಿ ಹೊಂದಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಸಂತಸ ವ್ಯಕ್ತಪಡಿಸಿದರು.
ಕೃಷ್ಣವೇಣಿ ಎಫ್.ಬಿ.ಓ ನ ಸಂದೀಪ ಬಬನ ಪಾಟೀಲ ಹಾಗೂ ಸಚಿನ ಪಾಟೀಲ ಹಡಲಸಂಗ ಇವರು ತೋಟಗಾರಿಕೆ ಪದವಿಧರರಾಗಿದ್ದು, ಸ್ಥಳೀಯ ರೈತರ ತಂಡವನ್ನು ಕಟ್ಟಿ ಉತ್ಸಾಹದಿಂದ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ದ್ರಾಕ್ಷಿಯ ತಳಿಯಿಂದ ವಿಜಯಪುರ ದ್ರಾಕ್ಷಿ ಬೆಳೆಗಾರರ ಆದಾಯ ಮೂರು ಪಟ್ಟು ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ಇದರಿಂದ ರೈತರ ಆರ್ಥಿಕ ಬಲವರ್ಧನೆ ಆಗುತ್ತದೆ. ಈಗಾಗಲೇ ನಮ್ಮ ಬಿಎಲ್ಡಿಇ ತಂಡ ಕೂಡ ನಾಸಿಕನ ಸಹ್ಯಾದ್ರಿ ಫಾರ್ಮ್‌ಗೆ ಭೇಟಿ ನೀಡಿ, ಶ್ರೀ ವಿಲಾಸರಾವ ಶಿಂಧೆ ಅವರೊಂದಿಗೆ ಮಾತುಕತೆ ನಡೆಸಿದೆ. ವಿಜಯಪುರದಲ್ಲೂ ಸೌಕರ್ಯ ಕಲ್ಪಿಸಲು ಕೋರಲಾಗಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.
ಸಿದ್ಧೇಶ್ವರ ಶ್ರೀಗಳ ಆಶಯ ಈಡೇರಿಕೆ
ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳ ಆಶಯದಂತೆ ಈ ಭಾಗ ಸಮಗ್ರ ನೀರಾವರಿಗೊಳಪಟ್ಟಿದೆ. ತುಬಚಿ-ಬಬಲೇಶ್ವರ, ಪೀರಾಪುರ-ಬೂದಿಹಾಳ, ತಿಡಗುಂದಿ ವಿಸ್ತೃತ ಯೋಜನೆ ಹೀಗೆ ಅನೇಕ ಏತ ನೀರಾವರಿ ಯೋಜನೆಗಳು, ಕೆರೆಗೆ ನೀರು ತುಂಬುವ ಯೋಜನೆ, ಅಕ್ವಾಡೆಕ್ಟ್, ವಯಾಡಕ್ಟ್ ಮತ್ತಿತರ ಕಾಲುವೆ ಜಾಲಗಳ ಮೂಲಕ ನೀರಾವರಿ ಕಲ್ಪಿಸಿದ್ದರಿಂದ ಇಂದು ಬೇಸಿಗೆ ಬವಣೆ ತಗ್ಗಿದೆ. ಬರಗಾಲ ಎಂಬ ಪದವನ್ನೇ ಜನ ಮರೆತಿದ್ದಾರೆ. ತೋಟಗಾರಿಕೆ ಕ್ಷೇತ್ರ ಬೆಳೆಯುತ್ತಿದೆ. ಹೈನುಗಾರಿಕೆ ಕ್ಷೇತ್ರದಲ್ಲೂ ಬಿಎಲ್‌ಡಿಇ ಮೂಲಕ ಕ್ಷೀರಕ್ರಾಂತಿ ಮಾಡಲಾಗಿದೆ. ಇದೀಗ ದ್ರಾಕ್ಷಿ ಉತ್ಪಾದನೆಯಲ್ಲಿ ವಿಜಯಪುರ ವಿಶ್ವದ ಗಮನ ಸೆಳೆಯುತ್ತಿರುವುದು ಸಂತೃಪ್ತಿ ತರಿಸಿದೆ ಎಂದು ಎಂ.ಬಿ. ಪಾಟೀಲ ಹರ್ಷ ವ್ಯಕ್ತಪಡಿಸಿದರು.
ತಳಿಯ ವಿಶೇಷತೆ
ಔರಾ-36 ತಳಿಯ ವಿಶೇಷತೆ ಎಂದರೆ ಆರು ತಿಂಗಳವರೆಗೂ ಇದನ್ನು ಫ್ರಿಡ್ಜ್‌ನಲ್ಲಿರಿಸಿ ತಿನ್ನಬಹುದು. ಒಣದ್ರಾಕ್ಷಿ ಕೂಡ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದೆ. ವ್ಯಾಪಕ ಬೇಡಿಕೆ ಇದೆ. ರುಚಿ ಕೂಡ ಚೆನ್ನಾಗಿದೆ. ರಫ್ತು ಗುಣಮಟ್ಟದಿಂದ ಕೂಡಿದ ಈ ತಳಿಗೆ ರಾಸಾಯನಿಕ ಕೂಡ ಅತೀ ಕಡಿಮೆ ಬಳಕೆಯಾಗಲಿದೆ ಎಂದು ರೈತರು ವಿವರಿಸಿದರು.
ರೈತರಾದ ಈರಪ್ಪ ಬಗಲಿ, ಪಿಂಟು ಕೊಣ್ಣೂರ, ಅಶೋಕ ಬಾಬರ, ಕೃಷ್ಣವೇಣಿ ಎಫ್‌ಬಿಓ ಪದಾಧಿಕಾರಿ ಸಂದೀಪ ಬಬನ ಪಾಟೀಲ, ಸಚಿನ ಪಾಟೀಲ ಇತರರಿದ್ದರು.