ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮಿ ನಾರಾಯಣ ಸುದ್ದಿಗೋಷ್ಠಿ ನಡೆಸಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳಕೇರಿ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿವೇಕಾನಂದ ಡಬ್ಬಿ ಇತರರಿದ್ದಾರೆ.
- ಮಾಜಿ ಶಾಸಕ ಎಂ.ಡಿ. ಲಕ್ಷ್ಮಿ ನಾರಾಯಣ ಎಚ್ಚರಿಕೆ
- ಅಧಿವೇಶನದಲ್ಲಿ ಮುಕ್ತವಾಗಿ ಚರ್ಚೆಯಾಗಲಿ
- ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳಕೇರಿ ಸಾಥ್
- ಹಿಂದುಳಿದ ವರ್ಗಗಳಿಗೆ ಅನ್ಯಾಯ ಸಹಿಸಲ್ಲ
ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ ಸ್ವೀಕರಿಸಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಮುಂಬರುವ ವಿಧಾನ ಸಭೆ ಅಧಿವೇಶನದಲ್ಲಿ ಮಂಡಿಸದೇ ಹೋದರೆ ವಿಧಾನ ಸೌಧ ಮುತ್ತಿಗೆ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಮಾಜಿ ಶಾಸಕ ಎಂ.ಡಿ. ಲಕ್ಷ್ಮಿ ನಾರಾಯಣ ತಿಳಿಸಿದರು.
ಜಾತಿ ಗಣತಿ ಆರಂಭಿಸಿ, 650 ಕೋಟಿ ಖರ್ಚು ಮಾಡಿ, ಕಾಂತರಾಜು ಅವರನ್ನು ಅಧ್ಯಕ್ಷರನ್ನಾಗಿಸಿ ಕೊಟ್ಟ ವರದಿ ಹತ್ತು ವರ್ಷ ಆದರೂ ಸ್ವೀಕರಿಸದೇ ಅಧಿಕಾರದ ಕೊನೇ ಕ್ಷಣದಲ್ಲಿ ಸ್ವೀಕರಿಸಿದ್ದು ಏಕೆ? ನೀವು ಸ್ವೀಕರಿಸಿರುವ ವರದಿಯನ್ನು ಮಂಡಿಸಲು ಈಗ ಸಿಎಂ ಆಗಿರುವ ಡಿಕೆಶಿಗೆ ನೀವು ಆದೇಶ ಮಾಡುತ್ತೀರಾ? ನಿಮ್ಮ ಹೈಕಮಾಂಡ್‌ಗೆ ಆದೇಶ ಮಾಡಲು ಬಿಡುತ್ತೀರಾ? ಇಲ್ಲಾ ಸದನದಲ್ಲಿ ಚರ್ಚೆಗೆ ಬಿಡುತ್ತೀರಾ? ತಿಳಿಸಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನೆಗಳ ಸುರಿಮಳೆಗೈದರು.
ಅಧಿಕಾರದುದ್ದಕ್ಕೂ ಸಮಾನತೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸಾಕಷ್ಟು ಅನ್ಯಾಯ ಮಾಡಿತು. ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ ಸಮಾನತೆ ಎತ್ತಿ ಹಿಡಿಯಬೇಕಿರುವುದು ಆ ಸರ್ಕಾರದ ಕರ್ತವ್ಯ. ಶೇ. 52ರಷ್ಟಿರುವ ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವುದಾಗಿ ಹೇಳಿದ ಸಿದ್ದರಾಮಯ್ಯ ನೆಪ ಮಾತ್ರ ವರದಿ ಸ್ವೀಕಾರ ಮಾಡಿದ್ದಾರೆಂಬುದು ಅಧಿಕಾರದ ಕೊನೇ ಕ್ಷಣದಲ್ಲಿ ವರದಿ ಸ್ವೀಕರಿಸಿರುವುದರಿಂದ ಗೊತ್ತಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಕೇವಲ ಒಂದೇ ವರ್ಷದಲ್ಲಿ ಸಮೀಕ್ಷೆ ಮುಗಿಸಿ ವರದಿ ಸ್ವೀಕಾರ ಮಾಡಿ ಆ ಸಮುದಾಯಗಳಿಗೆ ನ್ಯಾಯ ಒದಗಿಸಿವೆ. ಆದರೆ ಕರ್ನಾಟಕದಲ್ಲಿ ಮೂರು ಆಯೋಗ ಮಾಡಿ ವರದಿ ತಿರಸ್ಕರಿಸಲಾಯಿತು. ಆದರೆ, 10 ವರ್ಷ ಸುಮ್ಮನಿದ್ದು ಸಿಎಂ ಸ್ಥಾನ ಬಿಟ್ಟುಕೊಡಬೇಕಾದರೆ ವರದಿ ಸ್ವೀಕರಿಸಲಾಯಿತು. ಆ ಮೂಲಕ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಲಾಯಿತು. ಈಗಲಾದರೂ ಡಿಕೆಶಿ ಅವರಿಗೆ ವರದಿ ಮಂಡಿಸಲು ತಿಳಿಸಿ. ಮುಂದಿನ ಅಧಿವೇಶನದಲ್ಲಿ ವರದಿ ಮಂಡಿಸದೇ ಹೋದರೆ ವಿಧಾನ ಸೌಧದ ಮುತ್ತಿಗೆ ಹಾಕಲಾಗುವುದು ಎಂದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಶರಣು ತಳಕೇರಿ ಮಾತನಾಡಿ, ಹಿಂದುಳಿದ ವರ್ಗದ ಚಾಂಪಿಯನ್ ಎಂದು ಹೇಳಿಕೊಂಡು ತಮ್ಮ ಅಧಿಕಾರದ ಕೊನೆಯ ಅವಧಿಯಲ್ಲಿ ತರಾತುರಿಯಲ್ಲಿ ವರದಿ ಸ್ವೀಕರಿಸುವ ಮೂಲಕ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದ್ದಾರೆ. ಅವರು ದುರುದ್ದೇಶದಿಂದ ಈ ನಡೆ ಅನುಸರಿಸಿದ್ದಾರೆ. ಆರ್‌ಸಿಬಿ ವಿಜಯೋತ್ಸವದ ದುರಂತ ಮರೆಮಾಚಲು ಇಂಥದ್ದೊಂದು ಚರ್ಚೆ ಹುಟ್ಟುಹಾಕಲಾಯಿತು. ಸಿದ್ದರಾಮಯ್ಯ ಅವರ ಪೂರ್ಣ ಮೌನ ಸಂಶಯಕ್ಕೆ ಎಡೆ ಮಾಡಿದೆ. ಆತ ಸುಮ್ಮನಿರುವ ವ್ಯಕ್ತಿಯಲ್ಲ ಎಂದರು.
ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಮರಳಿ ಬಿಜೆಪಿಗೆ ಸೇರ್ಪಡೆಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶರಣು ತಳಕೇರಿ ಅವರು, ಯತ್ನಾಳರು ಹೊಸ ಪಕ್ಷ ಕಟ್ಟುವುದಾಗಿ ತಿಳಿಸಿದ್ದಾರೆ. ಅವರ ಹೊಸ ಪಕ್ಷಕ್ಕೆ ಹಾಲುಮತ ಸಮಾಜದವನಾಗಿ ನಾನೇ ಬೋಣಿ ಮಾಡುತ್ತೇನೆ. ಅವರಿಗೆ ಶುಭವಾಗಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿವೇಕಾನಂದ ಡಬ್ಬಿ, ಸಿದ್ದು ಬುಳ್ಳಾ, ಸಾಬು ಮಾಶ್ಯಾಳ, ರಾಜಕುಮಾರ ಸಗಾಯಿ, ಜಯದೇವ, ವಿಜಯ ಜೋಷಿ ಇತರರಿದ್ದರು.