ವಿಜಯಪುರ ಜಿಲ್ಲಾಡಳಿತಕ್ಕೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಜುಗೌಡ ಪಾಟೀಲ, ಸುರೇಶ ಬಿರಾದಾರ, ಚಂದ್ರಶೇಖರ ಕವಟಗಿ ಮತ್ತಿತರರಿದ್ದಾರೆ. 
ವಿಜಯಪುರ

ಪಂಚಮಸಾಲಿ ಸಮುದಾಯದ ಕ್ಷಮೆ ಯಾಚಿಸಿ, ಸರ್ಕಾರಕ್ಕೆ ಬಿಜೆಪಿ ಮುಖಂಡರ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಪಂಚಮಸಾಲಿ 2ಎ ಮೀಸಲಾತಿ
  • ಬೆಳಗಾವಿಯಲ್ಲಿ ಲಾಠಿ ಚಾರ್ಜ್ ಪ್ರಕರಣ
  • ಸಮುದಾಯದ ಕ್ಷಮೆ ಯಾಚಿಸಲು ಆಗ್ರಹ
  • ಬಿಜೆಪಿ ಮುಖಂಡರಿಂದ ಪ್ರತಿಭಟನೆ
ವಿಜಯಪುರ: ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿರಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದ ಕಾಂಗ್ರೆಸ್ ಸರ್ಕಾರ ಕೂಡಲೇ ಆ ಸಮುದಾಯದ ಕ್ಷಮೆ ಯಾಚಿಸಲು ಆಗ್ರಹಿಸಿ ಬಿಜೆಪಿ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, 2024ರ ಡಿಸೆಂಬರ್ 10ರಂದು ಬೆಳಗಾವಿಯಲ್ಲಿ ನಡೆದ ಪೊಲೀಸ್ ಲಾಠಿಚಾರ್ಜ್ ಘಟನೆಗೆ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಹಾಗೂ ವಿಳಂಬ ಮಾಡದೆ ಸಮುದಾಯಕ್ಕೆ ‘2ಅ’ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪಂಚಮಸಾಲಿ ಸಮುದಾಯದವರು ಶಾಂತಿಯುತವಾಗಿ ಹಕ್ಕು ಮಂಡಿಸಲು ತೆರಳಿದ್ದಾಗ, ಪೊಲೀಸ್ ದೌರ್ಜನ್ಯ ನಡೆಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಈ ಘಟನೆಯು ಮಹಿಳೆಯರು, ವೃದ್ಧರು ಮತ್ತು ಯುವಕರ ಮನಸ್ಸಿನಲ್ಲಿ ಆಳವಾದ ಗಾಯ ಉಂಟುಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಹೋರಾಟಗಳನ್ನು ಸಂಯಮದಿಂದ ಮತ್ತು ಸಂವಾದದ ಮೂಲಕ ನಿರ್ವಹಿಸಿದ್ದವು. ಆದರೆ, ಪ್ರಸ್ತುತ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಲಪ್ರಯೋಗದ ದಾರಿ ಹಿಡಿದಿದೆ ಎಂದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕ್ಷಮೆ ಯಾಚಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಮುಖಂಡರಾದ ಸುರೇಶ ಬಿರಾದಾರ, ಚಂದ್ರಶೇಖರ ಕವಟಗಿ, ಉಮೇಶ ಕಾರಜೋಳ, ರವಿ ಬಗಲಿ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಭರತ ಕೋಳಿ, ಭಾರತಿ ಬುಯ್ಯರ, ಸ್ವಪ್ನಾ ಕಣಮುಚನಾಳ, ರಾಜಕುಮಾರ ಸಗಾಯಿ, ಚಿದಾನಂದ ಚಲವಾದಿ, ಸಚಿನ ಬೊಂಬಳೆ, ಸಿದ್ದನಗೌಡ ಬಿರಾದಾರ, ಸಂದೀಪ ಪಾಟೀಲ, ಮಂಥನ ಗಾಯಕವಾಡ, ಅಶೋಕ ರಾಥೋಡ, ಗಣೇಶ ರಣ್ಣಿದೇವಿ, ವಿಜಯ ಹಿರೇಮಠ, ಚಿನ್ನು ಚಿನಗುಂಡಿ, ಸಂತೋಷ ನಿಂಬರಗಿ, ಶ್ರೀಕಾಂತ ಶಿಂಧೆ ಹಾಗೂ ವಿನಾಯಕ ದಹಿಂಡೆ ಇದ್ದರು.