M-B-PATIL 
ವಿಜಯಪುರ

ಬಿಜೆಪಿ ಮುಖಂಡರಿಗೆ ತಿರುಗೇಟು, ಸಚಿವ ಎಂ.ಬಿ. ಪಾಟೀಲ ಲೇವಡಿ, ಪಿಪಿಪಿ ಮಾದರಿ ಮೋದಿಯ ಕನಸಿನ ಕೂಸು

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಬದ್ಧ
  • ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ
  • ಹೋರಾಟಗಾರರ ಹೋರಾಟಕ್ಕೆ ಸದಾ ಬೆಂಬಲ
  • ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ಕಾಲೇಜ್ ಸ್ಥಾಪನೆ
ವಿಜಯಪುರ: ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಅವರು, ಈ ಪಿಪಿಪಿ ಮಾದರಿ ತಂದಿದ್ದೇ ಬಿಜೆಪಿ. ಇದು ಮೋದಿಯ ಕನಸಿನ ಕೂಸು ಎಂದು ಲೇವಡಿ ಮಾಡಿದರು.
ದೇಶಾದ್ಯಂತ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುತ್ತಿರುವ ಮೋದಿ ಸರ್ಕಾರ ಇದಿಗ ಅಣುಸ್ಥಾವರಗಳ ಮಾರಾಟಕ್ಕೂ ಮುಂದಾಗಿದೆ. ಬೆಟ್ಟು-ಗುಡಗಳನ್ನು, ಸರ್ಕಾರಿ ಸಂಸ್ಥೆಗಳೆಲ್ಲವನ್ನೂ ಅಂಬಾನಿ-ಅದಾನಿಗೆ ಧಾರೆ ಎರೆಯುತ್ತಿದ್ದಾರೆ. ಪಿಪಿಪಿ ಮಾದರಿ ಸರ್ಕಾರಿ ವೈದ್ಯಕೀಯ ಕಾಲೇಜ್ ವಿರೋಧಿಸುವ ಬಿಜೆಪಿಗರು ದೇಶಾದ್ಯಂತ ನಡೆಯುತ್ತಿರುವ ಖಾಸಗೀಕರಣವನ್ನೂ ವಿರೋಧಿಸಬೇಕಲ್ಲವೇ? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಚಾಯಿಸಿದರು.

ಬೊಮ್ಮಾಯಿ ಅವಧಿಯಲ್ಲೇ ಪಿಪಿಪಿ

ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಿಸಿದ್ದೇ ಕಾಂಗ್ರೆಸ್ ಸರ್ಕಾರ. ನಂತರ ಬಂದ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಅದನ್ನು ಪಿಪಿಪಿ ಮಾದರಿಯನ್ನಾಗಿಸಿದರು. ಈ ಪಿಪಿಪಿ ಮಾದರಿ ತಂದಿದ್ದೇ ತಮ್ಮ ಸರ್ಕಾರ ಎಂಬುದನ್ನು ಮರೆತು ಬಿಜೆಪಿಗರು ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ. ಪಿಪಿಪಿ ಮಾದರಿ ವಿರೋಧಿಸುವವರು ತಮ್ಮದೇ ಸರ್ಕಾರವನ್ನು ಮತ್ತು ಸರ್ಕಾರದ ನಡೆಯನ್ನು ವಿರೋಧಿಸಬೇಕಲ್ಲವೇ? ಪಿಪಿಪಿ ಮಾದರಿ ತಂದ ಮೋದಿಯನ್ನು ಹೋಗಿ ಈ ಮಾದರಿ ಕೈ ಬಿಡಿ ಎನ್ನಬೇಕಲ್ಲವೇ? ಎಂದು ಎಂ.ಬಿ. ಪಾಟೀಲ ಹರಿಹಾಯ್ದರಲ್ಲದೇ ಬಿಜೆಪಿ ಅವಧಿಯಲ್ಲಿನ ಕೆಲವು ಆದೇಶ ಪ್ರತಿಗಳನ್ನು ಮತ್ತು ಕೇಂದ್ರ ಸರ್ಕಾರದ ಪಿಪಿಪಿ ಮಾದರಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆಗೊಳಿಸಿದರು.

ಸರ್ಕಾರಿ ಕಾಲೇಜ್‌ಗೆ ಬದ್ಧ

ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋರಾಟಗಾರರ ನಿಯೋಗ ಕೊಂಡೊಯ್ದು ಮನವರಿಕೆ ಮಾಡಲಾಗಿದೆ. ‘ಪಿಪಿಪಿ ಮಾದರಿ ಕೈ ಬಿಡಬೇಕಲ್ಲವೇ?’ ಎಂದು ಸಿಎಂ ಕೇಳಿದಾಗ ಹೋರಾಟಗಾರರು ‘ಎಷ್ಟೇ ವರ್ಷಗಳುರುಳಲಿ ಸರ್ಕಾರದಿಂದಲೇ ಕಾಲೇಜ್ ಸ್ಥಾಪಿಸಬೇಕು ಮತ್ತು ಪಿಪಿಪಿ ಮಾದರಿ ಕೈ ಬಿಡಬೇಕು’ ಎಂದಿದ್ದಾರೆ. ಸಿಎಂ ಸಹ ಸಮ್ಮತಿಸಿದ್ದಾರೆ. ಆದರೆ, ಕೆಲಸದೊತ್ತಡದಲ್ಲಿ ಹೋರಾಟಗಾರರಿಗೆ ಬಹಳ ಸಮಯ ನೀಡಲಾಗಿಲ್ಲ. ಆದರೂ ಹೋರಾಟಗಾರರಲ್ಲಿ ಅಸಮಾಧಾನವಿದ್ದರೆ ಇನ್ನೊಮ್ಮೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಲಾಗುವುದು. ಸ್ಪಷ್ಟವಾಗಿ, ನೇರವಾಗಿ, ಎಲ್ಲರ ಸಮಕ್ಷಮದಲ್ಲೇ ಸಿಎಂಗೆ ಒತ್ತಾಯಿಸುವೆ ಎಂದರು.
ಹೋರಾಟಗಾರರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಅವರ ಉದ್ದೇಶ ಒಳ್ಳೆಯದಿದೆ. ಆದರೆ, ಕೆಲವು ಬಿಜೆಪಿ ಪುಢಾರಿಗಳು ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದ ಎಂ.ಬಿ. ಪಾಟೀಲರು, ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಆಗಬೇಕೆಂಬುದು ವೈಯಕ್ತಿಕವಾಗಿ ನನ್ನ ಒತ್ತಾಸೆಯೂ ಆಗಿದೆ. ಆದರೆ, ಎಲ್ಲ ಸರ್ಕಾರಗಳಿಗೂ ಕಾಡುವಂತೆ ನಮ್ಮ ಅವಧಿಯಲ್ಲೂ ಅನುದಾನದ ಕೊರತೆ ಸಹಜವಾಗಿದ್ದು, ಒಟ್ಟಿನಲ್ಲಿ ನಮ್ಮ ಆಡಳಿತಾವಧಿಯಲ್ಲಿಯೇ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಲಾಗುವುದೆಂದು ಭರವಸೆ ನೀಡಿದರು.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಿಸಿರುವುದು ಹಾಗೂ ಬೆಂಬಲ ಬೆಲೆ, ಪರಿಹಾರ ಹಣದ ತಾರತಮ್ಯಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರದ ನಡೆ ಕುರಿತು ಖಂಡಿಸಿದರು.