ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿಯ ಸಂಸ್ಥಾಪನಾ ದಿನ ಆಚರಿಸಲಾಯಿತು. ಸಂಸದ ರಮೇಶ ಜಿಗಜಿಣಗಿ, ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ವಿಜುಗೌಡ ಪಾಟೀಲ ಇತರರಿದ್ದಾರೆ. 
ವಿಜಯಪುರ

ಬಿಜೆಪಿ ನಮ್ಮ ಉಸಿರು, ಕಾರ್ಯಕರ್ತರೇ ನಮ್ಮ ಆಸ್ತಿ ಎಂದ ಸಂಸದ ರಮೇಶ ಜಿಗಜಿಣಗಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಸಂಸ್ಥಾಪನಾ ದಿನಾಚರಣೆ
  • ಮೊಳಗಿದ ದೇಶಾಭಿಮಾನದ ಘೋಷಣೆ
  • ಪಕ್ಷದ ಬಾವುಟ ಹಾರಿಸಿ ಸಂಭ್ರಮಾಚರಣೆ
ವಿಜಯಪುರ: ರಾಷ್ಟ್ರಾಭಿಮಾನ ಉಸಿರಾಗಿಸಿಕೊಂಡ ಜಗತ್ತಿನ ಏಕೈಕ ದೊಡ್ಡ ಪಕ್ಷ ಬಿಜೆಪಿ ಎಂದು ಸಂಸದ ರಮೇಶ ಜಿಗಜಿಣಗಿ ಹೆಮ್ಮೆ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶ್ಯಾಮಾ ಪ್ರಸಾದ್ ಮುಖರ್ಜಿ, ಪಂ.ದೀನದಯಾಳ ಉಪಾಧ್ಯಾಯ ಅವರಂತಹ ಶ್ರೇಷ್ಠ ಚಿಂತಕರು ಬಿಜೆಪಿಯ ಸ್ಥಾಪನೆಗೆ ಕಾರಣರಾದರು. ಬಿಜೆಪಿ ಇಂದಿಗೂ ಜನ ಸೇವೆಯನ್ನೇ ಉಸಿರಾಗಿಸಿಕೊಂಡಿದೆ. ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ. ಬಿಜೆಪಿಯ ದೇಶನಿಷ್ಠೆಯ ಫಲವಾಗಿಯೇ ಇಂದು ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅರಳಿದೆ. ಉತ್ತಮ ಆಡಳಿತ ನೀಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ವಿಶ್ವದಲ್ಲಿಯೇ ದೊಡ್ಡ ಹೆಸರು ಮಾಡಿದೆ ಎಂದರು.
ಬಿಜೆಪಿ ಪಕ್ಷ ನಮ್ಮ ಉಸಿರು, ಕಾರ್ಯಕರ್ತರು ನಮ್ಮ ಆಸ್ತಿ, ಈ ಪವಿತ್ರ ಪಕ್ಷದಲ್ಲಿರುವ ಅವಕಾಶ ನನಗೆ ಒದಗಿ ಬಂದಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಭಾರತೀಯ ಸಂಸ್ಕೃತಿ, ಅದಮ್ಯ ದೇಶಭಕ್ತಿ, ದೇಶಕ್ಕಾಗಿ ಸಮರ್ಪಣಾ ಮನೋಭಾವ, ಸ್ವದೇಶಿ, ಸ್ವಾಭಿಮಾನ, ಆತ್ಮ ನಿರ್ಭರ ಈ ಎಲ್ಲ ತತ್ವಗಳು ಬಿಜೆಪಿಯ ಆಧಾರ ಸ್ತಂಭಗಳಾಗಿವೆ, ಉಳಿದ ರಾಜಕೀಯ ಪಕ್ಷಗಳಂತೆ ಬಿಜೆಪಿ ಅಲ್ಲ. ಬಿಜೆಪಿಗೆ ಜನ ಹಿತ, ರಾಷ್ಟ್ರ ಹಿತವೇ ಆದ್ಯ ಎಂದರು.
ಮುಖಂಡರಾದ ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ವಿಜುಗೌಡ ಪಾಟೀಲ, ಸಂಜೀವ ಐಹೊಳೆ, ವಿವೇಕಾನಂದ ಡಬ್ಬಿ, ವಿಜಯಕುಮಾರ ಕೂಡಗಿನೂರ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಮಹೇಂದ್ರಕುಮಾರ ನಾಯಕ, ಎಸ್.ಎ. ಪಾಟೀಲ, ಬಸವರಾಜ ಬೈಚಬಾಳ, ರಮೇಶ ಬಿದನೂರ, ಮಲ್ಲಿಕಾರ್ಜುನ ಜೋಗೂರ, ಸ್ವಪ್ನಾ ಕಣಮುಚನಾಳ, ಮಲ್ಲು ಕಲಾದಗಿ, ಸಂದೀಪ ಪಾಟೀಲ, ಸಿದ್ದನಗೌಡ ಬಿರಾದಾರ, ವಿಜಯ ಜೋಶಿ, ಹರ್ಷಗೌಡ ಪಾಟೀಲ, ಪಾಪುಸಿಂಗ್ ರಜಪೂತ, ಭರತ ಕೋಳಿ, ಶರಣಬಸಪ್ಪ ಕುಂಬಾರ, ವಿನಾಯಕ ದಹಿಂಡೆ, ಅಪ್ಪು ಕುಂಬಾರ, ವಿಕಾಸ ಪದಕಿ, ಮಹಾದೇವ ದರ್ಗಾ, ಕಲ್ಮೇಶ ಹಿರೇಮಠ ಹಾಗೂ ವಾರೀಶ ಕುಲಕರ್ಣಿ ಪಾಲ್ಗೊಂಡಿದ್ದರು.
ಭಾರತಮಾತೆ ಹಾಗೂ ಪಕ್ಷದ ಸಂಸ್ಥಾಪನೆ ಮಾಡಿದ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಕಾರ್ಯಕರ್ತರು ಉತ್ಸಾಹದಿಂದ ಬಿಜೆಪಿ ಪಕ್ಷದ ಧ್ವಜವನ್ನು ಪ್ರದರ್ಶಿಸಿ ದೇಶಾಭಿಮಾನದ ಘೋಷಣೆಗಳನ್ನು ಕೂಗಿದರು.