ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕಾರಣಿ ಸಭೆಯನ್ನುದ್ಧೇಶಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಗುರುಲಿಂಗಪ್ಪ ಅಂಗಡಿ ಇತರರಿದ್ದಾರೆ. 
ವಿಜಯಪುರ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ನಿಶ್ಚಿತ

ಪ್ರಮುಖ ಮುಖ್ಯಾಂಶಗಳು

  • ಸಂಸದ ರಮೇಶ ಜಿಗಜಿಣಗಿ ವಿಶ್ವಾಸ
  • ಜಿಲ್ಲಾ ಕಾರ್ಯಕಾರಣಿ ಸಭೆ ಶ್ರೇಷ್ಠ ಚಿಂತನೆಯ ಪಕ್ಷ
ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶತಃಸಿದ್ಧ ಎಂದು ಸಂಸದ ರಮೇಶ ಜಿಗಜಿಣಗಿ ಭವಿಷ್ಯ ನುಡಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ‘ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆ’ಯನ್ನುದ್ದೇಶಿಸಿ ಅವರು ಮಾತನಾಡಿದರು.
ಜನರ ಒಲವು ಬಿಜೆಪಿಯ ಮೇಲೆ ಎಂದಿಗೂ ಕಡಿಮೆಯಾಗಿಲ್ಲ, ಆದರೆ ಕಾಂಗ್ರೆಸ್‌ನವರು ಈ ಹಿಂದಿನ ಚುನಾವಣೆಯಲ್ಲಿ ಜನರನ್ನು ಗ್ಯಾರಂಟಿ ಹೆಸರಿನಲ್ಲಿ ಯಾಮಾರಿಸುವ ಪ್ರಯತ್ನ ಮಾಡಿದರು. ಆದರೆ ಈಗ ಗ್ಯಾರಂಟಿಗಳನ್ನೇ ಸರಿಯಾಗಿ ನೀಡುತ್ತಿಲ್ಲ, ಕೇವಲ ಕುರ್ಚಿ ಕಾದಾಟದಲ್ಲಿಯೇ ನಿರತವಾಗಿರುವುದು ಜನರಿಗೆ ಬೇಸರ ತರಿಸಿದೆ, ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುವುದು ನಿಶ್ಚಿತ ಎಂದರು.
ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ ಯಾರು ದುಡಿದಿಲ್ಲ ಎನ್ನುವುದು ನನಗೆ ಸೇರಿದಂತೆ ಎಲ್ಲ ಮುಖಂಡರಿಗೂ ಗೊತ್ತಿದೆ. ಹೀಗಾಗಿ ಕಾರ್ಯಕರ್ತರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾರು ಯಾವ ರೀತಿ ರಾಜಕಾರಣ ಮಾಡಿದ್ದಾರೆ, ಯಾರ ಸೋಲಿಗೆ ಕಾರಣವಾಗಿದ್ದಾರೆ ಎಂಬಿತ್ಯಾದಿ ವಿವರಗಳು ಎಲ್ಲರಿಗೂ ಗೊತ್ತಿವೆ. ಅದಕ್ಕಾಗಿ ಒಂದೇ ಸಮಾಜ ಎನ್ನುವುದು ಬಿಟ್ಟು ಸಾಮಾಜಿಕವಾಗಿ ಎಲ್ಲರನ್ನು ಕಟ್ಟಿಕೊಂಡು ಹೋಗಬೇಕು. ಕೇವಲ ಒಂದು ಸಮಾಜ ಅಥವಾ ವ್ಯಕ್ತಿಯಿಂದ ರಾಜಕಾರಣ ನಡೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಕಾರ್ಯಕರ್ತರ ತ್ಯಾಗ ಬಲಿದಾನದಿಂದ ಬಿಜೆಪಿ ಇಂದು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಉತ್ತರ ಕರ್ನಾಟಕ ಭಾಗದಿಂದ ಮೂವರು ನಾಯಕರನ್ನು ಮುಖ್ಯಮಂತ್ರಿ ಮಾಡಿದ್ದೇ ಬಿಜೆಪಿ. ಸಮಗ್ರ ಕರ್ನಾಟಕ ಹಾಗೂ ಸಮಗ್ರ ಭಾರತದ ಪ್ರಗತಿಯನ್ನು ಬಯಸುವ ಶ್ರೇಷ್ಠ ಚಿಂತನೆಯ ಪಕ್ಷ ಬಿಜೆಪಿ ಎಂದರು.
ಜಿಪಂ, ತಾಪಂ, ಗ್ರಾಪಂ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನಾವು ಸ್ಥಳೀಯವಾಗಿ ಬಲಿಷ್ಠರಾಗಬೇಕು. ಆಗ ಮಾತ್ರ ನಾವು ವಿಧಾನಸಭೆ, ಲೋಕಸಭೆ ಚುನಾವಣೆ ಗೆಲುವು ಸಾಧಿಸಲು ಸಾಧ್ಯ. ಸ್ಥಳೀಯ ಚುನಾವಣೆಗಳಲ್ಲಿ ನಾವು ಗೆಲ್ಲಲೇಬೇಕು. ಸಂಸದರು ಬಿಟ್ಟರೆ ಜಿಲ್ಲೆಯಲ್ಲಿ ನಮ್ಮ ಶಾಸಕರು ಯಾರೂ ಇಲ್ಲ. ಸರ್ಕಾರವೂ ಇಲ್ಲ. ಹೀಗಾಗಿ ನಾವು ಗ್ರಾಪಂ, ತಾಪಂ, ಜಿಪಂ ಗೆಲ್ಲಲೇಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ವಿಜುಗೌಡ ಪಾಟೀಲ, ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೀವ ಐಹೊಳಿ, ವಿವೇಕಾನಂದ ಡಬ್ಬಿ, ಗೋಪಾಲ ಘಟಕಾಂಬಳೆ, ಸಾಬು ಮಾಶ್ಯಾಳ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಅನೀಲ ಜಮಾದಾರ, ರಜನಿ ಸಂಬಣ್ಣಿ, ಸ್ವಪ್ನಾ ಕಣಮುಚನಾಳ, ಸಂಜಯ ಪಾಟೀಲ ಕನಮಡಿ, ಉಮೇಶ ಕಾರಜೋಳ, ಉಮೇಶ ಕೋಳಕೂರ, ಡಾ.ಸುರೇಶ ಬಿರಾದಾರ, ವಿಜಯಕುಮಾರ ಕುಡಿಗನೂರ ಇತರರಿದ್ದರು.