ಉಮೇಶ ಕೋಳಕೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ 
ವಿಜಯಪುರ

ಬರ ಘೋಷಿಸಿ ಕೂಡಲೇ ಪರಿಹಾರ ಒದಗಿಸಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕೋಳಕೂರ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಕೆರೆಗಳಲ್ಲಿ ನೀರಿನ ಪ್ರಮಾಣ ಕುಸಿತ
  • ಬರಿದಾಗುತ್ತಿರುವ ಜಲಾಶಯಗಳು
  • ಬಿತ್ತನೆ ಪ್ರಮಾಣ ಬಹುತೇಕ ಕುಂಠಿತ
  • ರಾಜ್ಯ ಸರ್ಕಾರ ನೆರವು ನೀಡಲು ಒತ್ತಾಯ
ವಿಜಯಪುರ: ಜಿಲ್ಲೆ ಸೇರಿ ರಾಜ್ಯದ ಬಹುತೇಕ ಕಡೆ ಮಳೆ ಪ್ರಮಾಣ ತೀವ್ರವಾಗಿ ಕುಂಠಿತಗೊಂಡಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜಲಮೂಲಗಳಲ್ಲಿ ನೀರಿನ ಪ್ರಮಾಣ ತಗ್ಗಿದೆ. ಬಿತ್ತನೆ ಪ್ರಮಾಣವೂ ಕಡಿಮೆಯಾಗಿದ್ದು, ಬಹುತೇಕ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಬರ ಘೋಷಣೆ ಮಾಡಿ ರೈತರಿಗೆ ಪರಿಹಾರ ಒದಗಿಸಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕೋಳಕೂರ ಒತ್ತಾಯಿಸಿದ್ದಾರೆ.
ಸಕಾಲಕ್ಕೆ ಮಳೆ-ಬೆಳೆ ಬಾರದೆ ರೈತರು ತೊಂದರೆಗೆ ಸಿಲುಕಿದ್ದಾರೆ. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ರಾಯಚೂರ, ಬಳ್ಳಾರಿ, ಕಲಬುರಗಿ, ಯಾದಗಿರಿ ಸೇರಿ ಅನೇಕ ಜಿಲ್ಲೆಗಳಲ್ಲಿ ಬರದ ಕಾರ್ಮೋಡ ಕವಿದಿದೆ. ಕೆರೆಗಳು, ಜಲಾಶಯಗಳು, ಹಳ್ಳ-ಕೊಳ್ಳ ಸೇರಿ ಪ್ರಮುಖ ಜಲಮೂಲಗಳು ಬರಿದಾಗಿವೆ. ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿದೆ. ಹೀಗಾಗಿ ಜನ ಗುಳೆ ಹೋಗಲು ಸಜ್ಜಾಗಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸಂಪುಟ ರಚನೆ, ಬಿಡದಿ ಟೌನ್‌ಶಿಪ್ ಎಂದೆಲ್ಲಾ ಕಾಲ ಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕು. ಬಹುತೇಕ ಶಾಸಕರು ಕ್ಷೇತ್ರದಲ್ಲಿಲ್ಲ. ಇರುವ ಸಚಿವರುಗಳು ಸಹ ರಾಜಧಾನಿಯಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ರೈತರ ಸಮಸ್ಯೆ ಆಲಿಸಲು ಯಾವೊಬ್ಬ ಶಾಸಕರೂ ಕ್ಷೇತ್ರದಲ್ಲಿಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಾ ಬೆಂಗಳೂರು-ದೆಹಲಿ ಎಂದು ಓಡಾಟ ನಡೆಸಿದ್ದಾರೆ. ಜನ ಮಾತ್ರ ಮಳೆ-ಬೆಳೆ ಬಾರದೇ ಕೈ-ಕೈ ಹೊಸಕಿಕೊಳ್ಳುತ್ತಿದ್ದಾರೆ. ಕೂಡಲೇ ಶಾಸಕರುಗಳು ಕ್ಷೇತ್ರಗಳಲ್ಲಿ ಸಂಚಾರ ನಡೆಸಬೇಕು. ಅಧಿಕಾರಿಗಳ ಸಭೆ ನಡೆಸಬೇಕು. ಬರಪರಿಸ್ಥಿತಿ ಅವಲೋಕಿಸಿ ಸರ್ಕಾರಕ್ಕೆ ಒರದಿಯೊಪ್ಪಿಸಬೇಕು. ತ್ವರಿತವಾಗಿ ಪರಿಹಾರ ಘೋಷಣೆ ಮಾಡಬೇಕೆಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.