ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರಿಗೆ ಪರಶುರಾಮ ರಜಪೂತ ಮನವಿ ಸಲ್ಲಿಸಿದರು. ಯುವ ಮುಖಂಡ ನಂದು ಗಡಗಿ ಇದ್ದಾರೆ. 
ವಿಜಯಪುರ

ಶಾಸಕ ಬಸನಗೌಡ ಪಾಟೀಲ ಯತ್ನಾಳರಿಂದ ಧಮ್ಕಿ, ರಕ್ಷಣೆ ಕೋರಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಜಪೂತ ಮನವಿ

ಎಸ್‌ಪಿ ಲಕ್ಷ್ಮಣ ನಿಂಬರಗಿಗೆ ಪತ್ರ * ಕುಟುಂಬ ನಿಂದನೆಯ ಆರೋಪ

ವಿಜಯಪುರ: ಬಹಿರಂಗವಾಗಿ ನಿಂದಿಸಿದ್ದಲ್ಲದೇ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಸೂಕ್ತ ರಕ್ಷಣೆ ಕೋರಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ರಜಪೂತ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರಿಗೆ ಮನವಿ ಸಲ್ಲಿಸಿದರು.

ಸೋಮವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿ ಶಾಸಕ ಯತ್ನಾಳರ ಬೆದರಿಕೆಗೆ ಸಂಬಂಧಿಸಿದಂತೆ ಚರ್ಚಿಸಿದರು. ಪ್ರತ್ಯಕ್ಷವೋ ಪರೋಕ್ಷವೋ ಯತ್ನಾಳರು ಧಮ್ಕಿ ಹಾಕಿದ್ದು ಅವರಿಂದ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿದರು. ಜೊತೆಗೆ ಇದಕ್ಕೆ ಪೂರಕವಾಗಿ ವಿಡಿಯೋಗಳನ್ನೊಳಗೊಂಡ ಪೆನ್‌ಡ್ರೈವ್ ಸಹ ಇಲಾಖೆಗೆ ಹಸ್ತಾಂತರಿಸಿದರು.

‘ಕೆಲವು ದಿನಗಳ ಹಿಂದೆ ಶಾಸಕ ಯತ್ನಾಳರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಬಹಿರಂಗವಾಗಿಯೇ ನನಗೆ ಜೀವದ ಧಮ್ಕಿ ಹಾಕಿದ್ದಾರೆ, ನನ್ನ ಕುಟುಂಬದ ಬಗ್ಗೆ ಅತ್ಯಂತ ಅಸಂಬದ್ಧವಾದ ಪದ ಪ್ರಯೋಗಿಸಿದ್ದಾರೆ, ಸಾರ್ವಜನಿಕವಾಗಿಯೇ ಈ ರೀತಿ ನಿಂದನೆ ಮಾಡಿದ್ದಾರೆ, ಈ ಹಿಂದೆಯೂ ನನಗೆ ಅನೇಕ ಬಾರಿ ಈ ರೀತಿ ಜೀವದ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ, ಅವರು ನನ್ನ ವಿರುದ್ಧ ಹಾಕಿರುವ ಜೀವದ ಬೆದರಿಕೆಗೆ ಸಂಬಂಧಿಸಿದ ವಿಡಿಯೋಗಳನ್ನು ಸಹ ಸಾಕ್ಷಿಗಳನ್ನು ನೀಡಿರುವೆ, ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಈ ರೀತಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ, ಕೂಡಲೇ ಈ ಪ್ರಕರಣದ ತನಿಖೆ ನಡೆಸುವಂತೆ ರಜಪೂತ ಕೋರಿದರು.

ಯುವ ಮುಖಂಡ ನಂದು ಗಡಗಿ ಇತರರಿದ್ದರು.