ವಿಜಯಪುರ: ‘ಭ್ರಷ್ಟಾಚಾರ ಹಾಗೂ ನಕಲಿ ಹಿಂದೂತ್ವದ ಕುರಿತ ಮುಖವಾಡ ಬಯಲು ಮಾಡುತ್ತಿರುವುದನ್ನು ಸಹಿಸಲಾಗದೇ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾರ್ವಜನಿಕವಾಗಿಯೇ ಧಮ್ಕಿ ಹಾಕಿದ್ದು, ಈ ಕುರಿತು ಪೊಲೀಸ್ ಮಹಾನಿರೀಕ್ಷಕರಿಗೆ ಪತ್ರ ಬರೆಯುವೆ’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪರಶುರಾಮಸಿಂಗ್ ರಜಪೂತ ತಿಳಿಸಿದರು.
‘ಸ್ವಂತ ಬಲದಿಂದ, ಪರಿಶ್ರಮದಿಂದ ದುಡಿದು ಸಂಪಾದನೆ ಮಾಡಿ ಬಂಗಾರ ಹಾಕಿಕೊಂಡರೆ ತಪ್ಪೇನು? ನನ್ನನ್ನೇ ಉದ್ದೇಶಿಸಿ ಮಟಾಶ್ ಮಾಡುವುದಾಗಿ ಶಾಸಕ ಯತ್ನಾಳ ಹೇಳಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅವರ ವಿರುದ್ಧ ಪತ್ರೆ ಬರೆಯುವೆ’ ಎಂದ ಅವರು, ‘ಅವರು ಹಾಗೆ ಹೇಳಿದ್ದು ನನ್ನನ್ನು ಉದ್ದೇಶಿಸಿಯೇ ಎಂಬುದು ಮನದಟ್ಟಾಗಿದೆ. ಹೀಗಾಗಿ ಪತ್ರ ಬರೆಯುತ್ತಿದ್ದು, ಹಾಗೊಂದು ಹೇಳಿ ಇಲ್ಲವೆಂದಾದರೆ ಅವರು ಸ್ಪಷ್ಟಪಡಿಸಲಿ ನೋಡೋಣ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.
‘ಸತ್ಯ ಹರಿಶ್ಚಂದ್ರ ಎಂದು ಕರೆಯಿಸಿಕೊಳ್ಳುವ ಯತ್ನಾಳರು ಗೋಶಾಲೆ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ, ಲೀಜ್ ಪ್ರಾಪರ್ಟಿ ವಿಷಯವಾಗಿ ಗೋಶಾಲೆ ಹೆಸರಿನಲ್ಲಿ ಯತ್ನಾಳರು ಹಣ ಎತ್ತಿದರು, ಆಗ ನಾನು ವಿರೋಧಿಸಿದೆ, ನಾನು ಗೋಶಾಲೆ ಹೆಸರಿನಲ್ಲಿ ಹಣ ಪಡೆಯುತ್ತಿರುವೆ ಯಾರೂ ಏನೂ ಮಾಡಲ್ಲ ಎಂದು ದರ್ಪದಿಂದ ಹೇಳಿದ್ದರು, ಈ ರೀತಿ ಹಣ ಎತ್ತಿಯೇ ಗೋಶಾಲೆಯನ್ನು ತೆರೆದಿದ್ದಾರೆ, ಗೋಮಾತೆ ಹೆಸರಿನಲ್ಲಿಯೂ ಹಣ ಲೂಟಿ ಮಾಡುವ ಯತ್ನಾಳರದ್ದು ನಕಲಿ ಹಿಂದೂತ್ವ’ ಎಂದರು.
‘ಇನ್ನೂ ಪಕ್ಷವನ್ನೇ ಮಾಡಿಲ್ಲ, ಗಣೇಶೋತ್ಸವದಲ್ಲಿ ಘೋಷಣೆ ಮಾಡುವುದಾಗಿ ಹೇಳಿದ ಅವರು ದಸರಾ ಹಬ್ಬ ಬಂದರೂ ಜೆಸಿಬಿ ಘೋಷಣೆ ಮಾಡಿಲ್ಲ, ಇನ್ನೊಂದೆಡೆ ರಚನೆಯಾಗದಿರುವ ಜೆಸಿಬಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವುದು ಹಾಸ್ಯಾಸ್ಪದ. ಕೇವಲ ಬಿಜೆಪಿಯನ್ನು ಬ್ಲಾೃಕ್ಮೇಲ್ ಮಾಡಲು ಇಂಥ ನಾಟಕವಾಡುತ್ತಿದ್ದಾರೆ’ ಎಂದರು.
ಎಸ್ಐಟಿ ತನಿಖೆ ನಡೆಯಲಿ:
‘ಎಲ್ಬಿಎಸ್ ಮಾರುಕಟ್ಟೆ ಪ್ರಾಂಗಣ ಹಾಗೂ ಜಲನಗರದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಲೀಜ್ ನವೀಕರಣಕ್ಕಾಗಿ ಕೋಟ್ಯಂತರ ರೂ. ಅಕ್ರಮ ನಡೆದಿದೆ. ಇದರಲ್ಲಿ ನಗರ ಶಾಸಕರೇ ಶಾಮೀಲಾಗಿದ್ದಾರೆ, ಈ ಬಗ್ಗೆ ಎಸ್ಐಟಿ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬರುತ್ತದೆ, ಎಲ್ಬಿಎಸ್ ಮಾರುಕಟ್ಟೆ ಪ್ರಾಂಗಣದಲ್ಲಿ ಅವ್ಯವಹಾರ, ನಕಲಿ ಹಿಂದೂತ್ವದ ಮುಖ ಬಯಲು ಮಾಡುವ ಕಾರಣಕ್ಕಾಗಿಯೇ ನನಗೆ ಮಟಾಶ್ ಮಾಡುವುದಾಗಿ ಅವರು ಹೇಳಿದ್ದಾರೆ’ ಎಂದರು.
‘ಯುವಕರು ಯತ್ನಾಳರ ಬೆನ್ನು ಹತ್ತಿ ಕೇಸು ಹಾಕಿಸಿಕೊಂಡು ಹಾಳಾಗಬೇಡಿ, ನಾವೇ ಅವರ ಹಿಂದೆ ಬೆನ್ನು ಹತ್ತಿ ಹೈರಾಣಾಗಿದ್ದೇವೆ, ಅವರು ಕರೆ ನೀಡುತ್ತಾರೆ ನಂತರ ಓಡಿ ಹೋಗುತ್ತಾರೆ, ಈ ಹಿಂದೆ ವಿಜಯೋತ್ಸವ ವೇಳೆ ನಮ್ಮ ಮೇಲೆ ಕೇಸು ಹಾಕಿ ಆತ ಕೊಲ್ಹಾಪುರಕ್ಕೆ ಓಡಿ ಹೋಗಿದ್ದರು’ ಎಂದರು.
ಗಾಣಿಗ ಸಮಾಜದ ನಿಂದನೆ:
ಮುಖಂಡ ನಂದು ಗಡಗಿ ಮಾತನಾಡಿ, ‘ಬೆಳಗ್ಗೆ ಎದ್ದು ಗಾಣಿಗ ಸಮಾಜದ ಮುಖ ನೋಡಬಾರದು ಎಂದು ಶಾಸಕ ಯತ್ನಾಳ ನಮ್ಮ ಸಮಾಜವನ್ನು ನಿಂದಿಸಿದ್ದಾರೆ’ ಎಂದು ಮುಖಂಡ ನಂದು ಗಡಗಿ ಗಂಭೀರ ಆರೋಪ ಮಾಡಿದರು.
‘ನಮ್ಮ ಸಮಾಜದ ಬಗ್ಗೆ ಅಷ್ಟೊಂದು ಕೀಳುಮಟ್ಟದ ಪದ ಪ್ರಯೋಗ ಮಾಡಿರುವುದು ಎಷ್ಟು ಸರಿ? ಈ ಯತ್ನಾಳರ ಬಗ್ಗೆ ನ್ಯಾಯವಾದಿ ಖಾದ್ರಿ ಶಾಸಕ ಯತ್ನಾಳರ ಅವರ ವಿರುದ್ಧ ಮಾತನಾಡಿದಾಗ ಅವರ ಹಿಂಬಾಲಕರು ಮೌನವಾದರು, ಆದರೆ ನಾನೇ ಅಂದು ವಿರೋಧಿಸಿದೆ, ಆದರೆ ಇಂದು ನನಗೆ ಈ ರೀತಿ ನಡೆಸಿಕೊಳ್ಳುತ್ತಿದ್ದಾರೆ, ಯತ್ನಾಳರ ಹಿಂದೆ ಕಮೀಷನ್ ಏಜೆಂಟರೇ ತುಂಬಿಕೊಂಡಿದ್ದಾರೆ’ ಎಂದು ಆಪಾದಿಸಿದರು.