ವಿಜಯಪುರದ ದರ್ಗಾ ರಸ್ತೆಯಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶಾಸಕ ಬಸನಗೌಡ ಪಾಟೀಲ ಮಾತನಾಡಿದರು. ಎಂ.ಎಸ್. ಕರಡಿ, ರಾಜಶೇಖರ ಕುರಿಯವರ ಮತ್ತಿತರರಿದ್ದಾರೆ. 
ವಿಜಯಪುರ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

Mallamma K.P
ವಿಜಯಪುರ : ಧಾರ್ಮಿಕ ದತ್ತಿ ಇಲಾಖೆ ಮತ್ತು ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಿಸಿದ ೯೫ ಲಕ್ಷ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶುಕ್ರವಾರ ನಗರದಲ್ಲಿ ಭೂಮಿಪೂಜೆ ನೆರವೇರಿಸಿದರು.
ನಗರದ ವಾರ್ಡ್ ನಂ.೨ರಲ್ಲಿ ಬರುವ ಶಿವಬಸಪ್ಪ ಗದ್ದುಗೆ ದೇವಸ್ಥಾನದ ಬಳಿ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಿಸಿದ ೧೦ ಲಕ್ಷ ರೂ. ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ, ವೀರಭದ್ರೇಶ್ವರ ದೇವಸ್ಥಾನದ ಬಳಿ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಿಸಿದ ೧೫ ಲಕ್ಷ ರೂ. ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಹಾಗೂ ದರ್ಗಾದ ಕರಿಸಿದ್ದೇಶ್ವರ ದೇವಸ್ಥಾನ ಹತ್ತಿರ ಸನ್ ೨೦೨೫-೨೬ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಿಸಿದ ೭೦ ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಭೂಮಿಪೂಜೆ ಬಳಿಕ ಶಾಸಕರು ಸಾರ್ವಜನಿಕರ ಅಹವಾಲು ಆಲಿಸಿದರು. ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಹಾಲುಮತ ಸಮಾಜದ ಅಧ್ಯಕ್ಷ ಮಲ್ಲು ಯಾದವಾಡ, ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ, ಮುಖಂಡರಾದ ಭೀಮನಗೌಡ ಪಾಟೀಲ, ಸಾಯಬಣ್ಣ ಭೋವಿ, ಶಂಕರ ಬಾಲದಂಡಿ, ಈರಣ್ಣ ವಾಡೆದ ಮತ್ತಿತರರಿದ್ದರು.