ಇಂಡಿ ನಗರದಲ್ಲಿ ನಡೆದ ಬಿಎಲ್‌ಎ-2 ಕಾರ್ಯಾಗಾರವನ್ನುದ್ದೇಶಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. 
ವಿಜಯಪುರ

ಭಾರತೀಯ ಜನತಾ ಪಕ್ಷವೇ ನಮ್ಮ ಜಾತಿ, ಸಂಸದ ರಮೇಶ ಜಿಗಜಿಣಗಿ ಮಾರ್ಮಿಕ ನುಡಿ

ಪ್ರಮುಖ ಮುಖ್ಯಾಂಶಗಳು

  • ಜಾತಿ ವ್ಯವಸ್ಥೆ ಬಗ್ಗೆ ಮಹತ್ವದ ಹೇಳಿಕೆ
  • ಬಿಜೆಪಿಯೇ ನಮ್ಮ ಜಾತಿ-ತಾಯಿ
  • ಚುನಾವಣೆಯಲ್ಲಿ ಜಾತಿಗಾಗಿ ಪಕ್ಷ ತ್ಯಜಿಸಬೇಡಿ
  • ಜಾತಿಯಿಂದ ರಾಜಕಾರಣ ಸಾಧ್ಯವಿಲ್ಲ
ವಿಜಯಪುರ: ‘ಚುನಾವಣೆ ಬಂದಾಗ ಅಭ್ಯರ್ಥಿಯ ಜಾತಿ ಪರಿಗಣಿಸದೇ ಪಕ್ಷ ಗುರುತಿಸುವ ಕೆಲಸಬೇಕು, ಬಿಜೆಪಿಯ ತತ್ವ-ಸಿದ್ಧಾಂತ ಪರಿಗಣಿಸಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು, ಅದನ್ನು ಬಿಟ್ಟು ಜಾತಿ ಪರಿಗಣಿಸಿ ಪಕ್ಷಕ್ಕೆ ಅನ್ಯಾಯ ಮಾಡಬಾರದು, ನಮಗೆಲ್ಲ ಭಾರತೀಯ ಜನತಾ ಪಕ್ಷವೇ ಜಾತಿ, ಪಕ್ಷವೇ ನಮ್ಮ ತಾಯಿ’ ಎಂದು ಸಂಸದ ರಮೇಶ ಜಿಗಜಿಣಗಿ ಮಾರ್ಮಿಕವಾಗಿ ನುಡಿದರು.
ಇಂಡಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಬಿಎಲ್‌ಎ-2 ಕಾರ್ಯಾಗಾರ-2026’ರ ಉದ್ಘಾಟಿಸಿ ಮಾತನಾಡಿದ ಅವರು, ‘ಚುನಾವಣೆಗಳು ಬಂದಾಗ ಪಕ್ಷದ ಕಾರ್ಯಕರ್ತರು ಎಲ್ಲಿದ್ದಾರೆಂದು ಹುಡುಕಿದರೆ ಎಲ್ಲರೂ ಜಾತಿ ಆಧರಿಸಿ ಹೋಗಿರುತ್ತಾರೆ, ಇದು ಪಕ್ಷಕ್ಕೆ ಮಾಡುವ ದ್ರೋಹವಲ್ಲೇ? ನನಗೇನೂ ಜಾತಿ ಇಲ್ಲವೆ? ದಲಿತನಾದರೂ ನನಗೂ ಒಂದು ಜಾತಿ ಇದೆ. ನನ್ನ 48 ವರ್ಷಗಳ ರಾಜಕಾರಣದಲ್ಲಿ ಎಲ್ಲಿಯಾದರೂ ನನ್ನ ಪಕ್ಷದಲ್ಲೊಬ್ಬ ದಲಿತ ಇರುವುದನ್ನು ಗಮನಿಸಿದ್ದೀರಾ?’ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.
‘ಯಾವುದೇ ಒಂದು ಜಾತಿಯಿಂದ ರಾಜಕಾರಣ ಸಾಧ್ಯವಿಲ್ಲ, ವಿರೇಂದ್ರ ಪಾಟೀಲರ ಕಾಲಕ್ಕೆ 42ಜನ ಲಿಂಗಾಯತ ಶಾಸಕರಿದ್ದರು. ಸ್ವತಃ ವಿರೇಂದ್ರ ಪಾಟೀಲ ಲಿಂಗಾಯತರಾಗಿದ್ದರೂ ಅವರ ಜೊತೆ ಯಾರೂ ನಿಲ್ಲಿಲ್ಲ. ಹೀಗಾಗಿ ಜಾತಿ ಪರಿಗಣಿಸದೇ ಪಕ್ಷಕ್ಕೆ ಶ್ರಮಿಸಿ, ನಮ್ಮೆಲ್ಲರ ಭವಿಷ್ಯ ಪಕ್ಷದ ಏಳಿಗೆಯಲ್ಲಿ ಅಡಗಿದೆ’ ಎಂದರು.
‘ಮಹಾರಾಷ್ಟ್ರದ ಮತದಾರರನ್ನು ಅಕ್ರಮವಾಗಿ ಸೇರ್ಪಡೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ, ಅಂಥ ನಕಲಿ ಮತದಾರರ ಮಾಹಿತಿ ಕಂಡು ಬಂದರೆ ತಿಳಿಸಿ, ಖಂಡಿತ ಅಂಥವರನ್ನು ಮತದಾರರ ಪಟ್ಟಿಯಿಂದ ಕಿತ್ತೊಗೆಯುವ ಕೆಲಸ ಮಾಡುತ್ತೇನೆ, ಪಕ್ಷ ಬಲವರ್ಧನೆಗೆ ಇಳಿವಯಸ್ಸಿನಲ್ಲಿಯೂ ನಾನು ಗಟ್ಟಿಯಾಗಿದ್ದೇನೆ, ನೀವೂ ಗಟ್ಟಿಯಾಗಿ’ ಎಂದು ಜಿಗಜಿಣಗಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಮಾತೆತ್ತಿದರೆ ಮೋದಿ ಏನು ಮಾಡ್ಯಾನ? ಎಂದು ಕಾಂಗ್ರೆಸ್‌ನವರು ಟೀಕಿಸುತ್ತಾರೆ. ನೀವು ಅವರಿಗೆ ‘ಮೋದಿ ನೀವು ರೊಕ್ಕ ತಿನ್ನುವುದನ್ನು ತಡೆದಿದ್ದಾನೆ’ ಎಂದು ಹೇಳಿ, ಅಲ್ಲದೇ, ‘ಮೋದಿ ದೇಶದ ಅಭಿವೃದ್ಧಿ ಮಾಡಿದ್ದಾನೆ, ರೈತರ ಆದಾಯ ಹೆಚ್ಚಿಸಿದ್ದಾನೆ, ರೈಲ್ವೆ, ಬಂದರು, ವಾಯು ಸಾರಿಗೆ, ಸೈನ್ಯದ ಬಲವರ್ಧನೆ ಮಾಡಿದ್ದಾನೆ’ ಎಂದು ಹೆಮ್ಮೆಯಿಂದ ಉತ್ತರ ಕೊಡಿ ಎಂದು ಜಿಗಜಿಣಗಿ ಕಾರ್ಯಕರ್ತರಿಗೆ ಕರೆ ನೀಡಿದರು.
70 ವರ್ಷ ಕಾಂಗ್ರೆಸ್ ಮಾಡದ ಕೆಲಸವನ್ನು ಮೋದಿ ಕೇವಲ 16 ವರ್ಷದಲ್ಲಿ ಮಾಡಿ ತೋರಿಸಿದ್ದಾನೆ. ಪ್ರಪಂಚದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಬಿಜೆಪಿ ಜತ್ತಿನ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದೇಶದ ದಿಕ್ಕನ್ನೇ ಬದಲಿಸಿರುವ ಬಿಜೆಪಿಯಲ್ಲಿ ನಾವೆಲ್ಲ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಹೆಮ್ಮೆ ಎಂದು ಭಾವಿಸಬೇಕೆಂದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಕಾರ್ಯಕರ್ತರು ಯಾವಾಗಲೂ ಸನ್ನದ್ಧರಾಗಬೇಕು. ಪಕ್ಷ ಯಾರನ್ನೇ ಗುರುತಿ ಅಭ್ಯರ್ಥಿಯನ್ನಾಗಿಸಿದರೂ ಅವರನ್ನು ಗೆಲ್ಲಿಸಬೇಕೆಂದರು.
ಮುಖಂಡರಾದ ಕಾಸುಗೌಡ ಬಿರಾದಾರ, ವಿವೇಕಾನಂದ ಡಬ್ಬಿ, ಅನೀಲ ಜಮಾದಾರ, ದೇವೇಂದ್ರ ಕುಂಬಾರ, ಎಸ್.ಎ. ಪಾಟೀಲ, ರವಿ ವಗ್ಗೆ ಮತ್ತಿತರರಿದ್ದರು.