- ದುಪ್ಪಟ್ಟು ಹಣದಾಸೆ ತಂದ ಆಪತ್ತು
- ಉದ್ಯಮಿಗೆ ರೂ.1.20 ಕೋಟಿ ವಂಚನೆ
- ರೂ. 41.65 ಲಕ್ಷ ಕಳೆದುಕೊಂಡ ವೈದ್ಯ
ವಿಜಯಪುರ: ದುಪ್ಪಟ್ಟು ಹಣದಾಸೆಗೆ ಸ್ಟೇಡಿಂಗ್ ಹಾಗೂ ಗೋಲ್ಡ್ ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿ ಉದ್ಯಮಿಯೊಬ್ಬ 1.20 ಕೋಟಿ ರೂಪಾಯಿ ಕಳೆದುಕೊಂಡರೆ ಆನ್‌ಲೈನ್ ಷೇರು ವಹಿವಾಟಿನ ಹೆಸರಿನಲ್ಲಿ ವಂಚಕರು ಬೀಸಿದ ಬಲೆಗೆ ಬಿದ್ದ ವೈದ್ಯನೋರ್ವ ರೂ. 41.65 ಲಕ್ಷ ಕಳೆದುಕೊಂಡಿದ್ದಾರೆ...!
ಡಿಜಿಟಲ್ ತಂತ್ರಜ್ಞಾನ ವಿಕಸನಗೊಂಡಂತೆಲ್ಲ ಆನ್‌ಲೈನ್ ವಹಿವಾಟು ಕೂಡ ಹೆಚ್ಚಾಗುತ್ತಿದ್ದು ಜೊತೆಜೊತೆಗೆ ಮೋಸ, ವಂಚನೆ ಕೂಡ ಹೆಚ್ಚಾಗಿದೆ. ವಿಚಿತ್ರವೆಂದರೆ ಪ್ರಜ್ಞಾವಂತರೇ ಇಂಥದ್ದೊಂದು ವಂಚನೆಗೆ ಬಲಿಯಾಗುತ್ತಿದ್ದಾರೆ. ರಾತ್ರೋರಾತ್ರಿ ಶ್ರೀಮಂತರಾಗುವ ದುರಾಸೆಯೋ....ಹೆಚ್ಚಿನ ಹಣದ ವ್ಯಾಮೋಹದಿಂದಲೋ....ನಂಬಿಕೆದ್ರೋಹದಿಂದಲೋ ಕೋಟ್ಯಂತರ ರೂಪಾಯಿ ಮೋಸ-ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
ಇದೀಗ ಅಂಥ ವಂಚನೆ ಪ್ರಕರಣಗಳ ಸಾಲಿಗೆ ಜಿಲ್ಲೆಯ ಓರ್ವ ಉದ್ಯಮಿ ಹಾಗೂ ವೈದ್ಯನೋರ್ವ ಸೇರಿದ್ದು ಎರಡೂ ಪ್ರಕರಣದಲ್ಲಿ ಒಂದೂವರೆ ಕೋಟಿಗೂ ಅಧಿಕ ಹಣ ವಂಚನೆ ನಡೆದಿದೆ. ಈಗಾಗಲೇ ಸೈಬರ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಜೊತೆ ನಿರಂತರ ಜಾಗೃತಿಗೆ ಮುಂದಾಗಿರುವ ಪೊಲೀಸರು ಆನ್‌ಲೈನ್ ವಹಿವಾಟಿಗೂ ಮುನ್ನ ಎಚ್ಚರವಹಿಸುವಂತೆ ತಿಳಿವಳಿಕೆ ನೀಡುತ್ತಿದ್ದಾರೆ.
ರೂ.1.20 ಕೋಟಿ ವಂಚನೆ
ಟ್ರೇಡಿಂಗ್ ಹಾಗೂ ಗೋಲ್ಡ್ ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದರೆ ಎರಡು ತಿಂಗಳಲ್ಲಿ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ರೂ.1.20 ಕೋಟಿ ಪಡೆದು ವಂಚಿಸಿರುವ ಆರೋಪದಡಿ ಇಬ್ಬರ ವಿರುದ್ಧ ವಿಜಯಪುರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ನಗರದ ರಾಮಮಂದಿರ ರಸ್ತೆಯ ನಿವಾಸಿ, ಉದ್ಯಮಿ ಮೋಹನ ಭೀಮರಾವ್ ಕೌತಾಳ ಇಂಥದ್ದೊಂದು ಮೋಸಕ್ಕೆ ತುತ್ತಾಗಿದ್ದಾರೆ. 2024ರ ಅಕ್ಟೋಬರ್ 1ರಂದು ಬಾಪು ಅಲಿಯಾಸ್ ಅನಿರುದ್ಧ ಸಿಂಹ್ ಜಾಲಾ ಎಂಬಾತ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂ ಮೂಲಕ ಮೋಹನ ಕೌತಾಳ ಅವರನ್ನು ಸಂಪರ್ಕಿಸಿದ್ದ. ವಿಜಯಪುರದಲ್ಲಿ ಎಚ್‌ಪಿ ಗ್ಯಾಸ್ ಡೀಲರ್‌ಶಿಪ್ ಹೊಂದಿರುವ ಬಗ್ಗೆ ತಿಳಿದಿರುವುದಾಗಿ ಹೇಳಿಕೊಂಡಿದ್ದ ಆರೋಪಿ, ಟ್ರೇಡಿಂಗ್ ಮತ್ತು ಗೋಲ್ಡ್ ಬಾಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದರೆ ಸುಮಾರು ಎರಡು ತಿಂಗಳಲ್ಲಿ ದುಪ್ಪಟ್ಟು ಹಣ ನೀಡುವುದಾಗಿ ಆಮಿಷವೊಡ್ಡಿದ್ದ ಎನ್ನಲಾಗಿದೆ.
ಆರೋಪಿಯ ಮಾತನ್ನು ನಂಬಿದ ಕೌತಾಳ ಅವರು ರೂ.1.20 ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿದ್ದರು. ಬಳಿಕ ಆರೋಪಿ ಸೂಚಿಸಿದ ಮುಂಬೈನ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ರೂ.1.20 ಕೋಟಿ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಹಣ ವರ್ಗಾವಣೆ ಮಾಡಿದ ಬಳಿಕ ಮೂರು ತಿಂಗಳಾದರೂ ಭರವಸೆ ನೀಡಿದಂತೆ ಹಣ ಅಥವಾ ಲಾಭ ದೊರೆಯದ ಹಿನ್ನೆಲೆಯಲ್ಲಿ ಕೌತಾಳ ಅವರು ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ. ಆರಂಭದಲ್ಲಿ ಎರಡು ತಿಂಗಳಲ್ಲಿ ಹಣ ನೀಡುವುದಾಗಿ ಆರೋಪಿ ಭರವಸೆ ನೀಡಿದ್ದರೂ, ನಂತರವೂ ಹಣ ಮರಳಿಸದ ಹಿನ್ನೆಲೆಯಲ್ಲಿ ವಂಚನೆ ನಡೆದಿರುವುದು ಅರಿವಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಸಾಯ್ಲ ತಾಲ್ಲೂಕಿನ ಸಿದ್ದಾಸರ್ ಗ್ರಾಮದ ಬಾಪು ಅಲಿಯಾಸ್ ಅನಿರುದ್ಧ ಸಿಂಹ್ ಜಾಲಾ ಹಾಗೂ ಮುಂಬೈ ನಿವಾಸಿ ಮುಕೇಶ ಕುಮಾರ್ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ.
ರೂ.41.65 ಲಕ್ಷ ಕಳೆದುಕೊಂಡ ವೈದ್ಯ
ಆನ್‌ಲೈನ್ ಷೇರು ವಹಿವಾಟಿನಲ್ಲಿ ಭಾರಿ ಲಾಭ ಗಳಿಸಬಹುದು ಎಂದು ನಂಬಿಸಿ ವೈದ್ಯರೊಬ್ಬರಿಂದ ರೂ.41.65 ಲಕ್ಷ ಹಣ ಪಡೆದು ವಂಚಿಸಲಾಗಿದೆ.
ವಿಜಯಪುರದ ಜಯನಗರ ಕಾಲನಿ ನಿವಾಸಿ ವೈದ್ಯ ದಯಾನಂದ ಗನ್ನುರ ವಂಚನೆಗೊಳಗಾದ ವೈದ್ಯ. ಜುಲೈ 6ರಂದು ಅಪರಿಚಿತ ಮಹಿಳೆಯೊಬ್ಬರು ವಾಟ್ಸ್‌ಆ್ಯಪ್ ಮೂಲಕ ವೈದ್ಯರನ್ನು ಸಂಪರ್ಕಿಸಿ, ಆನ್‌ಲೈನ್ ಪ್ರೈಮರಿ ಟ್ರೇಡಿಂಗ್‌ನಲ್ಲಿ ನಷ್ಟವಾಗುತ್ತಿದೆ; ಷೇರು ವಹಿವಾಟು ನಡೆಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದ್ದಾಳೆ.
ಆಕೆಯ ಸೂಚನೆಯಂತೆ ವೈದ್ಯರು ಅಪ್ಲಿಕೇಷನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ನಂತರ ಸೋನಾಲಿ ನಾಯಕ ಮತ್ತು ಕುನಾಲ ಸೌಮ್ಯಾ ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದವರು, ತಾವು ಸೂಚಿಸುವ ಷೇರುಗಳಲ್ಲಿ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಅಪ್ಲಿಕೇಷನ್‌ನಲ್ಲಿ ಹಲವರು ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ ಎಂಬ ಚಾಟ್‌ಗಳನ್ನು ಕಳುಹಿಸಿ ವೈದ್ಯರನ್ನು ಹೂಡಿಕೆಗೆ ಪ್ರೇರೇಪಿಸಿದ್ದಾರೆ. ಇದನ್ನು ನಂಬಿದ ವೈದ್ಯರು ಜುಲೈ 8ರಿಂದ ಆಗಸ್ಟ್ 12ರವರೆಗೆ ತಮ್ಮ ಬ್ಯಾಂಕ್ ಖಾತೆಯಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ.41,65,100 ವರ್ಗಾವಣೆ ಮಾಡಿದ್ದಾರೆ. ಬಳಿಕ ಹಣ ವಾಪಸ್ ಆಗದ ಹಿನ್ನೆಲೆ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಆಸೆಯೇ ದುಃಖಕ್ಕೆ ಕಾರಣ. ಹಣ ಗಳಿಸುವ ಹಪಾಹಪಿಯಲ್ಲಿ ಅಡ್ಡ ಹಾದಿ ಹಿಡಿಯುತ್ತಿರುವುದೇ ಇಂಥ ವಂಚನೆ ಪ್ರಕರಣಗಳು ಹೆಚ್ಚಾಗಲು ಕಾರಣ. ಯಾವುದೇ ರೀತಿಯಲ್ಲಿ ಹಣ ಹೂಡುವ ಮುನ್ನ ಹತ್ತು ಬಾರಿ ಯೋಚಿಸಬೇಕು. ಪ್ರಕರಣವೊಂದರಲ್ಲಿ ಹೂಡಿಕಗೆ ಮಾಡಲು ಹೋದ ಉದ್ಯಮಿಗೆ ಕೆಲವರು ಪರಿಚಯ ಆಗಿದೆ. ನಂಬಿ ಮೋಸ ಹೋಗಿದ್ದಾರೆ. ಹಣ ಹೂಡುವ ಮುನ್ನ ನೀತಿ-ನಿಯಮಾವಳಿ ತಿಳಿಯಬೇಕು. ನಂಬಿ ಮೋಸಹೋಗಬಾರದು. ಆನ್‌ಲೈನ್ ವಂಚನೆ ಕುರಿತು ಜಾಗೃತಿ ವಹಿಸಬೇಕು.
— ಲಕ್ಷ್ಮಣ ನಿಂಬರಗಿ, ಎಸ್‌ಪಿ