ವಿಜಯಪುರ ಜಿಲ್ಲಾಡಳಿತಕ್ಕೆ ಬಸವಾಭಿಮಾನಿಗಳು ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಪ್ರಭುಗೌಡ ಪಾಟೀಲ, ಬಸನಗೌಡ ಹರನಾಳ ಇತರರಿದ್ದಾರೆ. 
ವಿಜಯಪುರ

ಬಸವೇಶ್ವರ-ಅಕ್ಕಮಹಾದೇವಿ ಅವಹೇಳನ, ಬಸವಾಭಿಮಾನಿಗಳಿಂದ ತೀವ್ರ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ಮಹಾತ್ಮರ ಬಗ್ಗೆ ಅಶ್ಲೀಲ ಪದ ಬಳಕೆ
  • ಸಾಮಾಜಿಕ ಜಾಲತಾಣದಲ್ಲಿ ನಿಂದನೆ
  • ಬಸವಾಭಿಮಾನಿಗಳಿಂದ ತೀವ್ರ ಆಕ್ರೋಶ
ವಿಜಯಪುರ: ವಿಶ್ವ ಗುರು ಬಸವಣ್ಣ ಹಾಗೂ ಶರಣೆ ಅಕ್ಕಮಹಾದೇವಿ ಕುರಿತು ಅವಹೇಳನಕಾರಿಯಾಗಿ ನಿಂದಿಸಿ, ಅಶ್ಲೀಲವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಬಸವಾಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಮಾಕಾಂತ ಎಂ. ಎಂಬಾತನ ಫೇಸ್‌ಬುಕ್ ಖಾತೆಯಲ್ಲಿ ಮಹಾತ್ಮ ಬಸವೇಶ್ವರ ಹಾಗೂ ಅಕ್ಕಮಹಾದೇವಿ ಕುರಿತು ಅಶ್ಲೀಲವಾಗಿ ಬರೆದು ಅವಮಾನಿಸಲಾಗಿದೆ. ಈ ಕೂರಿತು ಈಗಾಗಲೇ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಗುರುವಾರ ಜಿಲ್ಲಾಡಳಿತದ ಮೂಲಕ ಗೃಹ ಸಚಿವರಿಗೆ ಮನವಿ ಕೂಡ ಸಲ್ಲಿಸಲಾಯಿತು.
ಮುಖಂಡ ಅರವಿಂದ ಕುಲಕರ್ಣಿ ಹಾಗೂ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಭುಗೌಡ ಪಾಟೀಲ ಮಾತನಾಡಿ, ಸಾಮಾಜಿಕ ಸಮಾನತೆಯ ಕನಸು ಕಂಡ ಕ್ರಾಂತಿಕಾರಿ ಮನಸ್ಸುಳ್ಳ 12ನೇ ಶತಮಾನದ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರು ಹಾಗೂ ಶರಣೆ, ವೈರಾಗ್ಯ ನಿಧಿ ಅಕ್ಕಮಹಾದೇವಿ ಕುರಿತು ರಮಾಕಾಂತ ಎಂ. ಎಂಬ ವ್ಯಕ್ತಿ ಕೀಳುಮಟ್ಟದ ಅಶ್ಲೀಲ ಭಾಷೆಯಿಂದ ಬರೆದು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದನ್ನು ಗೀತಾ ಎಂ. ಹಿರೋಳಿ ಎಂಬ ಮಹಿಳೆ ಫೇಸ್‌ಬುಕ್ ನೋಡಿ ಹಂಚಿಕೊಂಡಿದ್ದಾರೆ. ಅದರಲ್ಲಿ ಬರೆದ ಭಾಷೆ ಅತಿ ಕೀಳು ಮಟ್ಟದಿಂದ ಕೂಡಿದೆ. ಇದರಿಂದ ಬಸವಾಭಿಮಾನಿಗಳ ಮನಸ್ಸಿಗೆ ನೋವುಂಟಾಗಿದೆ ಎಂದು ತಿಳಿಸಿದರು.
ರಮಾಕಾಂತ ಎಂ. ಎಂಬ ಹೆಸರಿನ ಫೇಸ್‌ಬುಕ್ ಬಳಕೆದಾರನು ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಆ ಮೂಲಕ ಒಂದು ಸಮುದಾಯ, ಜನಾಂಗದ ಧರ್ಮ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾನೆ. ಆತನ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸನಗೌಡ ಹರನಾಳ, ಭೋಗೇಶ ಸೋಲಾಪುರ, ಶಿವಾನಂದ ಬಿರಾದಾರ, ಶಿವಪ್ಪ ಮಾಳಗೊಂಡ, ಅಪ್ಪಾಸಾಹೇಬ ಶೇನಖೇಡ, ಅಡಿವೆಪ್ಪ ಸಾಲಗಲ್ಲ, ಚಂದ್ರಶೇಖರ ಘಂಟೆಪ್ಪಗೋಳ, ಮಹಾದೇವ ಬನಸೋಡೆ, ಕಿರಣ ಮೇಲಿನಕೇರಿ, ಎನ್.ಕೆ. ಕುಂಬಾರ, ಶ್ರೀನಿವಾಸ ರಾಜಗೋಪಾಲ ಶಹಾಪೂರ, ಮಲ್ಲಿಕಾರ್ಜುನ ಬಟಗಿ, ಶಶಿಕಲಾ ಕೊಟಗಿ, ವಿದ್ಯಾರಾಣಿ ತುಂಗಳ, ಸವಿತಾ ವಗ್ಗರ, ಸಂಗೀತಾ ಪೂಜಾರಿ, ರಾಜೇಶ್ವರಿ ಚೋಳಕೆ ಮತ್ತಿತರರಿದ್ದರು.