H-S-ANUPAMA 
ವಿಜಯಪುರ

ಬಸವಣ್ಣ ಮೊದಲ ಪ್ರಜಾಪ್ರಭುತ್ವವಾದಿ, ಡಾ.ಅನುಪಮಾರ ಅನುಪಮ ಭಾಷಣ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಮಟ್ಟದ ಪುಸ್ತಕ ಮೇಳ
  • ಮೂರನೇ ದಿನ ವಿಶೇಷ ಉಪನ್ಯಾಸ
  • ಶರಣರ ಕುರಿತು ಅಮೋಘ ಭಾಷಣ
ವಿಜಯಪುರ: ಶರಣ ಸಂಕುಲ ಅಂದರೆ ಜಾತಿ, ವರ್ಣ ರಹಿತವಾಗಿ ಎಲ್ಲರನ್ನೂ ಒಳಗೊಳ್ಳುವಿಕೆಯಾಗಿದೆ. ನುಡಿಯಲ್ಲಿ ಒಂದಾಗಿರುವ ಬಸವಾದಿ ಶರಣರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ. ಜಗತ್ತಿನಲ್ಲಿ ಕಾಯಕದ ಹೆಸರಲ್ಲಿ ಇರುವ ಏಕೈಕ ಧರ್ಮವೆಂದರೆ ಶರಣ ಧರ್ಮ, ಬಸವಣ್ಣ ಜಗತ್ತಿನ ಮೊದಲ ಪ್ರಜಾಪ್ರಭುತ್ವವಾದಿಯಾಗಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಎಚ್.ಎಸ್. ಅನುಪಮಾ ಹೇಳಿದರು.
ನಗರದ ದರಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ‘ಬಿಜಾಪುರ, ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ’ದ ಮೂರನೇ ದಿನವಾದ ಭಾನುವಾರದಂದು ಅವರು ಉಪನ್ಯಾಸ ನೀಡಿದರು.
ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು ತಮ್ಮ ಮನೆ ಮಾರಿ ಬಸವಾದಿ ಶರಣರ ವಚನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಣೆ ಮಾಡಿ ಶರಣ ಸಾಹಿತ್ಯವನ್ನು ನಮಗೆ ಕೊಟ್ಟಿದ್ದಾರೆ. ಅವರ ತ್ಯಾಗ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದರು.
ಆಧುನಿಕ ಸಾಹಿತ್ಯದಲ್ಲಿ ಕುಮಾರ ಕಕ್ಕಯ್ಯ ಪೋಳ ಕಾವ್ಯ ನಾಮದಲ್ಲಿ ಸಾಹಿತ್ಯ ರಚನೆ ಮಾಡಿ ಸಮಾಜದ ಅಂಕುಡೊಂಕು ತಿದ್ದಿದ ಬಿ.ಎಸ್. ಪೋಳ ನಮಗೆ ಮಾದರಿಯಾಗಿದ್ದಾರೆ. ಶರಣರ ಮಾರ್ಗದಲ್ಲಿ ನಾವು ಸಾಗಬೇಕಾದರೆ ಮೊದಲು ಪ್ರತಿಯೊಬ್ಬರೂ ತಮ್ಮ ಜಾತಿ ವರ್ಗವನ್ನು ಮರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಜೆ.ಎಸ್. ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ ಬ್ರಾಹ್ಮಣೇತರ ಚಳುವಳಿ ನೇತೃತ್ವ ವಹಿಸಿಕೊಂಡವರು ಡಾ.ಫ.ಗು. ಹಳಕಟ್ಟಿಯವರು. ಅದನ್ನು ನಮ್ಮ ಇತಿಹಾಸಕಾರರು ಮರೆತಿದ್ದಾರೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಅಂಬೇಡ್ಕರ್ ಅವರು ಸಾಕಷ್ಟು ಅಧ್ಯಯನ ಮಾಡಿ ಭಾರತದಲ್ಲಿ ಜನ್ಮ ತಳೆದ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಸಮಾನತೆಗಾಗಿ ಹೋರಾಟ ಮಾಡಿದ್ದಾರೆ. ಈ ಮೂವರು ದಾರ್ಶನಿಕರು ಮಾನವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಬಸವಣ್ಣನ ಕಾಯಕ ತತ್ವ ಅಳವಡಿಸಿಕೊಂಡರೆ ದೇಶಕ್ಕೆ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.
ಭಾರತೀಯ ಬೌದ್ದ ಮಹಾಸಭಾದ ಕಾರ್ಯದರ್ಶಿ ಬಸವರಾಜ ಹೋಳ್ಕರ್ ಮಾತನಾಡಿ, ಸಮಾಜದಲ್ಲಿನ ಅಸಮಾನತೆ ಅಂಧಕಾರ ಅಳಸಿ ಹಾಕಲು ಇಂದು ಪುಸ್ತಕ ಮೇಳಗಳ ಅವಶ್ಯಕತೆಯಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸನಗೌಡ ಹರನಾಳ, ರಾಷ್ಟ್ರೀಯ ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿದರು
ಚಂದ್ರಶೇಖರ ಗಂಟೆಪ್ಪಗೋಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖಂಡರಾದ ನಾಗರಾಜ ಲಂಬು, ಜಗದೇವ ಸೂರ್ಯವಂಶಿ, ಅಭಿಷೇಕ ಚಕ್ರವರ್ತಿ, ದಾನೇಶ ಅವಟಿ, ಜಂಬುನಾಥ ಕಂಚ್ಯಾಣಿ, ಮಿಲನಕುಮಾರ ನಾಮದಾರ, ಪ್ರಭುಗೌಡ ಪಾಟೀಲ, ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ, ವೈ.ಎಸ್. ಗುಣಕಿ, ಸಂಘರ್ಷ ಹೊಸಮನಿ, ಸುರೇಶ ಬಿಜಾಪುರ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಶಿವು ಕಟ್ಟಿಮನಿ, ಬೋಗೇಶ ಸೋಲಾಪುರ, ಅಪ್ಪಸಾಹೇಬ ಯರನಾಳ ಇತರರಿದ್ದರು.