ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಪೌರಾಡಳಿತ ಇಲಾಖೆ ಮನಗೂಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಚಿವ ಶಿವಾನಂದ ಪಾಟೀಲ ನೆರವೇರಿಸಿದರು. ಚಂದ್ರಶೇಖರ ಗೌಡ ಪಾಟೀಲ, ಶೆಕಪ್ಪಗೌಡ ಬಿರಾದಾರ, ವಿಶ್ವನಾಥಗೌಡ ಪಾಟೀಲ ಮತ್ತಿತರರಿದ್ದರು.
ಒಂದು ಕಾಲದಲ್ಲಿ ನಂಜುಂಡಪ್ಪ ವರದಿಯ ಪ್ರಕಾರ ಬಸವನಬಾಗೇವಾಡಿ ಮತಕ್ಷೇತ್ರ ಎಲ್ಲಾ ರಂಗದಲ್ಲಿ ಅಭಿವೃದ್ಧಿ ಕಾರ್ಯದಿಂದ ವಂಚಿತಗೊಂಡಿತು. ಕಳೆದ 30 ವರ್ಷದಲ್ಲಿ ನೀರಾವರಿ, ಕುಡಿಯುವ ನೀರು, ವಿದ್ಯುತ್, ರಸ್ತೆ, ಶೈಕ್ಷಣಿಕ, ಪ್ರವಾಸೋದ್ಯಮ, ಸೇರಿ ಸಾರ್ವಜನಿಕರಿಗೆ ಅಗತ್ಯ ಇರುವ ಎಲ್ಲಾ ಮೂಲ ಸೌಲಭ್ಯ ನೀಡುವ ಮೂಲಕ ಜಿಲ್ಲೆಯಲ್ಲಿ ಎಲ್ಲ ರಂಗದಲ್ಲಿ ಮಾದರಿ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಸೋಮವಾರ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಪೌರಾಡಳಿತ ಇಲಾಖೆ ಮನಗೂಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯ 2023-24ನೇ ಸಾಲಿನ ಎಸ್, ಎಫ್, ಸಿ ವಿಶೇಷ ಅನುದಾನ ಯೋಜನೆಯಡಿಯಲ್ಲಿ 2025-26 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ ಅಂದಾಜು 64.65ಲಕ್ಷ ರೂ. ವೆಚ್ಚದಲ್ಲಿ ವಿವಿಧ ವಾರ್ಡ್ಗಳಲ್ಲಿ ಸಿಸಿ ರಸ್ತೆ, ಉದ್ಯಾನವನ, ಮುಸ್ಲಿಂ ಸಮಾಜದ ದೈವದ ಕೋಣೆ, ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಆವರಣ ಉನ್ನತೀಕರಿಸುವುದು, ಸಂತ ಸೇವಾಲಾಲ್ ಸಮುದಾಯ ಭವನ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದ ಕೊಲ್ಹಾರ, ನಿಡಗುಂದಿ, ಮನಗೂಳಿ ಮೂರು ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಮೂರು ಪಟ್ಟಣದಲ್ಲಿ ಅನೇಕ ಮೂಲ ಸೌಲಭ್ಯ ನೀಡಲು ಈ ಯೋಜನೆ ಜಾರಿಗೆ ತರಲು ಸಹಕಾರವಾಗಿದೆ ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಿಂತು ನೀರಾಗದೆ ಹರಿವು ನೀರಾದಾಗ ಮಾತ್ರ ಅಭಿವೃದ್ಧಿ ಪಥದತ್ತ ಆ ಕ್ಷೇತ್ರ ಸಾಗಲು ಸಾಧ್ಯ. ಯಾವುದೇ ಕ್ಷೇತ್ರ ಅಭಿವೃದ್ಧಿ ಕಾರ್ಯದಿಂದ ವಂಚಿತವಾಗದೆ ಸಾರ್ವಜನಿಕರಿಗೆ ಅಗತ್ಯ ಇರುವ ಮೂಲ ಸೌಲಭ್ಯ ನೀಡಿದಾಗ ಮಾತ್ರ ಆ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಗೌಡ ಪಾಟೀಲ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರ ಶೆಕಪ್ಪಗೌಡ ಬಿರಾದಾರ, ಪ.ಪಂ ಸದಸ್ಯ ಅಜಿತ್ ಜಾನಕರ, ಭಾಗ್ಯರಾಜ್ ಸೊನ್ನದ, ವಿಜಯಕುಮಾರ ರಜಪೂತ್,ರಾಮಚಂದ್ರ ಪತ್ತಾರ, ಸಲಿಂ ಮಕಂದಾರ ರಮೇಶ್ ತೊರವಿ, ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ, ಜಿಲ್ಲಾ ಪಂಚಾಯತ್ ಎಇಇ, ವಿಲಾಸ ರಾಠೋಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಿಖಿಲ್ ಗೌಡ ಪಾಟೀಲ್ ಮತ್ತಿತರರಿದ್ದರು.