ಬೆಂಗಳೂರಿನ ರಾಜ್ಯಪಾಲರ ಕಚೇರಿಗೆ ಭೇಟಿ ನೀಡಿದ ಸ್ವಾಮೀಜಿಗಳು ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಆಹ್ವಾನ ನೀಡಿದರು. ಪೂಜ್ಯ ಹರ್ಷಾನಂದ ಸ್ವಾಮೀಜಿ, ಬಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಇದ್ದಾರೆ.
- ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಪುಣ್ಯಸ್ಮರಣೆ
- ‘ಗುರು ನಮನ’ಕ್ಕೆ ರಾಜ್ಯಪಾಲಗೆ ಆಹ್ವಾನ
- ಸ್ವಾಮೀಜಿಗಳಿಂದ ಥಾವರ್‌ಚಂದ್ ಗೆಹ್ಲೋಟ್‌ರ ಭೇಟಿ
ವಿಜಯಪುರ: ನಡೆದಾಡುವ ದೇವರು ಖ್ಯಾತಿಯ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳ ಮೂರನೇ ಪುಣ್ಯಸ್ಮರಣೆ ಹಿನ್ನೆಲೆ ಜ. 2ರಂದು ಆಯೋಜಿಸಲಾಗುತ್ತಿರುವ ‘ಗುರು ನಮನ’ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಆಹ್ವಾನ ನೀಡಲಾಯಿತು.
ಬೆಂಗಳೂರಿನ ಕಚೇರಿಯಲ್ಲಿ ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿದ ಪೂಜ್ಯ ಹರ್ಷಾನಂದ ಸ್ವಾಮೀಜಿ, ಬಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು ಕಾರ್ಯಕ್ರಮದ ಕುರಿತು ವಿವರಿಸಿ ಅಧಿಕೃತವಾಗಿ ಆಹ್ವಾನ ನೀಡಿದರು. ಪೂಜ್ಯ ಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಚಿಂತನೆಗಳ ಕುರಿತು ಶಾಂತ ಚಿತ್ತರಾಗಿ ಆಲಿಸಿದ ರಾಜ್ಯಪಾಲರು ಕಾರ್ಯಕ್ರಮಕ್ಕೆ ಬರಲು ಸಕಾರಾತ್ಮಕವಾಗಿ ಸ್ಪಂದಿಸಿದರು.
ಈಗಾಗಲೇ ಗುರುನಮನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಈವರೆಗೆ ಹಲವು ಪ್ರಮುಖರನ್ನು ಭೇಟಿ ಮಾಡಲಾಗಿದೆ. ಮುಂದುವರಿದ ಭಾಗವಾಗಿ ಇದೀಗ ರಾಜ್ಯಪಾಲರಿಗೆ ಆಹ್ವಾನ ನೀಡಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದಕ್ಕೆ ಸ್ವಾಮೀಜಿಗಳು ಹರ್ಷ ವ್ಯಕ್ತಪಡಿಸಿದ್ದಾರೆಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ‘ವಿಜಯವಾಣಿ’ಗೆ ತಿಳಿಸಿದರು.