`ಶ್ರೀ'ಗಳ ಭರ್ಜರಿ ಪ್ರವೇಶಕ್ಕೆ ಬಬಲೇಶ್ವರ ಅಣಿ 
ವಿಜಯಪುರ

`ಶ್ರೀ'ಗಳ ಭರ್ಜರಿ ಪ್ರವೇಶಕ್ಕೆ ಬಬಲೇಶ್ವರ ಅಣಿ

ಪ್ರಮುಖ ಮುಖ್ಯಾಂಶಗಳು

  • ಬಸವಾದಿ ಶರಣರ ಹಿಂದು ಸಮಾವೇಶಕ್ಕೆ ಸಿದ್ಧತೆ
  • ನೂರಾರು ಸಂತರ ಸಮಾಗಮಕ್ಕೆ ವೇದಿಕೆ ಸಜ್ಜು
ವಿಜಯಪುರ: ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ `ಪುರ ಪ್ರವೇಶ ನಿರ್ಬಂಧ'ದ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಬೆಳಗಾವಿ ಪೂರ್ವಭಾವಿ ಸಭೆಯಲ್ಲಿ ನಿರ್ಧಾರವಾದಂತೆ ಡಿ. 29ರಂದು ನಡೆಯಲಿರುವ `ಬಸವಾದಿ ಶರಣರ ಹಿಂದು ಸಮಾವೇಶ' ಕ್ಕೆ ಬಬಲೇಶ್ವರ ಸಜ್ಜಾಗಿದೆ.
ರಾಜ್ಯದ ವಿವಿಧ ಭಾಗಗಳ ನೂರಾರು ಸಂತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದಾಜು 25 ಸಾವಿರ ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಪೂರ್ವ ಸಿದ್ಧತೆ ಸಭೆಗಳನ್ನು ನಡೆಸಲಾಗಿದ್ದು, ಸಮಾವೇಶದ ರೂಪುರೇಷೆ ಸಿದ್ಧಗೊಂಡಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ-ವಿಭಿನ್ನ ಹೇಳಿಕೆಗಳು ಹರಿದಾಡುತ್ತಿದ್ದು, ಆರಂಭದಲ್ಲಿ ಸಮಾವೇಶದ ಕುರಿತಾಗಿದ್ದ ಅಭಿಪ್ರಾಯಗಳು ಬದಲಾಗತೊಡಗಿವೆ.
`ಬಸವಾದಿ ಶರಣರ ಹಿಂದು ಸಮಾವೇಶ' ಕೇವಲ ಹಿಂದುಗಳ ಜಾಗೃತಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಿರೋಳದ ರಾಮಾರೂಢ ಮಠದ ಪೂಜ್ಯ ಶಂಕರಾರೂಢ ಸ್ವಾಮೀಜಿ ಸ್ಪಷ್ಟಪಡಿಸಿದ್ದರು. ಸರ್ಕಾರದ ಹಿಂದು ವಿರೋಧಿ ನೀತಿ, ಸಮಾಜ ಒಡೆಯುವ ಮಂತ್ರಿಗಳ ನಿಯಂತ್ರಣ ಮತ್ತಿತರ ಅಂಶಗಳುಳ್ಳ ಕರಪತ್ರಗಳನ್ನು ಆಯೋಜಕರು ಹರಿಬಿಡುತ್ತಿದ್ದಾರೆ.
ಸರ್ಕಾರ ಸಮಾಜ ಕಟ್ಟುವ ಕೆಲಸ ಮಾಡಬೇಕು ವಿನಃ ಒಡೆಯುವ ನೇತೃತ್ವ ವಹಿಸಬಾರದು, ಹಿಂದು ಸಮಾಜ ಒಡೆಯುವ ಮಂತ್ರಿಗಳನ್ನು ನಿಯಂತ್ರಿಸಬೇಕು ಹಾಗೂ ವೀರಶೈವ -ಲಿಂಗಾಯತ ಸಮಾಜ ಒಗ್ಗೂಡಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಬಸವಾದಿ ಶರಣರ ಹಿಂದು ಸಮಾವೇಶ ಆಯೋಜಿಸಲಾಗಿದ್ದು ಹಿಂದು ಧರ್ಮೀಯರು ಸಮಾಜದ ಐಕ್ಯತೆಗಾಗಿ ಈ ಸಮಾವೇಶದಲ್ಲಿ ಭಾಗಿಯಾಗಬೇಕು' ಎಂಬ ಕರಪತ್ರ ಆಯೋಜಕರಿಂದ ಹರಿದಾಡುತ್ತಿದೆ.