ಪ್ರಮುಖ ಮುಖ್ಯಾಂಶಗಳು
ಸಮಾವೇಶಕ್ಕೆ ವಿಜಯಪುರದಿಂದ 2 ಸಾವಿರಕ್ಕೂ ಹೆಚ್ಚು ಬೈಕ್‌ಗಳು ರ‌್ಯಾಲಿ ಮೂಲಕ ಆಗಮಿಸಲಿವೆ. ಬಬಲೇಶ್ವರದ ಶಾಂತವೀರ ವೃತ್ತದಿಂದ 4 ಸಾವಿರ ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಅಣ್ಣ ಬಸವೇಶ್ವರ ವೃತ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಮಾರ್ಗದಲ್ಲಿ ಈ ಕುಂಭ ಮೆರವಣಿಗೆ ಸಾಗಲಿದೆ. ಹಿಂದೂ ಧರ್ಮ ಸಂಘಟನೆಯ ಏಕೈಕ ಉದ್ದೇಶದೊಂದಿಗೆ ಈ ಸಮಾವೇಶ ಆಯೋಜಿಸಲಾಗುತ್ತಿದೆ, ಅನೇಕ ಪೂರ್ವಭಾವಿ ಸಭೆಗಳನ್ನು ಬೆಳಗಾವಿ, ವಿಜಯಪುರ, ಬಬಲೇಶ್ವರದಲ್ಲಿ ನಡೆಸಲಾಗಿದೆ, ಸಾವಿರಾರು ಜನರು ಈ ಸಮಾವೇಶದಲ್ಲಿ ಭಾಗವಹಿಸುತ್ತಾರೆ.
ಬಬಲೇಶ್ವರದ ಶಾರದಾ ಶಾಲಾ ಮೈದಾನದಲ್ಲಿ ‘ಬಸವಾದಿಶರಣರ ಹಿಂದು ಸಮಾವೇಶ’ಕ್ಕೆ 60*100 ಅಳತೆಯ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇದೀಗ 500 ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸುವ ನಿರೀಕ್ಷೆ ಇದ್ದು, ಹಿಂದು ಧರ್ಮ ಚಿಂತಕರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅನೇಕರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳಿಗೂ ಸಮಾವೇಶದಲ್ಲಿ ಭಾಗವಹಿಸುವಂತೆ ಕೋರಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಳೆದೊಂದು ತಿಂಗಳಿನಿಂದ ಸಮಾವೇಶಕ್ಕೆ ಸಿದ್ಧತೆ ನಡೆಸಿದ್ದ ‘ಬಸವಾದಿಶರಣರ ಹಿಂದು ಸಮಾವೇಶ ಸಮತಿ’ಯ ಪದಾಧಿಕಾರಿಗಳು ಭಾನುವಾರ ಸಂಜೆ ಸಿದ್ಧತೆ ಪೂರ್ಣಗೊಳ್ಳುತ್ತಿದ್ದಂತೆ ಸಂಭ್ರಮಿಸಿದರು.
ವೇದಿಕೆ ಸಿದ್ಧತೆ, ಪಾರ್ಕಿಂಗ್ ಸೌಲಭ್ಯ, ಮೆರವಣಿಗೆ ಮಾರ್ಗ ಸ್ವಚ್ಛತೆ ಸೇರಿದಂತೆ ಹಲವು ಸಿದ್ಧತೆ ಪೂರ್ಣಗೊಳಿಸಿ ವೇದಿಕೆ ಮುಂಭಾಗದಲ್ಲಿ ಸಂಭ್ರಮಿಸಿದರು.ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪ್ರಮುಖರಾದ ವಿಜುಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಉಮೇಶ ಕೋಳಕೂರ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ರಾಜು ಬಿರಾದಾರ, ಪ್ರಭು ಹಿರೇಮಠ, ಮಲ್ಲು ಕನ್ನೂರ, ಈರಣ್ಣ ಶಿರಮಗೊಂಡ, ಕಲ್ಲಪ್ಪ ಕೊಡಬಾಗಿ, ವಿಜಯ್ ಜೋಶಿ, ಸಿದ್ದು ಮಲ್ಲಿಕಾರ್ಜುನಮಠ, ವಿಕಾಸ್ ಪದಕಿ, ಬಾಲರಾಜ ರೆಡ್ಡಿ, ಸಂಪತ್ ಕಾಳೆ ಮತ್ತಿತರರು ಇದ್ದರು.