ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭವನ್ನು ಚಿಂತಕ ಡಾ.ರಹಮತ್ ತರಿಕೇರಿ ಉದ್ಘಾಟಿಸಿದರು. ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ರಫೀ ಭಂಡಾರಿ, ಎಸ್.ಎಂ. ಪಾಟೀಲ ಗಣಿಹಾರ ಮತ್ತಿತರರಿದ್ದಾರೆ.
- ಶಿಕ್ಷಣ ಕೇವಲ ಉದ್ಯೋಗಕ್ಕೆ ಸೀಮಿತ ಬೇಡ
- ಉಪಜೀವನಕ್ಕಾಗಿ ಶಿಕ್ಷಣ ಎಂಬ ಧೋರಣೆ ಸಲ್ಲದು
- ಭಾರತೀಯ ಮಕ್ಕಳಿಗೆ ಸಾಂಸ್ಕೃತಿಕ ಶಿಕ್ಷಣ ಅವಶ್ಯ
- ರಾಜಕಾರಣಿಗಳಿಗೂ ಬೇಕು ಸಾಂಸ್ಕೃತಿಕತೆ ಅರಿವು
ವಿಜಯಪುರ: ‘ಇಂದಿನ ವಿದ್ಯಾರ್ಥಿಗಳು ಮತ್ತು ರಾಜಕಾರಣಿಗಳಿಗೆ ಸಾಂಸ್ಕೃತಿಕ ಶಿಕ್ಷಣದ ಅರಿವು ಮುಖ್ಯ’ವಾಗಿದೆ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ, ಚಿಂತಕ ಡಾ.ರಹಮತ್ ತರಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ನಾಗರಿಕರ ವೇದಿಕೆ ಹಾಗೂ ಅಮ್ಮ ಫೌಂಡೇಶನ್ ಸಹಯೋಗದಲ್ಲಿ ‘ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜಯಂತ್ಯುತ್ಸವ’ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
‘ವೃತ್ತಿಗಾಗಿ, ಬದುಕಿಗಾಗಿ, ಉಪಜೀವನಕ್ಕಾಗಿ ಮಾತ್ರ ಶಿಕ್ಷಣ ಎಂಬ ಧೋರಣೆ ಬದಲಾಗಬೇಕು. ಇಂದಿನ ಸಮಾಜಕ್ಕೆ ಸಾಂಸ್ಕೃತಿಕ ಶಿಕ್ಷಣದ ಅವಶ್ಯಕತೆ ತುಂಬ ಮಹತ್ವದ್ದಾಗಿದೆ. ಅನೇಕ ವಿದ್ಯಾರ್ಥಿಗಳು ಪ್ರತಿಭಾ ಸಂಪನ್ನರಾಗುತ್ತಿದ್ದಾರೆ, ಆದರೆ ನಮ್ಮ ನಾಡು ನುಡಿಯ ಸಾಂಸ್ಕೃತಿಯ ಸಿರಿವಂತಿಕೆಯ ಜ್ಞಾನ ಅವರಿಗಿಲ್ಲ. ನಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಪಠ್ಯಪುಸ್ತಕಗಳು ಹೊರತೆಗೆಯಬೇಕು. ಮಹಾತ್ಮ ಗಾಂಧೀಜಿ, ಪಂಡಿತ ನೆಹರೂ ಅವರ ಬಗ್ಗೆಯೂ ತುಚ್ಛವಾಗಿ ಮಾತನಾಡುವ ಕೆಟ್ಟ ಬೆಳವಣಿಗೆ ಬೆಳೆಯುತ್ತಿರುವುದು ನೋವಿನ ಸಂಗತಿ, ಶಿಕ್ಷಣ ಕೇವಲ ಕಸುಬಿಗಾಗಿ ಅಲ್ಲ, ಅದು ನಮ್ಮ ಬದುಕು ರೂಪಿಸಲು ಇರಬೇಕು ಎಂದರು.
ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಿಂತಕ ಡಾ.ರಹಮತ್ ತರಿಕೇರಿ, ರಫೀ ಭಂಡಾರಿ, ಎಸ್.ಎಂ. ಪಾಟೀಲ ಗಣಿಹಾರ ಮತ್ತಿತರರಿದ್ದಾರೆ.
ದೇಶ ವಿಭಜನೆಯನ್ನು ಖಂಡಿಸುತ್ತಲೇ ಇದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ತಮ್ಮ ಪುಸ್ತಕದಲ್ಲಿ ದೇಶ ವಿಭಜನೆ ವಿಷಯದ ಬಗ್ಗೆ ಅತ್ಯಂತ ನೋವು ತೋಡಿಕೊಂಡಿದ್ದಾರೆ. ಜಿನ್ನಾ ಒಬ್ಬ ಅಧಾರ್ಮಿಕ, ನಾಸ್ತಿಕ ಮನುಷ್ಯ. ಹೀಗಾಗಿ ಆತ ಮೌಲಾನಾ ಆಜಾದ್ ಅವರನ್ನು ದ್ವೇಷಿಸಿದ. ಧಾರ್ಮಿಕ ಪಂಡಿತರಾಗಿದ್ದರೂ ಆಧುನಿಕ ಶಿಕ್ಷಣ ಪ್ರತಿಪಾದಿಸಿದ ಮೌಲಾನಾ ಅಬುಲ್ ಕಲಾಂ ನಮ್ಮ ನೈಜ ಹಿರೋ ಎಂದರು.
ವಿಜಯಪುರ ಸಾಂಸ್ಕೃತಿಕವಾಗಿ ಶ್ರೀಮಂತ
ವಿಜಯಪುರ ಜಿಲ್ಲೆ ಆರ್ಥಿಕ ಬಡತನ ಹೊಂದಿದ್ದರೂ ಸಾಂಸ್ಕೃತಿಕ ಸಿರಿತನ ಹೊಂದಿದ ನೆಲ, ನನ್ನ ಆದಿಯಾಗಿ ಅನೇಕ ಸಂಶೋಧಕರಿಗೂ ವಿಜಯಪುರ ಕರ್ಮಭೂಮಿ ಎಂದ ತರಿಕೇರಿ ಅವರು, ಪ್ರತಿಭಾ ಸಂಪನ್ನವಾದ ವಿಜಯಪುರ ಜಿಲ್ಲೆ ಆರ್ಥಿಕವಾಗಿಯೂ ಸಧೃಡವಾಗಬೇಕಿದೆ. ವಿಜಯಪುರದಲ್ಲಿರುವ ಸಾಂಸ್ಕೃತಿಕ ಸಂಪತ್ತು, ಚಾರಿತ್ರಿಕ ಹಿನ್ನೆಲೆ, ವಿದ್ವತ್ ಸಿರಿವಂತಿಕೆ ಬಲು ದೊಡ್ಡದು, ನನ್ನ ಪ್ರತಿ ಸಂಶೋಧನೆಯಲ್ಲೂ ವಿಜಯಪುರದ ಮುದ್ರೆ ಇದ್ದೇ ಇದೆ ಎಂದು ಸ್ಮರಿಸಿದರು.
ಏಷ್ಯಾದಲ್ಲಿಯೇ ದೊಡ್ಡ ಸರ್ಕಸ್ ಕಂಪನಿ ಕಟ್ಟಿದ್ದ ವಿಷ್ಣುಪಂಥ ಛತ್ರೆ, ಲತಾ ಮಂಗೇಶ್ವರಗಿಂತಲೂ ಹಿಂದೆಯೇ ಗಾಯನ ರಂಗ ಆಳಿದ ಅಮೀರಬಾಯಿ ಕರ್ನಾಟಕಿ, ಸಂಶೋಧನೆಗೆ ಇನ್ನೊಂದು ಹೆಸರಾದ ಡಾ.ಎಂ.ಎಂ. ಕಲಬುರ್ಗಿ ಎಲ್ಲ ದಿಗ್ಗಜರು ವಿಜಯಪುರ ನೆಲದವರು ಎಂದರು.
ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ್ ಸದಸ್ಯ ರಫೀ ಭಂಡಾರಿ ಮಾತನಾಡಿ, ಶಿಕ್ಷಣ ರಂಗಕ್ಕೆ ಮೌಲಾನಾ ಅಬುಲ್ ಕಲಾಂ ಆಜಾದ್‌ರ ಕೊಡುಗೆ ಅನನ್ಯ. ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆದಿರುವ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕಿದೆ ಎಂದರು.
ಕೇವಲ ನಾವು ಚಿತ್ರನಟ, ಆಟಗಾರರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದೇವೆ, ದೇಶಕ್ಕಾಗಿ ಮಹೋನ್ನತ ಕೊಡುಗೆ ನೀಡಿದವರನ್ನೇ ನಾವು ಮರೆತಿದ್ದೇವೆ. ಅರಿವಿನ ಕೊರತೆಯಿಂದಾಗಿ ಈ ರೀತಿ ಯುವಕರಿಗೆ ನೈಜ ಮಹಾತ್ಮರ ಪರಿಚಯವಾಗುತ್ತಿಲ್ಲ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳು ಪ್ರಥಮಾದ್ಯತೆಯಾಗಿ ಬೋಧನೆಯಾಗಬೇಕಾಗಿರುವುದು ಅವಶ್ಯವಾಗಿದೆ ಎಂದರು.
ಖ್ಯಾತ ನೇತ್ರ ತಜ್ಞ, ಸಮಾಜ ಸೇವಕ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಮಾತನಾಡಿ, ಪ್ರಯತ್ನದಿಂದ ಯಶಸ್ಸು ಸಾಧ್ಯ, ಹೀಗಾಗಿ ಯಶಸ್ಸಿನತ್ತ ನಮ್ಮ ಪ್ರಯತ್ನ ನಿರಂತರವಾಗಿರಲಿ ಎಂದರು.
ನಾಗರಿಕರ ವೇದಿಕೆ ಸಂಚಾಲಕ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಉನ್ನತ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿರುವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ನಾಡಿನ ಶಿಕ್ಷಣ ರಂಗಕ್ಕೆ ನೀಡಿದ ಕೊಡುಗೆ ಅನನ್ಯ, ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಕ್ರೀಯವಾಗಿ ತೊಡಗಿಸಿಕೊಂಡ ಅವರು ಜೈಲು ಶಿಕ್ಷೆ ಅನುಭವಿಸಿದರೂ ಹೋರಾಟದಿಂದ ಹಿಂದೆ ಸರಿಯಲಿಲ್ಲ, ಇಂತಹ ಮಹನೀಯರ ಆದರ್ಶಗಳು ನಮಗೆ ಮಾರ್ಗದರ್ಶಿಯಾಗಬೇಕೆಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ಸಿ. ಮುಲ್ಲಾ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಲಾಹುದ್ದೀನ್ ಪುಣೇಕರ, ನ್ಯಾಯವಾದಿ ನಾಗರಾಜ್ ಲಂಬು, ಫಯಾಜ್ ಕಲಾದಗಿ ಮತ್ತಿತರರಿದ್ದರು.
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹ.ಮ. ಪೂಜಾರ, ಬಿಜ್ಜರಗಿ ಸೋಮಲಿಂಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಸವರಾಜ ಸಂಪಳ್ಳಿ, ಸುನೀಲ ಕಾಂಬಳೆ, ಪರಶುರಾಮ ಭಾಸಗಿ, ಸುರೇಶ ಬಿಜಾಪೂರ, ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಯಡಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಅಮ್ಮ ಫೌಂಡೇಷನ್ ಸಂಚಾಲಕ ಕಬೂಲ್ ಕೊಕಟನೂರ ಕಾರ್ಯಕ್ರಮ ನಿರೂಪಿಸಿದರು.