ವಿಜಯಪುರ ನಗರದ ಸರ್ಕಾರಿ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. 
ವಿಜಯಪುರ

ನಿಗದಿತ ಅವಧಿಯಲ್ಲಿ ಕಚೇರಿಗೆ ಹಾಜರಾಗಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಆನಂದ ಕೆ. ಸೂಚನೆ
  • ಹೆಚ್ಚುತ್ತಿರುವ ತಾಪಮಾನ ಹಿನ್ನೆಲೆ ಸರ್ಕಾರಿ ಕಚೇರಿಯ ಸಮಯ ಬದಲಾವಣೆ
ವಿಜಯಪುರ: ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆ ಸರ್ಕಾರಿ ಕಚೇರಿಯ ವೇಳಾಪಟ್ಟಿ ಬದಲಾಗಿದ್ದು, ನಿಗದಿತ ಅವಧಿಯಲ್ಲಿ ಕಚೇರಿಯಲ್ಲಿರುವಂತೆ ಅಧಿಕಾರಿಗಳಿಗೆ ಡಿಸಿ ಡಾ. ಆನಂದ ಕೆ. ಖಡಕ್ ಸೂಚನೆ ನೀಡಿದ್ದಾರೆ.
ಬುಧವಾರ ನಗರದ ವಿವಿಧ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, 2026ನೇ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನೆಲೆ ಏಪ್ರಿಲ್ 1ರಿಂದ ಸರ್ಕಾರಿ ಕಚೇರಿ ಸಮಯ ಬದಲಾವಣೆಯಾಗಿದೆ. ಹೀಗಾಗಿ ಕೆಲವರು ಕಚೇರಿಗೆ ಸಕಾಲಕ್ಕೆ ಬರುವರೋ ಇಲ್ಲವೋ ಎಂಬುದನ್ನು ಗಮನಿಸಲು ಜಿಲ್ಲಾಧಿಕಾರಿಗಳು ಬುಧವಾರ ದಿಢೀರ್ ಭೇಟಿ ನೀಡಿದರು.
ನಗರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸೇರಿ ವಿವಿಧ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದರು. ಅಧಿಕಾರಿ, ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. ಎಲ್ಲ ಅಧಿಕಾರಿ, ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು. ದೈನಂದಿನ ಕಚೇರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಯಾವುದೇ ಸಿಬ್ಬಂದಿ ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಳ್ಳದೇ ಕಾರ್ಯ ನಿರ್ವಹಿಸುವ ಮೂಲಕ ಕಡತಗಳನ್ನು ವಿಲೇವಾರಿಯಲ್ಲಿ ಪ್ರಗತಿ ಸಾಧಿಸಬೇಕು. ತಮ್ಮ ಎಂದಿನ ಕೆಲಸ ಕಾರ್ಯಗಳಿಗೆ ಆಯಾ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸ್ಪಂದನೆ ನೀಡಬೇಕು. ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಬೇಕು. ಯಾವುದೇ ಲೋಪ-ದೋಷ ಉಂಟಾಗದಂತೆ ಕಾರ್ಯ ನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸರ್ಕಾರಿ ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನನುಕೂಲವಾಗದಂತೆ ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶನ ನೀಡಿದರೆ ಸಮಯದ ಮಿತಿಯಿಲ್ಲದೇ ಕೆಲಸ ನಿರ್ವಹಿಸಬೇಕೆಂದರು.