- ವೈದ್ಯಕೀಯ ಕಾಲೇಜ್ ಸಮಸ್ಯೆ ಇತ್ಯರ್ಥ
- ಬೆನ್ನಲ್ಲೇ ಜವಳಿ ಪಾರ್ಕ್ ಸ್ಥಾಪನೆ ಚರ್ಚೆ
- ಖಾಸಗಿ ಸಹಭಾಗಿತ್ವಕ್ಕೆ ನೀಡಲು ಕ್ರಮ
ವಿಜಯಪುರ: ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ)ದಡಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ನಿರ್ಧಾರದಿಂದ ರಾಜ್ಯ ಸರ್ಕಾರದ ಹಿಂದೆ ಸರಿಯುತ್ತಿದ್ದಂತೆ ಮತ್ತೊಂದು ಮಹತ್ತರ ಯೋಜನೆಯನ್ನು ಅದೇ ಮಾದರಿಯಲ್ಲಿ ಸ್ಥಾಪಿಸುವ ನಿರ್ಧಾರ ಪ್ರಕಟಗೊಂಡಿದೆ !
ಜಿಲ್ಲೆಯ ಬಹುದಿನದ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಮತ್ತು ಪಿಪಿಪಿ ಮಾದರಿಯನ್ನು ವಿರೋಧಿಸಿ ಹುಟ್ಟಿಕೊಂಡ ಹೋರಾಟ ಸಮಿತಿ ಸುದೀರ್ಘ 115 ದಿನಗಳ ಕಾಲ ಹೋರಾಡಿ, ಜೈಲಿಗೆ ಹೋಗಿ ಕೊನೆಗೂ ಜಯ ಧಕ್ಕಿಸಿಕೊಂಡಿದೆ. ಇದೀಗ ಅದೇ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರ ಹೇಳಿಕೆ ಮತ್ತೊಂದು ಚರ್ಚೆ, ಹೋರಾಟಕ್ಕೆ ಮುನ್ನುಡಿ ಬರೆದಿದೆ.
2026ರ ಜ. 21ರಂದು ವಿಧಾನ ಸಭೆ ಅಧಿವೇಶನದಲ್ಲಿ ವಿಪ ಸದಸ್ಯ ಕೇಶವ ಪ್ರಸಾದ್ ಎಸ್ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವ ಶಿವಾನಂದ ಪಾಟೀಲರು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿಯಡಿ ಜವಳಿ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜ್‌ನ್ನೇ ವಿರೋಧಿಸಿದ್ದ ಸಚಿವ ಶಿವಾನಂದ ಪಾಟೀಲರು ಇದೀಗ ಜವಳಿ ಪಾರ್ಕ್ ಸ್ಥಾಪನೆಗೆ ಅದೇ ಪಿಪಿಪಿ ಮಾದರಿ ಅನ್ವಯಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಏನಿದು ಯೋಜನೆ?
ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗಬೇಕೆಂಬುದು ಬಹುದಿನದ ಕನಸು. 2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ವಿಜಯಪುರದಲ್ಲಿ ‘ಜವಳಿ ಪಾರ್ಕ್ ಸ್ಥಾಪನೆ’ ಬಗ್ಗೆ ಉಲ್ಲೇಖಿಸಲಾಗಿತ್ತು. ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಲಬುರಗಿ-ವಿಜಯಪುರದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ವೇಳೆ ಉಲ್ಲೇಖಿಸಿದ್ದರು. ಆ ಪ್ರಕಾರ ಪ್ರಸ್ತಾವನೆ ಕೂಡ ಸಲ್ಲಿಸಲಾಗಿತ್ತು. ಕೇಂದ್ರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿತ್ತು. ಸ್ಥಳೀಯ ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿ ಫೋಟೊ ಸಹಿತ ವಿವರ ನೀಡಿದ್ದರು. ಆದರೆ, ವಿಜಯಪುರಕ್ಕೆ ಬದಲಾಗಿ ಕಲಬುರಗಿಯೊಂದಕ್ಕೇ ಜವಳಿ ಪಾರ್ಕ್ ಮಂಜೂರಾಯಿತು. ಕಾರಣ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಪೂರಕ ವಾತಾವರಣ ಇದೆ ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದ್ದಾಗಿತ್ತು.
ಪಿಎಂ-ಮಿತ್ರ ಯೋಜನೆಯಡಿ ಜವಳಿ ಪಾರ್ಕ್ ಸ್ಥಾಪಿಸಲು 2022 ಮಾ. 8 ರಂದೇ ಕೇಂದ್ರ ಸರ್ಕಾರಕ್ಕೆ ಪ್ರಾಥಮಿಕ ಯೋಜನಾ ವರದಿ ಸಲ್ಲಿಸಲಾಗಿತ್ತಲ್ಲದೇ ಮುಳವಾಡ ಕೈಗಾರಿಕೆ ವಸಾಹತು ಪ್ರದೇಶದಲ್ಲಿ 12 ರಿಂದ 13 ನೂರು ಎಕರೆ ಜಾಗೆ ಕೂಡ ಗುರುತಿಸಲಾಗಿತ್ತು. ಆಲಮಟ್ಟಿ ಜಲಾಶಯದ ನೀರಿನ ಸೌಲಭ್ಯ, ಎನ್‌ಟಿಪಿಸಿಯಿಂದ ಸಿಗುವ ವಿದ್ಯುತ್ ಸೌಕರ್ಯ ಹೀಗೆ ಮುಂತಾದ ಅನುಕೂಲತೆಗಳಿಂದಾಗಿ ವಿಜಯಪುರ ಜಿಲ್ಲೆಯಲ್ಲಿಯೂ ಪೂರಕ ವಾತಾವರಣ ಇದೆ ಎಂದು ಸಚಿವ ಶಿವಾನಂದ ಪಾಟೀಲ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದರಾದರೂ ಯೋಜನೆ ಕಾರ್ಯಗತಗೊಂಡಿರಲಿಲ್ಲ.
ಸ್ಥಳ-ಯೋಜನೆ ಸ್ವರೂಪ ಬದಲು
ಇದೀಗ ಸ್ಥಳ ಹಾಗೂ ಯೋಜನೆಯ ಸ್ವರೂಪ ಬದಲಿಸುತ್ತಿರುವುದು ಸಚಿವರ ಉತ್ತರದಿಂದ ತಿಳಿದು ಬಂದಿದೆ. ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ ರಿಸನಂ 319ರಲ್ಲಿ 15 ಎಕರೆ ಗಾಯರಾಣ ಜಮೀನು ಗುರುತಿಸಲಾಗಿದೆ. ಈ ಜಮೀನು ಕೈಮಗ್ಗ ಹಾಗೂ ಜವಳಿ ಇಲಾಖೆಯ ಹೆಸರಿಗೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಮೀನು ಮಂಜೂರಿಸುತ್ತಿದ್ದಂತೆ ಯೋಜನೆ ಮಾರ್ಗಸೂಚಿ ಅನ್ವಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಸರ್ಕಾರದಿಂದಲೇ ಜವಳಿ ಪಾರ್ಕ್ ಸ್ಥಾಪಿಸಬೇಕಲ್ಲದೇ ಈ ‘ಪಿಪಿಪಿ’ ಮಾದರಿ ಎಂಬ ಪೆಡಂಭೂತವನ್ನು ಬೇರು ಸಮೇತ ಕಿತ್ತೊಗೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಒಪ್ಪಿದ್ದಾರೆ. ಹೀಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಒತ್ತಾಯಿಸಲಾಗುತ್ತಿದೆ. ಇದೀಗ ಜವಳಿ ಪಾರ್ಕ್ ಕೂಡ ಪಿಪಿಪಿ ಮಾದರಿಯಲ್ಲಿ ಮಾಡುತ್ತಿರುವ ವಿಚಾರವನ್ನೂ ಹೋರಾಟ ಸಮಿತಿ ಮುಂದೆ ಇಡಲಾಗುವುದು. ಎಲ್ಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಪಿಪಿಪಿ ಮಾದರಿಗೆ ನಮ್ಮ ವಿರೋಧ ಇದ್ದೇ ಇದೆ. ಎಲ್ಲವನ್ನೂ ಪಿಪಿಪಿ ಮಾಡುತ್ತಾ ಹೋದರೆ ಸರ್ಕಾರಿ ವ್ಯವಸ್ಥೆಗೆ ಬೆಲೆ ಏನು? ಹಾಗಾದರೆ ಸರ್ಕಾರವನ್ನೇ ‘ಪಿಪಿಪಿ’ ಮಾದರಿಗೆ ಕೊಟ್ಟು ಬಿಡಬಹುದಲ್ಲವೇ?