ವಿಜಯಪುರ ನಗರದಲ್ಲಿ ರೈತರ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಧರಣಿ ನಡೆಸಿದರು. 
ವಿಜಯಪುರ

ಪ್ರತಿ ಟನ್ ಕಬ್ಬಿಗೆ ರೂ. ೩೫೦೦ ಬೆಲೆ ಘೋಷಣೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘಟನೆಗಳ ಒಕ್ಕೋರಲ ಆಗ್ರಹ
  • ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭ
ವಿಜಯಪುರ: ಪ್ರತಿ ಟನ್ ಕಬ್ಬಿಗೆ ರೂ. ೩೫೦೦ ದರ ನಿಗದಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ ಸೇರಿ ವಿವಿಧ ಸಂಘಟನೆಗಳು ಮಂಗಳವಾರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದವು. 
ನಗರದ ಮಹಾತ್ಮ ಗಾಂಧಿ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತ ಸಂಘಟನೆಗಳು ಮುಖಂಡರು ಹಾಗೂ ಪದಾಧಿಕಾರಿಗಳು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಇರುವ ಗಗನ ಮಹಲ್ ಆವರಣದ ಮುಂಭಾಗ ಧರಣಿಗೆ ಮುನ್ನುಡಿ ಬರೆದರು. ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೊಷಣೆ ಮೊಳಗಿಸಿದರು. 
ಕಬ್ಬು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಪ್ರಕೃತಿ ವಿಕೋಪದ ನಡುವೆಯೂ ಅಳಿದುಳಿದ ಕಬ್ಬಿಗೆ ಉತ್ತಮ ದರ ನಿಗದಿಗೊಳಿಸಿದರೆ ಅನ್ನದಾತರು ಬದುಕಿಕೊಳ್ಳಲಿದ್ದಾರೆ. ಇಲ್ಲವಾದರೆ ಆತ್ಮಹತ್ಯೆಯ ದಾರಿ ಹಿಡಿಯುವ ಸ್ಥಿತಿ ನಿರ್ಮಾಣವಾಗಲಿದೆ. ಈಗಾಗಲೇ ಅನೇಕ ರೈತರು ಆತ್ಮಹತ್ಯೆಯಂಥ ದುರ್ಮಾರ್ಗ ಕಂಡುಕೊಂಡಿದ್ದಾರೆ. ಹೀಗಾಗಿ ಸರ್ಕಾರ ರೈತರು ಬೆಳೆದ ಕಬ್ಬಿಗೆ ಉತ್ತಮ ದರ ನೀಡಿ ಹಿತ ಕಾಯಬೇಕೆಂದು ಒತ್ತಾಯಿಸಿದರು.
ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕಾರ್ಮಿಕರ ವೇತನ ಹೀಗೆ ವಿವಿಧ ರೀತಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿ ಟನ್ ಕಬ್ಬಿಗೆ ೩೫೦೦ ರೂ. ಘೋಷಣೆಮಾಡಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಮಾಡಬೇಕು. ಸಕ್ಕರೆ ಜೊತೆಗೆ ಉಪ ಉತ್ಪನ್ನಗಳಿಂದ ಹೆಚ್ಚಿನ ಲಾಭ ಪಡೆಯುತ್ತಿರುವ ಕಾರ್ಖಾನೆಗಳು ರೈತರಿಗೆ ಅದರಲ್ಲಿಯೂ ಯೋಗ್ಯ ಲಾಭ ನೀಡಬೇಕು. ಬಾಕಿ ಉಳಿಸಿಕೊಂಡಿರುವ ರೈತರ ಬಿಲ್‌ನ್ನು ಬೇಗನೆ ಪಾವತಿ ಮಾಡಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಯಲ್ಲಿದೆ ಎಂದರು.
ಮನಗೂಳಿಯ ಸಂಗನಬಸವ ಸ್ವಾಮೀಜಿ, ರೈತ ಮುಖಂಡರಾದ ರಾಹುಲ ಕುಬಕಡ್ಡಿ, ಕಲ್ಲು ಸೊನ್ನದ, ಸಂಗಮೇಶ ಸಗರ, ರಾಮನಗೌಡ ಪಾಟೀಲ, ಅಭಿಷೇಕ ಹೂಗಾರ, ಪ್ರಕಾಶ ತೇಲಿ, ಜಕರಾಯ ಪೂಜಾರಿ, ವೀರಣ್ಣ ಸಜ್ಜನ, ಸಂಗಪ್ಪ ಠಕ್ಕೆ, ಅನಾಮೇಶ ಜಮಖಂಡಿ, ಸೋಮು ಬಿರಾದಾರ, ಸಾತಲಿಂಗಯ್ಯ ಸಾಲಿಮಠ, ಈರಪ್ಪ ಕೂಳೆಕುಮಟಗಿ, ಮಾಳು ಪೂಜಾರಿ, ಮಹಾಂತಗೌಡ ಬಿರಾದಾರ, ಸಿದ್ರಾಮಪ್ಪ ಹೊರ್ತಿ, ಸೀತಪ್ಪ ಗಣಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಬಸವರಾಜ ತಾಳಿಕೋಟೆ, ಶ್ರೀಶೈಲ ಮುಳಜಿ, ಶ್ರೀಕಾಂತ ರಾಠೋಡ, ರವಿ ಗೊಳಸಂಗಿ. ಭಾರತ್ ಕಿಸಾನ್ ಸಂಘದ ಮುಖಂಡ ಮಲ್ಲನಗೌಡ ಬಿರಾದಾರ, ಭೀಮಸೇನ ಕೊಕರೆ, ಗುರುನಾಥ ಬಗಲಿ, ಅರುಣಗೌಡ ತೇರದಾಳ. ಉತ್ತರ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ, ಜಿಲ್ಲಾ ಗೌರವಾಧ್ಯಕ್ಷ ಬಾಪೂಗೌಡ ಬಿರಾದಾರ, ರಾಜ್ಯ ಕಾರ್ಯದರ್ಶಿ ಪೀರು ಕೆರೂರ, ದಡಾಪೀರ್ ಮುಜಾವರ, ರಾಮು ದೇಸಾಯಿ, ಡಿಎಸ್‌ಎಸ್ ಮುಖಂಡರಾದ ಮಾಂತೇಶ ಸಾಸಾಬಾಳ, ಅರವಿಂದ ಕೊಪ್ಪ, ಜಗದೀಶ ಸುನಗದ, ಸುಜಾತಾ ಅವಟಿ, ಸಂಗೀತಾ ರಾಠೋಡ, ಲಕ್ಷ್ಮೀ ಬಿರಾದಾರ, ಬೋರಮ್ಮ ಕುಂಬಾರ, ಚನ್ನಮ್ಮ ಮೈತ್ರಿ ಮತ್ತಿತರರಿದ್ದರು.