ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಜವಾರಿ ದೇಸಿ ತಳಿ ಜಾನುವಾರು ಸಂವರ್ಧನಾ ಕೇಂದ್ರದ ನಿರ್ಮಾಣ ಕಾಮಗಾರಿಗೆ ಮಾಜಿ ಸಚಿವ ಶಿವಾನಂದ ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಡಾ. ಆರ್.ಎಸ್. ಪದರಾ, ಯಮನಪ್ಪ ಸೋಮನಕಟ್ಟಿ, ವೆಂಕಟೇಶ ವಂದಾಲ, ಡಾ. ಪಂಚಾಕ್ಷರಿ ಸಂಕ, ಡಾ. ಪದ್ಮಾ ದೊಡ್ಡಮನಿ, ಡಾ. ಬಸವರಾಜ ಕನಮಡಿ ಇತರರಿದ್ದರು. 
ವಿಜಯಪುರ

ಪಶುಪಾಲನೆ ರೈತರಿಗೆ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಶಿವಾನಂದ ಪಾಟೀಲ
  • ‘ಜವಾರಿ ದೇಸಿ ತಳಿ ಜಾನುವಾರು ಸಂವರ್ಧನಾ ಕೇಂದ್ರ’ದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಬಸವನಬಾಗೇವಾಡಿ: ಪಶು ಸಂಪತ್ತು ನಶಿಸಿ ಹೋಗುತ್ತಿದೆ ಅದನ್ನು ಪೋಷಿಸಿ, ಪಾಲನೆ ಮಾಡುವ ಕಾರ್ಯ ಅತ್ಯಂತ ಅಗತ್ಯವಾಗಿದೆ ಎಂದು ಮಾಜಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ 2025/26ನೇ ಸಾಲಿನಲ್ಲಿ 48 ಎಕರೆ ಪ್ರದೇಶದಲ್ಲಿ 90 ಲಕ್ಷ ರೂ. ಹಣದಲ್ಲಿ ‘ಜವಾರಿ ದೇಸಿ ತಳಿ ಜಾನುವಾರು ಸಂವರ್ಧನಾ ಕೇಂದ್ರ’ದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಶು ಸಂಪತ್ತು ಅಭಿವೃದ್ಧಿ ಕಾರ್ಯವಾದಾಗ ಮಾತ್ರ ರೈತರಿಗೆ ಸಹಕಾರವಾಗುತ್ತದೆ. ವಿಜಯಪುರ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರ್ಗಿ ಸೇರಿ ಅನೇಕ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಈ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಈ ಕೇಂದ್ರ ಇದ್ದು, ಆದರೆ ಈ ಭಾಗದ ರೈತರಿಗೆ ಅನುಕೂಲ ಉದ್ದೇಶದಿಂದ ಯೋಜನೆ ರೂಪಿಸಿದಂತಾಗುತ್ತದೆ ಎಂದು ಹೇಳಿದರು.
ತಿಕೋಟಾ ಮತಕ್ಷೇತ್ರದ ಶಾಸಕನಾಗಿದ್ದಾಗ ವಿಜಯಪುರ ನಗರ ಹೊರ ವಲಯದಲ್ಲಿ 110 ಎಕರೆ ಭೂಮಿಯನ್ನು ಎಪಿಎಂಸಿ ಮಾರುಕಟ್ಟೆ ಸಮಿತಿಗೆ ಖರೀದಿ ಮಾಡಲಾಗಿತ್ತು. ಸಿದ್ಧರಾಮೇಶ್ವರ ಜಾತ್ರೆ ಸೇರಿ ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಲು ಅಂದೇ ಈ ಜಮೀನನ್ನು ಖರೀದಿಸಲಾಗಿತ್ತು ಎಂದರು.
ಎಪಿಎಂಸಿ ಮಾರುಕಟ್ಟೆ ಸಮಿತಿ ಸಚಿವನಾದ ಬಳಿಕ ಆ ಸ್ಧಳದಲ್ಲಿ 30 ಕೋಟಿ ಹಣದಲ್ಲಿ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ರೈತರು ತಮ್ಮ ಒಣದ್ರಾಕ್ಷಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲ. ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆಯುವ ಒಣದ್ರಾಕ್ಷಿ ಮಾರಾಟ ಮಾರುಕಟ್ಟೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ ಮತ್ತು ಪಶು ಜಾತ್ರೆ ಮಾಡಲು ಸಹಕಾರಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಆರ್.ಎಸ್. ಪದರಾ ಪ್ರಾಸ್ತಾವಿಕವಾಗಿ ಮಾತನಾಡಿ ಈ ಭಾಗದ ರೈತರಿಗೆ ಈ ಕೇಂದ್ರದಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ವೆಂಕಟೇಶ ವಂದಾಲ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪಂಚಾಕ್ಷರಿ ಸಂಕ, ಕುರಿ ಮತ್ತು ಉಣ್ಣೆ ನಿಗಮದ ಪಶು ವೈದ್ಯ ಡಾ. ಪದ್ಮಾ ದೊಡ್ಡಮನಿ, ಪಶು ಸಂಗೋಪನಾ ಇಲಾಖೆ ಸಂಚಾರಿ ಮತ್ತು ವಿಸ್ತರಣಾ ವೈದ್ಯ ಡಾ. ಬಸವರಾಜ ಕನಮಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಹಿರೇಮನಿ, ಮಲ್ಲು ಸೊನ್ನದ, ಪಿಡಿಒ ಡಿ.ಎಂ. ಬಿಳಿಕುದುರೆ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪ್ರೇಮಕುಮಾರಿ ಮ್ಯಾಗೇರಿ, ಇತರರಿದ್ದರು.