ರಮೇಶ ಜಿಗಜಿಣಗಿ, ಸಂಸದರು 
ವಿಜಯಪುರ

ವಿಮಾನ ನಿಲ್ದಾಣ ಬಿಜೆಪಿಯ ಕೊಡುಗೆ, ಸಂಸದ ರಮೇಶ ಜಿಗಜಿಣಗಿ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಲೋಹದ ಹಕ್ಕಿಯ ಹಾರಾಟಕ್ಕೆ ಕ್ರಮ
  • ಸಚಿವರೊಂದಿಗೆ ಸಂಸದ ಜಿಗಜಿಣಗಿ ಚರ್ಚೆ
  • ತ್ವರಿತವಾಗಿ ವಿಮಾನ ಹಾರಿಸಲು ಕ್ರಮ ವಹಿಸಲು ಮನವಿ
ವಿಜಯಪುರ: ಬಿಜೆಪಿ ಸರ್ಕಾರದ ಕನಸಿನ ಕೂಸಾಗಿರುವ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ವಿಮಾನ ಹಾರಾಟಕ್ಕೆ ತೊಡಕಾಗಿದ್ದ ‘ತಾಂತ್ರಿಕ ಮೋಡ’ಗಳೆಲ್ಲ ಚದುರಿದ ಹಿನ್ನೆಲೆ ತ್ವರಿತವಾಗಿ ವಿಮಾನ ಹಾರಿಸಲು ಅನುಕೂಲ ಕಲ್ಪಿಸುವಂತೆ ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರಲ್ಲಿ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದ ವೇಳೆ ಸಚಿವರನ್ನು ಭೇಟಿ ಮಾಡಿರುವುದಾಗಿ ಶುಕ್ರವಾರ ಮಾಹಿತಿ ಹಂಚಿಕೊಂಡಿರುವ ಅವರು, ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದ್ದಾರೆ.
‘ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವುದಾಗಿಯೂ ಕೇಂದ್ರ ಸಚಿವ ಯಾದವ್ ಅವರು ಭರವಸೆ ನೀಡಿದ್ದಾರೆ’ ಎಂದು ಜಿಗಜಿಣಗಿ ಸಂತಸ ಹಂಚಿಕೊಂಡಿದ್ದಾರೆ.
‘ವಿಜಯಪುರ ವಿಮಾನ ನಿಲ್ದಾಣ ಬಿಜೆಪಿ ಕೊಡುಗೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲಾಯಿತು. ಆದರೆ ನಂತರ ಬಂದ ಸರ್ಕಾರಗಳು ಇದಕ್ಕೆ ಆಸಕ್ತಿ ವಹಿಸಲಿಲ್ಲ. ಪುನಃ ಬಿಜೆಪಿ ಸರ್ಕಾರವೇ ಇದಕ್ಕೆ ಆಸಕ್ತಿ ವಹಿಸಿ ವಿಮಾನ ನಿಲ್ದಾಣದ ಶೇ.90 ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿತ್ತು. ಆದರೆ, ಕೆಲವು ತಾಂತ್ರಿಕ ಅಡಚಣೆಯಿಂದಾಗಿ ನಿರಾಕ್ಷೇಪಣಾ ಪತ್ರ ಲಭಿಸಿರಲಿಲ್ಲ. ಕೆಲವು ಅಡಚಣೆ ಎದುರಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ವಿಮಾನ ನಿಲ್ದಾಣ ಲೋಕಾರ್ಪಣೆ ಸಾಧ್ಯವಾಗಿರಲಿಲ್ಲ’ ಎಂದು ಜಿಗಜಿಣಗಿ ವಿವರಿಸಿದ್ದಾರೆ.
‘ವಿಮಾನ ನಿಲ್ದಾಣಕ್ಕಾಗಿ ವೈಯಕ್ತಿಕವಾಗಿ ಕೇಂದ್ರ ಸಚಿವರಿಗೆ ಅನೇಕ ಬಾರಿ ಪತ್ರ ಬರೆದಿರುವೆ. ಸದನದಲ್ಲಿಯೂ ಅನೇಕ ಬಾರಿ ಧ್ವನಿ ಎತ್ತಿರುವೆ. ಇದು ನಮ್ಮ ಸರ್ಕಾರದ ಕೊಡುಗೆ, ಈಗ ತಾಂತ್ರಿಕ ಅಡಚಣೆ ನಿವಾರಿಸಿ ಪೂರಕ ಪ್ರಕ್ರಿಯೆ ಕೈಗೊಳ್ಳುವಂತೆಯೂ ಕೇಂದ್ರ ಸಚಿವರಲ್ಲಿ ಮನವಿ ಮಾಡಿರುವೆ. ಶೀಘ್ರದಲ್ಲಿಯೇ ವಿಮಾನ ನಿಲ್ದಾಣ ಕಾರ್ಯರಂಭವಾಗುವ ವಿಶ್ವಾಸವಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.