ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಕಾವೇರಿ ರಜಪೂತ, ಸುಧಾರಾಣಿ ಕೋಲುರ, ವರದಾ ಧರ್ಮಶೆಟ್ಟಿ ಮತ್ತಿತರರಿದ್ದಾರೆ. 
ವಿಜಯಪುರ

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ ಕೈಬಿಡಿ, ರಾಜ್ಯ ಸರ್ಕಾರದ ವಿರುದ್ಧ ಎಐಡಿಎಸ್‌ಒ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ
  • ರಾಜ್ಯ ಸರ್ಕಾರದ ವಿರುದ್ಧ ಎಐಡಿಎಸ್‌ಒ ಪ್ರತಿಭಟನೆ
  • ಕೆಪಿಎಸ್-ಮ್ಯಾಗ್ನೆಟ್ ಶಾಲೆ ನಿರ್ಧಾರ ಬದಲಿಸಿಲು ಒತ್ತಾಯ
ವಿಜಯಪುರ: ಕೆಪಿಎಸ್-ಮ್ಯಾಗ್ನೆಟ್ ಶಾಲೆ ಹೆಸರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದ್ದು, ಕೂಡಲೇ ಈ ಕ್ರಮ ಕೈಬಿಡಲು ಆಗ್ರಹಿಸಿ ಹಲವು ವಿದ್ಯಾರ್ಥಿಗಳು ಶನಿವಾರ ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ವಿದ್ಯಾರ್ಥಿಗಳು ಹಾಗೂ ಎಐಡಿಎಸ್‌ಒ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಕೂಡಲೇ ಸರ್ಕಾರ ತನ್ನ ನಿರ್ಧಾರ ಮತ್ತು ನಿಲುವು ಬದಲಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಮಾತನಾಡಿ, ರಾಜ್ಯ ಸರ್ಕಾರ 700 ಕೆಪಿಎಸ್- ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದೆ. ಸರ್ಕಾರಿ ಆದೇಶದಲ್ಲಿ ತಿಳಿಸಿರುವಂತೆ ಮ್ಯಾಗ್ನೆಟ್ ಶಾಲೆಯ 3 ರಿಂದ 5 ಕಿಲೋ ಮೀಟರ್ ವ್ಯಾಪ್ತಿಯ ಶಾಲೆಗಳನ್ನು ಈ ಶಾಲೆಗಳಲ್ಲಿ ಸಮ್ಮಿಳಿತಗೊಳಿಸಲಾಗುತ್ತದೆ. ಈಗಾಗಲೇ ಈ ಮಾದರಿಯಲ್ಲಿ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಲಾಗಿದೆ. ಹೊಂಗನೂರಿನಿಂದ 6 ಕಿಮೀ ವ್ಯಾಪ್ತಿಯೊಳಗಿರುವ, 77 ವಿದ್ಯಾರ್ಥಿಗಳಿರುವ ಹೊಡಿಕೆ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ, 82 ವಿದ್ಯಾರ್ಥಿಗಳಿರುವ ಕನ್ನಿ ದೊಡ್ಡಿ ಶಾಲೆ, 31 ವಿದ್ಯಾರ್ಥಿಗಳಿರುವ ಅಮ್ಮಳ್ಳಿ ದೊಡ್ಡಿ ಶಾಲೆ , 100 ವಿದ್ಯಾರ್ಥಿಗಳಿರುವ ಸಂತೆಮೊಗೇನಹಳ್ಳಿ ಶಾಲೆ, 20 ವಿದ್ಯಾರ್ಥಿಗಳಿರುವ ಮೊಗೇನಹಳ್ಳಿ ದೊಡ್ಡಿ, 80 ವಿದ್ಯಾರ್ಥಿಗಳಿರುವ ಸುಣ್ಣಘಟ್ಟ ಶಾಲೆಗಳನ್ನು ಹೊಂಗನೂರಿನ ಕೆಪಿಎಸ್‌ಗೆ ತುರ್ತಾಗಿ ವಿಲೀನಗೊಳಿಸಿ ಕ್ರಮಕೈಗೊಳ್ಳಲು ಆದೇಶ ನೀಡಲಾಗಿದೆ.
ತತ್ಪರಿಣಾಮ, ಈ ಊರುಗಳ ಜನರಲ್ಲಿ ಈಗಾಗಲೇ ಆತಂಕ ಸೃಷ್ಟಿಯಾಗಿದೆ ಮತ್ತು ತಮ್ಮ ಊರಿನ ಶಾಲೆಗಳು ಉಳಿಯಬೇಕು ಮತ್ತು ಅವುಗಳನ್ನು ಅಭಿವೃದ್ಧಿಪಡಿಸಿ ಊರಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಬೇಕೆಂಬುದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ ಎಂದರು.
ಇದೇ ರೀತಿ 700 ಕೆಪಿಎಸ್-ಮ್ಯಾಗ್ನೆಟ್ ಶಾಲೆಗಳಡಿ ರಾಜ್ಯದ ಸಾವಿರಾರು ಶಾಲೆಗಳು ವಿಲೀನಗೊಳ್ಳುತ್ತವೆ. ಸಮುದಾಯದ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ 5,900 ಕೆಪಿಎಸ್ - ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸುವ ಉದ್ದೇಶವನ್ನು ರಾಜ್ಯ ಸರ್ಕಾರವು ಹೊಂದಿದೆ. ಹೀಗಾದಲ್ಲಿ 40,000 ಸರ್ಕಾರಿ ಶಾಲೆಗಳು ಮುಚ್ಚಿಹೋಗುವ ಅಪಾಯಕ್ಕೆ ತುತ್ತಾಗುತ್ತವೆ ಎಂದರು.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ದಾಖಲಾತಿ ಕುಸಿಯುತ್ತಿರುವುದರ ಕುರಿತು ಸರ್ಕಾರವು ಕಾಳಜಿ ವ್ಯಕ್ತಪಡಿಸಿದೆ. ಹೆಚ್ಚಿನ ಗುಣಮಟ್ಟದ ಶಿಕ್ಷಣ ಒದಗಿಸಬಹುದಾದ ಶಾಲೆಯನ್ನು ಈಗಿರುವ ಶಾಲೆಗಿಂತ ಇನ್ನಷ್ಟು ದೂರದಲ್ಲಿ ಸ್ಥಾಪಿಸಿದರೆ ಯಾವ ರೀತಿ ದಾಖಲಾತಿ ಹೆಚ್ಚಾಗಲು ಸಾಧ್ಯ ಎಂಬ ಗಂಭೀರವಾದ ಪ್ರಶ್ನೆ ರಾಜ್ಯದ ವಿದ್ಯಾರ್ಥಿಗಳು ಹಾಗೂ ಜನತೆಯನ್ನು ಕಾಡುತ್ತಿದೆ ಎಂದು ಕಾವೇರಿ ರಜಪೂತ ಹೇಳಿದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಕೇವಲ ಒಬ್ಬರೇ ಶಿಕ್ಷಕರನ್ನು ಹೊಂದಿರುವ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 7ಸಾವಿರ ! 22 ಸಾವಿರಕ್ಕೂ ಅಧಿಕ ಶಾಲೆಗಳ ಕಟ್ಟಡಗಳು ಸೋರುವ ಛಾವಣಿ, ಬಿರಕುಬಿಟ್ಟ ಗೋಡೆ, ಕಿತ್ತು ಹೋಗಿರುವ ನೆಲದ ಹಾಸು ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊಂದಿದ್ದು ವರ್ಷಗಳಿಂದ ದುರಸ್ತಿ ಕಂಡಿಲ್ಲ. 3500ಕ್ಕೂ ಅಧಿಕ ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಗೃಹ ವ್ಯವಸ್ಥೆಯಿಲ್ಲ. ಆದ್ದರಿಂದ, ರಾಜ್ಯ ಸರ್ಕಾರ ಕೂಡಲೇ ಕೆಪಿಎಸ್-ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡಬೇಕು ಮತ್ತು ಶಿಕ್ಷಕರ ನೇಮಕಾತಿಯನ್ನು ಖಾತ್ರಿಪಡಿಸುವುದರೊಂದಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ ಬಲಪಡಿಸಬೇಕೆಂದು ಆಗ್ರಹಿಸಿದರು.
ವಿದ್ಯಾರ್ಥಿನಿಯರಾದ ಸುಧಾರಾಣಿ ಕೋಲುರ, ವರದಾ ಧರ್ಮಶೆಟ್ಟಿ, ಅಕ್ಷತಾ ವಾಗ್ಮಡಿ, ಸುಖನ್ಯಾ ಹೂಗಾರ, ಸಂಪೂರ್ಣ ಮಾಯಾಚಾರಿ, ರಾಧಿಕಾ ಕೆಂಗಾರ, ಸ್ವಪ್ನಾ ರಾಠೋಡ, ಸಾಕ್ಷಿ ಮಾದರ, ಲಕ್ಷ್ಮಿ ದೊಡ್ಡಮನಿ , ಅಶ್ವಿನಿ ಹಾದಿಮನಿ, ಅಕ್ಷತಾ ಗೌಡಪ್ಪಗೋಳ, ಭಾಗ್ಯಲಕ್ಷ್ಮಿ ಪೂಜಾರಿ ಮತ್ತಿತರರಿದ್ದರು.