ಚಡಚಣ ಪಟ್ಟಣದಲ್ಲಿ ಜೋಡೆತ್ತಿನ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಪ ತಹಸೀಲ್ದಾರ್ ಹುಸನಪ್ಪ ಹೊಸಮನಿ ಮೂಲಕ ಸರ್ಕಾರಕ್ಕೆ ಹಕ್ಕೋತ್ತಾಯ ಪತ್ರ ಸಲ್ಲಿಸಿದರು.ಬಸವರಾಜ ಅಳ್ಳಿಮರ, ಸಂಗಪ್ಪ ಭಜಂತ್ರಿ, ರಾಜು ದರ್ಗಾ, ಗುರುಬಬಾಳಪ್ಪ ಕೊಪ್ಪದ ಮತ್ತಿತರರಿದ್ದರು. 
ವಿಜಯಪುರ

ಜೋಡೆತ್ತಿನ ಕೃಷಿಕರಿಂದ ಒಕ್ಕಲುತನ ಉಳಿಯಲು ಸಾಧ್ಯ

ಯುವ ರೈತ ಮುಖಂಡ ರೇವಣಸಿದ್ಧ ಕನಮಡಿ ಅಭಿಮತ * ಬಂಡಿ ಯಾತ್ರೆಗೆ ಚಾಲನೆ

ಚಡಚಣ/ಹೊರ್ತಿ : ಚಡಚಣ ತಾಲೂಕಿನ ಗ್ರಾಮಗಳು ಜೋಡೆತ್ತಿನ ಕೃಷಿಕರಿಂದ ಮಾತ್ರ ಉಳಿಯಲು ಸಾಧ್ಯ. ಜೋಡೆತ್ತಿನ ಕೃಷಿಕರು ಸಂಪೂರ್ಣ ನಾಶವಾದರೆ ಮುಂದೆ ಎಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಜಗತ್ತಿನ ಎಲ್ಲ ವಿವಿಗಳು, ಸಂಶೋಧನೆಗಳಿಂದ ತಿಳಿದು ಬಂದಿದೆ ಎಂದು ಇಂಚಗೇರಿ ಗ್ರಾಮದ ಯುವ ರೈತ ಮುಖಂಡ ರೇವಣಸಿದ್ಧ ಕನಮಡಿ ಅಭಿಪ್ರಾಯ ಪಟ್ಟರು.

ಇಂಚಗೇರಿ ಗ್ರಾಮದಲ್ಲಿ ಗುರುವಾರ ಶ್ರೀ ಮಾಧವಾನಂದ ಪ್ರಭುಜಿ ಸರ್ಕಲ್ದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜೋಡೆತ್ತಿನ ಬಂಡಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೂರು ವರ್ಷಗಳಿಂದ ಜೋಡೆತ್ತು ಉಳಿಸಲು ಜಾಗೃತಿ ಮೂಡಿಸಲಾಗುತ್ತಿದೆ. ನಂದಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ಸರ್ಕಾರ ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು 11 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ರಾಜ್ಯ ಬಜೆಟ್‌ನಲ್ಲಿ ಶೇ. 10ರಷ್ಟು ಜೋಡೆತ್ತಿನ ರೈತರಿಗೆ ಮೀಸಲಿಡಬೇಕು ಎಂದು ಹಕ್ಕೊತ್ತಾಯ ಮಂಡಿಸಲು ಚಡಚಣ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಜೋಡೆತ್ತಿನ ಬಂಡಿ ರೈತರಾದ ಬಸವರಾಜ ಅಳ್ಳಿಮರ, ಸಂಗಪ್ಪ ಭಜಂತ್ರಿ, ರಾಜು ದರ್ಗಾ, ಗುರುಬಬಾಳಪ್ಪ ಕೊಪ್ಪದ, ಉಮೇಶ ಸಾತಲಗಾಂವ, ಸಿಕಂದರ್ ಮುಲ್ಲಾ, ಮೈಬುಸಾಬ ಮುಲ್ಲಾ, ಮನೋಜ ಕನಮಡಿ, ಶ್ರೀಶೈಲ ಕೊಪ್ಪದ, ಸೋಮನಿಂಗ ಕೊಳಗೇರಿ, ವಿಠಲ್ ಮೇತ್ರಿ, ಪಾಂಡುರಂಗ ಬಿರಾದಾರ, ರೇವಪ್ಪ ಬಿರಾದಾರ, ಧನಸಿಂಗ ರಾಠೋಡ, ಶಿವಬಾಳ ನನೂಲೆ, ಅಪ್ಪಾಶೆ ಸಾತಲಗಾಂವ, ಅಶೋಕಗೌಡ ಬಿರಾದಾರ, ಮನೋಜ ಕನಮಡಿ ಮತ್ತಿತರರಿದ್ದರು.