ಬಸವನಬಾಗೇವಾಡಿ ಪಟ್ಟಣದ ಪುರಸಭೆಯ ಸಭಾಭವನದಲ್ಲಿ ವಿಜಯಪುರ ಜಿಲ್ಲಾ ಪೊಲೀಸ್, ಬಸವನಬಾಗೇವಾಡಿ ಪೊಲೀಸ್ ಠಾಣೆ, ತಾಲೂಕು ಆಡಳಿತದಿಂದ ಹೋಳಿ, ರಂಜಾನ್ ಹಬ್ಬದ ಶಾಂತಿ ಸಭೆ ಹಮ್ಮಿಕೊಳ್ಳಲಾಯಿತು. ಅಶೋಕ ಹಾರಿವಾಳ, ಶಬ್ಬಿರ್ ನಥಾಫ್, ಮುದಕಣ್ಣಾ ಹೊರ್ತಿ, ನಜೀರ್ ಬೀಳಗಿ ಮತ್ತಿತರರಿದ್ದರು.
- ಪಿಐ ಗುರುಶಾಂತ್ ದಾಶ್ಯಾಳ ಎಚ್ಚರಿಕೆ
- ಹೋಳಿ, ರಂಜಾನ್ ಹಬ್ಬದ ಶಾಂತಿ ಸಭೆ
ಬಸವನಬಾಗೇವಾಡಿ: ಹಬ್ಬ ಹರಿದಿನಗಳಲ್ಲಿ ಯಾರಾದರೂ ಯಾವುದೇ ಅಹಿತಕರ ಘಟನೆಗಳಿಗೆ ಸಹಕಾರ ನೀಡುವುದಾಗಲಿ ಅಥವಾ ಶಾಂತಿ ಕದಡುವ ಕಾರ್ಯದಲ್ಲಿ ಕಂಡು ಬಂದಲ್ಲಿ ಆ ವ್ಯಕ್ತಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಿಐ ಗುರುಶಾಂತ್ ದಾಶ್ಯಾಳ ಎಚ್ಚರಿಕೆ ನೀಡಿದರು.
ಪಟ್ಟಣದ ವಿಜಯಪುರ ರಸ್ತೆಯ ಪುರಸಭೆಯ ಸಭಾಭವನದಲ್ಲಿ ಶನಿವಾರ ವಿಜಯಪುರ ಜಿಲ್ಲಾ ಪೊಲೀಸ್, ಬಸವನಬಾಗೇವಾಡಿ ಪೊಲೀಸ್ ಠಾಣೆ ಮತ್ತು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹೋಳಿ ಹಾಗೂ ರಂಜಾನ್ ಹಬ್ಬದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾರು ಸಮಾಜದಲ್ಲಿ ಶಾಂತಿ, ಭಂಗ ತರುವ ಕಾರ್ಯ ಮಾಡುತ್ತಾರೆ ಎಂಬುದನ್ನು ನಮ್ಮ ಪೊಲೀಸ್ ಇಲಾಖೆ ಸದಾ ಹದ್ದಿನ ಕಣ್ಣು ಇಟ್ಟಿರುತ್ತದೆ ಅದನ್ನು ಅರಿತುಕೊಂಡು ಮುನ್ನಡೆಯಬೇಕು, ಅಂತಹ ಘಟನೆಯಲ್ಲಿ ಭಾಗವಹಿಸಿದ ವ್ಯಕ್ತಿ ಎಂತಹ ಪ್ರಭಾವಿಯಾಗಿದ್ದರೂ ಕೂಡ ಅವರ ಮೇಲೆ ನಿರ್ದಾಕ್ಷಣ ಕ್ರಮ ಜರುಗಿಸಬೇಕಾಗುತ್ತದೆ. ಕಾನೂನು ಮುಂದೆ ಯಾರು ದೊಡ್ಡವರಲ್ಲ ಇದನ್ನು ಅರಿತು ಎಲ್ಲರೂ ಶಾಂತಿ ಸಹನೆಯಿಂದ ಹಬ್ಬ ಹರಿದಿನಗಳನ್ನು ಆಚರಿಸಬೇಕೆಂದು ಹೇಳಿದರು.
ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳಲ್ಲಿ ಹುಷಾರಾಗಿರಬೇಕು. ಈ ಜಾಲತಾಣದಲ್ಲಿ ಅನೇಕ ವ್ಯಕ್ತಿಗಳು ಹಣದ ದುರಾಸೆಗೆ ಮೋಸ ಹೋಗಿದ್ದಾರೆ. ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಿಬೇಕು ಎಂದು ಹೇಳಿ, ಮದ್ಯಪಾನ ಸೇವನೆ ಮಾಡಿ ದ್ವಿಚಕ್ರ ವಾಹನ ಚಲಾವಣೆ ಮಾಡಬೇಡಿ ಒಂದು ವೇಳೆ ಅಪಘಾತವಾದರೆ ತಮಗೆ ಯಾವುದೇ ಜೀವ ವಿಮೆ ರಕ್ಷಣೆಯ ಪಾಲಿಸಿ ಬರುವುದಿಲ್ಲ ಎಂದು ಹೇಳಿದರು.
ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಮಾತನಾಡಿ, ಹೋಳಿ ಹಾಗೂ ರಂಜಾನ್ ಹಬ್ಬದ ಸಂದರ್ಭದಲ್ಲಿ ಯುವಕ ತಮ್ಮ ಮುಂದಿನ ಭವಿಷ್ಯದ ದೂರ ದೃಷ್ಟಿ ಇಟ್ಟುಕೊಂಡು ಹಬ್ಬಗಳನ್ನು ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾನೂನು ಉಲ್ಲಂಘಿಸಿದರೆ ಭವಿಷ್ಯ ಹಾಳಾಗುತ್ತದೆ ಮುಂದೆ ತಮ್ಮಗೆ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಮತ್ತು ಸಮಾಜದಲ್ಲಿ ಗೌರವ ಸಿಗುವುದಿಲ್ಲ ಆತುರದಲ್ಲಿ ಒಂದು ಸಣ್ಣ ಘಟನೆಯಿಂದ ತಮ್ಮ ಇಡೀ ಬದುಕು ಹಾಳಾಗುತ್ತದೆ ಎಂದು ತಿಳಿಸಿದರು.
ಸಹಕಾರಿ ಮಹಾ ಮಂಡಳಿಯ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕಳೆದ ವರ್ಷ ಹೋಳಿ ಹಬ್ಬವನ್ನು ಅತ್ಯಂತ ಶಾಂತಿಯಿಂದ ಆಚರಣೆ ಮಾಡಲಾಗಿತ್ತು. ಈ ವರ್ಷವೂ ಶಾಂತಿಯಿಂದ ಹೋಳಿ, ರಂಜಾನ್ ಹಬ್ಬವನ್ನು ಹಿಂದೂ, ಮುಸ್ಲಿಂರು ಸಮುದಾಯದವರು ಸೇರಿ ಎರಡು ಹಬ್ಬಗಳನ್ನು ಆಚರಣೆ ಮಾಡೋಣ ಎಂದರು.
ಅಶೋಕ ಹಾರಿವಾಳ , ಶಬ್ಬಿರ್ ನಥಾಫ್, ಮುದಕಣ್ಣಾ ಹೊರ್ತಿ, ನಜೀರ್ ಬೀಳಗಿ, ಸಂಗಮೇಶ ಓಲೇಕಾರ, ರವಿ ರಾಠೋಡ, ಅರವಿಂದ ಸಾಲವಾಡಗಿ, ಗುರನಗೌಡ ಪಾಟೀಲ, ಮೈಬುಸಾಬ ನಾಯ್ಕೋಡಿ, ವಿನೂತ ಕಲ್ಲೂರ, ಶೇಖರ ಗೊಳಸಂಗಿ, ಶಂಕರಗೌಡ ಬಿರಾದಾರ, ಕಲ್ಲು ಸೊನ್ನದ, ಕಮಾಲ್ ಸಾಬ್ ಕೊರಬು ಮತ್ತಿತರರಿದ್ದರು.