ಸುನೀಲಗೌಡ ಪಾಟೀಲ, ವಿಪ ಸದಸ್ಯ
- ಸುನೀಲಗೌಡರ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆ
- ಕೇಂದ್ರ ಸಚಿವ ನಿತೀನ್ ಗಡ್ಕರಿ ಭರವಸೆ
ವಿಜಯಪುರ: ರಾಷ್ಟ್ರೀಯ ಹೆದ್ದಾರಿ -50ರ ದುರಸ್ತಿಗೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರು ಬರೆದಿರುವ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖಿತವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಜಯಪುರ- ಚಿತ್ರದುರ್ಗ ಮತ್ತು ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಸಂಖ್ಯೆ 50ರ ದುರಸ್ತಿಗೆ ಆಗ್ರಹಿಸಿ ಸುನೀಲಗೌಡ ಪಾಟೀಲ ಅವರು 2025ರ ನ. 24ರಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಮಹಾರಾಷ್ಟ್ರದ ಸೊಲ್ಲಾಪುರದಿಂದ ಪ್ರಾರಂಭವಾಗಿ ರಾಜ್ಯದ ವಿಜಯಪುರ ಮೂಲಕ ಚಿತ್ರದುರ್ಗ ಮತ್ತು ಅಲ್ಲಿಂದ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಸಂಖ್ಯೆ- 50 ಪ್ರಮುಖ ಹೆದ್ದಾರಿಗಳಲ್ಲಿ ಒಂದಾಗಿದೆ. ಆದರೆ, ಈ ರಸ್ತೆ ಹದಗೆಟ್ಟಿದೆ ಎಂದು ಸುನೀಲಗೌಡರು ತಿಳಿಸಿದ್ದರು.
ವಿಜಯಪುರದಿಂದ ಚಿತ್ರದುರ್ಗದವರೆಗೆ ರಸ್ತೆಯ ಮೇಲ್ಪದರು ಕಿತ್ತು ಹೋಗಿದೆ. ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯಹೆದ್ದಾರಿಯೂ ಬಹುತೇಕ ಹಾಳಾಗಿದೆ. ಈ ಎರಡೂ ಮಾರ್ಗಗಳಲ್ಲಿ ರಸ್ತೆ ಮಧ್ಯದಲ್ಲಿ ತಗ್ಗು-ಗುಂಡಿಗಳು ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಹೆದ್ದಾರಿಯಲ್ಲಿ ಭಾರಿ ವಾಹನಗಳೂ ಹೆಚ್ಚಾಗಿ ಸಂಚರಿಸುವ ಕಾರಣ ಹೆದ್ದಾರಿ ದುರಸ್ತಿ ಅಗತ್ಯವೂ ಅನಿವಾರ್ಯವೂ ಆಗಿದೆ ಎಂದು ಸುನೀಲಗೌಡರು ಮನವರಿಕೆ ಮಾಡಿದ್ದರು.
ಪ್ರತಿನಿತ್ಯ ಈ ಎರಡೂ ಮಾರ್ಗಗಳಲ್ಲಿ ಸುಮಾರು 27 ಸಾವಿರ ಪಿಸಿಯು(ಪ್ಯಾಸೆಂಜರ್ ಕಾರ್ ಯುನಿಟ್ಸ್) ವಾಹನಗಳು ಸಂಚರಿಸುತ್ತವೆ. ಪ್ರತಿದಿನ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ.
ವಿಜಯಪುರದಿಂದ ಬೆಂಗಳೂರು ಮಾರ್ಗದಲ್ಲಿ ಹುನಗುಂದ, ಕುಷ್ಟಗಿ ಹಾಗೂ ಹೊಸಪೇಟೆಗಳಿಗೆ ಬೇರೆ ಹೆದ್ದಾರಿಗಳು ಸಂಪರ್ಕಿಸುವುದರಿಂದ ಆ ಮಾರ್ಗದ ವಾಹನಗಳೂ ಇದೇ ರಸ್ತೆಗೆ ಸೇರಿ ವಾಹನ ದಟ್ಟಣೆ ಇನ್ನೂ ಹೆಚ್ಚಾಗುತ್ತಿದೆ ಎಂದು ಅವರು ಎಳೆಎಳೆಯಾಗಿ ಅಂಕಿ-ಅಂಶ ಸಮೇತ ಪತ್ರದಲ್ಲಿ ಪ್ರಸ್ತಾಪಿಸಿದ್ದರು.
ಅಷ್ಟೇ ಅಲ್ಲ, ಅತೀ ಹೆಚ್ಚು ಟೋಲ್ ಸಂಗ್ರಹವಾಗುವ ಮಾರ್ಗಗಳಲ್ಲಿ ಇದೂ ಒಂದಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಪ್ರತಿದಿನ ಸರಾಸರಿ ಸುಮಾರು ರೂ. 30 ಲಕ್ಷ ಟೋಲ್ ಸಂಗ್ರಹಿಸಲಾಗುತ್ತಿದೆ. ಇಷ್ಟೊಂದು ಟೋಲ್ ಹಣ ಸಂಗ್ರಹವಾಗುತ್ತಿದ್ದರೂ ರಸ್ತೆ ಮಾತ್ರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾನದಂಡಕ್ಕೆ ಅನುಗುಣವಾಗಿರದೇ ಕಳಪೆಯಾಗಿದೆ. ಆದ್ದರಿಂದ ಈ ರಸ್ತೆಯನ್ನು ನಿರ್ದಿಷ್ಠ ಮಾನದಂಡಗಳಿಗೆ ಅನುಗುಣವಾಗಿ ದುರಸ್ತಿ ಮಾಡಿ ಮೂಲ ಸೌಲಭ್ಯ ಒದಗಿಸಬೇಕು. ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿ ಹೆದ್ದಾರಿಯಲ್ಲಿ ಹೊಸದಾಗಿ ಮೇಲ್ಪದರು ಹಾಕಬೇಕು. ಅಗತ್ಯವಿರುವ ಕಡೆ ಹೆದ್ದಾರಿಯನ್ನು ಅಗಲೀಕರಣ ಮಾಡಬೇಕು ಎಂದು ಶಾಸಕರು ತಮ್ಮ ಪತ್ರದಲ್ಲಿ ಮಾಹಿತಿ ನೀಡಿದ್ದರು.
ಅಲ್ಲದೇ, ಕೇಂದ್ರ ಸಚಿವರು ಮುತುವರ್ಜಿ ವಹಿಸಿದರೆ ಈ ರಸ್ತೆ ದುರಸ್ತಿಯಾಗಿ ಮಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರಿಗೆ ಸಂಚಾರಕ್ಕೆ ಅನುಕೂಲ ಒದಗಿಸಬೇಕು. ಇದರಿಂದ ಈ ಮಾರ್ಗದಲ್ಲಿ ಬರುವ ಬಹಳಷ್ಟು ಜಿಲ್ಲೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಕೂಡಲೇ ಈ ನಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.
ಸುನೀಲಗೌಡರ ಪತ್ರಕ್ಕೆ ಸ್ಪಂದಿಸಿದ ಕೇಂದ್ರ ಸಚಿವರು ಡಿ. 11 ರಂದು ಪತ್ರ ಬರೆದು ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.