ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ಸಂದೀಪ ಅರಳಗುಂಡಿ, ಹಣಮಂತ ಹಳ್ಳೂರ ಇತರರಿದ್ದಾರೆ. 
ವಿಜಯಪುರ

ಬಾಗಲಕೋಟೆ ವಿವಿ ವ್ಯಾಪ್ತಿಗೆ ಸೇರ್ಪಡೆಗೊಳಿಸಿ, ರಾಜ್ಯ ಸರ್ಕಾರಕ್ಕೆ ಎಬಿವಿಪಿ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಎಬಿವಿಪಿ ನೇತೃತ್ವದಲ್ಲಿ ಬೃಹತ್
  • ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
  • ನೂರಾರು ವಿದ್ಯಾರ್ಥಿಗಳಿಂದ ಒಕ್ಕೋರಲ ಒತ್ತಾಯ
  • ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದ ವಿದ್ಯಾರ್ಥಿಗಳು
ವಿಜಯಪುರ: ವಿಜಯಪುರ ಜಿಲ್ಲೆಯ 130ಕ್ಕೂ ಅಧಿಕ ಪದವಿ ಕಾಲೇಜುಗಳನ್ನು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. ಬಳಿಕ ಮಹಾತ್ಮ ಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿ ತಲುಪಿದರು. ಕೆಲ ಕಾಲ ಧರಣಿ ನಡೆಸಿ ಬಳಿಕ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ಜಿಲ್ಲೆಯ 130ಕ್ಕೂ ಅಧಿಕ ಪದವಿ ಕಾಲೇಜುಗಳು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿದ್ದು, ವಿಶ್ವ ವಿದ್ಯಾಲಯಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಕಾರ್ಯಗಳು, ಪರೀಕ್ಷಾ ಪ್ರಕ್ರಿಯೆಗಳು, ಮೌಲ್ಯಮಾಪನ, ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಹೆಸರು ತಿದ್ದುಪಡಿ ಸೇರಿ ವಿವಿಧ ಶೈಕ್ಷಣಿಕ ಸೇವೆಗಳಿಗಾಗಿ ವಿದ್ಯಾರ್ಥಿಗಳು ಬೆಳಗಾವಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ವಿಜಯಪುರದಿಂದ ಬೆಳಗಾವಿಗೆ ಪ್ರಯಾಣ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತಿದ್ದು, ದೂರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಒಂದು ಕೆಲಸಕ್ಕಾಗಿ ಎರಡು-ಮೂರು ದಿನಗಳನ್ನು ವ್ಯಯಿಸಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವುದರ ಜೊತೆಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಗಳು ನಿರಂತರವಾಗಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಜಯಪುರ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳನ್ನು ಭೌಗೋಳಿಕವಾಗಿ ಸಮೀಪದಲ್ಲಿರುವ ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿಯ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿ ಸ್ನೇಹಿ ಆಡಳಿತ ನೀಡಿ

ರಾಜ್ಯ ಕಾರ್ಯಸಮಿತಿ ಸದಸ್ಯ ಸಂದೀಪ ಅರಳಗುಂಡಿ ಮಾತನಾಡಿ, ವಿದ್ಯಾರ್ಥಿ ಸ್ನೇಹಿ ಆಡಳಿತ ವ್ಯವಸ್ಥೆ ನಿರ್ಮಾಣವಾಗಬೇಕಾದರೆ ಭೌಗೋಳಿಕ ಅನುಕೂಲತೆ ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ವಿಜಯಪುರ ಜಿಲ್ಲೆಯ ಪದವಿ ಕಾಲೇಜುಗಳನ್ನು ಬಾಗಲಕೋಟ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಸೇರಿಸಿದರೆ ವಿದ್ಯಾರ್ಥಿಗಳಿಗೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸೇವೆಗಳು ತ್ವರಿತವಾಗಿ ದೊರೆಯಲಿವೆ. ಪರೀಕ್ಷೆ, ಅಂಕಪಟ್ಟಿ, ಮರುಮೌಲ್ಯಮಾಪನ, ಪ್ರಮಾಣಪತ್ರ ಸೇರಿ ಎಲ್ಲ ಸೇವೆಗಳು ಸುಲಭವಾಗಿ ಲಭ್ಯವಾಗುವುದರಿಂದ ವಿದ್ಯಾರ್ಥಿಗಳ ಸಮಯ ಮತ್ತು ಹಣ ಉಳಿತಾಯವಾಗಲಿದೆ ಎಂದು ತಿಳಿಸಿದರು.
ವಿಜಯಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಎಬಿವಿಪಿ ವಿದ್ಯಾರ್ಥಿಗಳು ಮಾನ ಸರಪಳಿ ನಿರ್ಮಿಸಿ ಸರ್ಕಾರದ ಗಮನ ಸೆಳೆದರು.

ಹೆಚ್ಚುವರಿಯಾಗಿ, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಡುವೆ ಉತ್ತಮ ಸಮನ್ವಯತೆ ನಿರ್ಮಾಣವಾಗಲಿದ್ದು, ಆಡಳಿತಾತ್ಮಕ ಕಾರ್ಯನಿರ್ವಹಣೆಯೂ ಇನ್ನಷ್ಟು ಪರಿಣಾಮಕಾರಿಯಾಗಲಿದೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ತಕ್ಷಣವೇ ವಿಜಯಪುರ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳನ್ನು ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿಯ ವ್ಯಾಪ್ತಿಗೆ ಸೇರಿಸುವ ಕುರಿತು ಅಗತ್ಯ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಯನ್ನು ಸರ್ಕಾರ ಶೀಘ್ರದಲ್ಲಿ ಈಡೇರಿಸದಿದ್ದರೆ ಹಂತ ಹಂತವಾಗಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಣಮಂತ ಹಳ್ಳೂರ, ರಾಜ್ಯ ಕಾನೂನು ವಿದ್ಯಾರ್ಥಿ ಪ್ರಮುಖ ಮಂಜುನಾಥ ಹಳ್ಳಿ, ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಬಾಲಾಜಿ ಬಿರಾದಾರ, ತಾಲೂಕು ಸಂಚಾಲಕ ಸಂಪತ್ ಉಪ್ಪಾರ, ಶಿವು ಬಿರಾದಾರ, ದುಂಡಪ್ಪ ನೆಲೋಗಿ, ಪ್ರವೀಣ ಮಾದರ ಇತರರಿದ್ದರು.