ವಿಜಯಪುರ ನಗರದಲ್ಲಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ವಿಕಾಸ ದರ್ಬಾರ, ಶೀಲಾ ಬಿರಾದಾರ, ಸುಧೀರ ಟಂಕಸಾಲೆ ಇತರರಿದ್ದಾರೆ.
- ಎಬಿವಿಪಿ 45ನೇ ಪ್ರಾಂತ ಸಮ್ಮೇಳನ
- ಮೂರು ದಿನಗಳ ಕಾಲ ಕಾರ್ಯಕ್ರಮ
- 1100 ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿ
ವಿಜಯಪುರ: ನಗರದ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಜ.24,25 ಮತ್ತು 26 ರಂದು ನಡೆಯಲಿದೆ 45ನೆಯ ಪ್ರಾಂತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದರು.
ಕರ್ನಾಟಕ ಉತ್ತರ ಪ್ರಾಂತದ 6 ವಿಭಾಗಗಳ 16 ಜಿಲ್ಲೆಯಿಂದ ಸುಮಾರು 700 ವಿದ್ಯಾರ್ಥಿಗಳು, 300 ವಿದ್ಯಾರ್ಥಿನಿಯರು ಮತ್ತು 100 ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ಶಿಕ್ಷಣ ತಜ್ಞರು ಸೇರಿ ಒಟ್ಟು 1100 ಕ್ಕೂ ಅಧಿಕ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜ.23 ರಂದು ಎಲ್ಲ ಪ್ರತಿನಿಧಿಗಳು ವಿಜಯಪುರ ತಲುಪಲಿದ್ದಾರೆ. ಅಂದು ರಾತ್ರಿ 9 ಕ್ಕೆ ರಾಜ್ಯದ ವಿದ್ಯಾರ್ಥಿ ಪರಿಷತ್‌ನ ಚಟುವಟಿಕೆಗಳು ಹಾಗೂ ವಿಶೇಷ ಅಭಿಯಾನಗಳನ್ನು ಒಳಗೊಂಡ ಪ್ರದರ್ಶಿನಿಯ ಉದ್ಘಾಟನೆಯನ್ನು ಜ್ಞಾನಯೋಗಾಶ್ರಮದ ಪೂಜ್ಯರಾದ ಬಸವಲಿಂಗ ಸ್ವಾಮೀಜಿ ನೆರವೇರಿಸಲಿದ್ದಾರೆ. ಜ.24 ರಂದು ಬೆಳಗ್ಗೆ ದ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರಕಲಿದೆ. ರಾಜ್ಯ ಅಧ್ಯಕ್ಷರ ಮತ್ತು ರಾಜ್ಯ ಕಾರ್ಯದರ್ಶಿಗಳ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ನಾಯಕರಿಂದ ವಿಶೇಷ ಭಾಷಣ
ಉದ್ಘಾಟನಾ ಕಾರ್ಯಕ್ರಮದಲ್ಲಿ ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಷ ಚವಾಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರಕ ನರೇಂದ್ರ ಅವರಿಂದ ‘ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ’ ಕುರಿತ ವಿಶೇಷ ಭಾಷಣ ನಡೆಯಲಿದೆ. ಜ.25 ರಂದು ವಾದಿರಾಜ ಅವರಿಂದ ಸಂವಿಧಾನದ ವಿಷಯದ ಕುರಿತು ಭಾಷಣ ನಡೆಯಲಿದೆ ಎಂದರು.
ಜ.25 ರಂದು ಸಂಜೆ 4 ಕ್ಕೆ ಗೋದಾವರಿ ಹೊಟೇಲ್‌ನಿಂದ ಮಹಾತ್ಮ ಗಾಂಧಿ ವೃತ್ತ, ಸಿದ್ಧೇಶ್ವರ ದೇವಸ್ಥಾನ, ಗಣಪತಿ ಚೌಕ್, ಬಸವೇಶ್ವರ ವೃತ್ತದ ಮಾರ್ಗವಾಗಿ ದರ್ಬಾರ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವೀರೇಂದ್ರಸಿಂಗ ಸೋಲಂಕಿ ಹಾಗೂ ರಾಜ್ಯದ ವಿದ್ಯಾರ್ಥಿ ನಾಯಕರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜ. 26 ರಂದು ಬೆಳಗ್ಗೆ ತ್ರಿವರ್ಣ ಧ್ವಜಾರೋಹಣದ ಮೂಲಕ ಗಣರಾಜ್ಯೋತ್ಸವ ಆಚರಣೆ ಮಾಡಲಾಗುವುದು. ಅದೇ ದಿನ ಕಾರ್ಯಕರ್ತ ವಿಕಾಸ ವಿಷಯದ ಕುರಿತು ಎಬಿವಿಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಭಾಷಣ ಮಾಡಲಿದ್ದಾರೆ. ನ್ಯಾಕ್ ಚೇರಮನ್ ಅನಿಲ ಸಹಸ್ರಬುದ್ಧಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕುಳಗೇರಿ ತಿಳಿಸಿದರು.
ಚರ್ಚಿತ ವಿಷಯಗಳು
ಸಮ್ಮೇಳನದಲ್ಲಿ ರಾಜ್ಯದ ಶೈಕ್ಷಣಿಕ ಸ್ಥಿತಿಗತಿ, ವರ್ತಮಾನ ಪರಿಸ್ಥಿತಿ ಹಾಗೂ ನೇಮಕಾತಿಗಳ ಕುರಿತಂತೆ ಚರ್ಚೆ ನಡೆಯಲಿದೆ. ಸ್ಕ್ರೀನ್ ಟೈಮ್ ಟು ಆಕ್ಟಿವಿಟಿ ಟೈಮ್ ಕುರಿತು ರಾಜ್ಯಾದ್ಯಂತ ಅಭಿಯಾನ ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ, ವಂದೇ ಮಾತರಂಗೆ 150 ವರ್ಷ, ರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ, ಸರ್ದಾರ್ ವಲ್ಲಭಾಯಿ ಪಟೇಲ ಅವರ 150 ಜಯಂತ್ಯುತ್ಸವ, ಸಂವಿಧಾನಕ್ಕೆ 75 ವರ್ಷ, ತುರ್ತು ಪರಿಸ್ಥಿತಿಗೆ 50 ವರ್ಷ, ರಾಷ್ಟ್ರೀಯ ಭದ್ರತೆ, ಸೈಬರ್ ಸೆಕ್ಯುರಿಟಿ ಎಂಬಿತ್ಯಾದಿ ವಿಷಯಗಳ ಸಮಾನಾಂತರ ಗೋಷ್ಠಿಗಳು ನಡೆಯಲಿವೆ ಎಂದರು.
ರಾಜ್ಯ ಕಾರ್ಯಕಾರಿಣಿಯ ಘೋಷಣೆ ಮಾಡಲಾಗುವುದು. ಇದರೊಂದಿಗೆ 3 ದಿನಗಳ ಸಮ್ಮೇಳನ ಮುಕ್ತಾಯವಾಗಲಿದೆ. ಸಮ್ಮೇಳನದ ಯಶಸ್ವಿಗೆ ಸ್ವಾಗತ ಸಮಿತಿ, ಹಿರಿಯ ಕಾರ್ಯಕರ್ತರು, ಹಿತೈಷಿಗಳು ಹಾಗೂ ಕಾರ್ಯಕರ್ತರು ಕಳೆದ ಒಂದು ತಿಂಗಳಿಂದ ಹಲವಾರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಚಿನ ಕುಳಗೇರಿ ತಿಳಿಸಿದರು.
ಮುಖಂಡರಾದ ವಿಕಾಸ ದರ್ಬಾರ, ಶೀಲಾ ಬಿರಾದಾರ, ಸುಧೀರ ಟಂಕಸಾಲೆ, ಎಬಿವಿಪಿಯ ರಾಜ್ಯ ಉಪಾಧ್ಯಕ್ಷ ಸುಮಾ ಬೋಳರಡ್ಡಿ, ಅಮಿತಕುಮಾರ ಬಿರಾದಾರ ಮತ್ತಿತರರಿದ್ದರು.