ವಿಜಯಪುರ ನಗರದ ಬುದ್ಧ ವಿಹಾರದಲ್ಲಿ ಬಸವರಾಜ ಸೂಳಿಭಾವಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ರಾಜಶೇಖರ ಯಡಹಳ್ಳಿ, ಅನೀಲ ಹೊಸಮನಿ, ಡಾ.ದೊಡ್ಡಣ್ಣ ಭಜಂತ್ರಿ ಇದ್ದಾರೆ.
- ದರಬಾರ್ ಮೈದಾನದಲ್ಲಿ ಆಯೋಜನೆ
- ಏ.10ರಿಂದ ಐದು ದಿನ ನಡೆಯಲಿರುವ ಮೇಳ
- ಮೇ ಸಾಹಿತ್ಯ ಮೇಳ ಮತ್ತಿತರ ಸಂಘಟನೆಗಳ ಸಹಯೋಗ
ವಿಜಯಪುರ: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಬೃಹತ್ ಪುಸ್ತಕ ಮೇಳ ಆಯೋಜಿಸಲಾಗಿದ್ದು, ಅದಕ್ಕಾಗಿ ಭರದ ಸಿದ್ಧತೆ ನಡೆದಿದೆ ಎಂದು ಲಡಾಯಿ ಪ್ರಕಾಶನದ ಮುಖ್ಯಸ್ಥ, ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಹೇಳಿದರು.
ನಗರದ ದರಬಾರ ಪ್ರೌಢಶಾಲೆ ಮೈದಾನದಲ್ಲಿ ಏ.10 ರಿಂದ ಐದು ದಿನಗಳ ಕಾಲ ಈ ಮೇಳ ನಡೆಯಲಿದೆ. ಕಳೆದೊಂದು ತಿಂಗಳಿನಿಂದ ಸಿದ್ಧತೆ ಕೈಗೊಳ್ಳಲಾಗಿದ್ದು, ಇದೀಗ ಅಂತಿಮ ಘಟ್ಟ ತಲುಪಿದೆ. ಇದೊಂದು ರಾಜ್ಯದಲ್ಲೇ ವಿನೂತನ ಪ್ರಯೋಗ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೆಮ್ಮೆ ವ್ಯಕ್ತಪಡಿಸಿದರು.
ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದ್ದು, ಸ್ವರಚಿತ ಪುಸ್ತಕಗಳಗಳೊಂದಿಗೆ ಸಾಹಿತಿಗಳ ಜಾಥಾ ಅಪೂರ್ವ ರೀತಿಯಲ್ಲಿ ನಡೆಯಲಿದ್ದು, ಸಾಹಿತಿಗಳೇ ಈ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.
ಏ.10 ರಂದು ಮಧ್ಯಾಹ್ನ 12 ಕ್ಕೆ ಡಿಎಸ್‌ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಖರ ಪುಸ್ತಕ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈನ ಖ್ಯಾತ ಲೇಖಕ ಜಿ.ವಿ. ಪವಾರ ದಿಕ್ಸೂಚಿ ಭಾಷಣ ಮಂಡಿಸಲಿದ್ದಾರೆ ಎಂದರು.
ಅದೇ ದಿನ ಮಧ್ಯಾಹ್ನ 3 ಕ್ಕೆ ಸಾಮಾಜಿಕ ಬದ್ಧತೆ - ಪತ್ರಕರ್ತನಾಗಿ ಅನುಭವಗಳು ಎಂಬ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತರಾದ ಬಿ.ಎಂ. ಹನೀಫ್, ಚಂದ್ರಕಾಂತ ವಡ್ಡು ವಿಚಾರ ಮಂಡಿಸಲಿದ್ದು, ಹಿರಿಯ ಪತ್ರಕರ್ತ ರಫೀ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 5 ಕ್ಕೆ ನನ್ನ ನೆಚ್ಚಿನ ಪುಸ್ತಕ - ವಿದ್ಯಾರ್ಥಿಗಳ ಮಾತು ಎಂಬ ಸಂವಾದ, ನಂತರ ಸಂಜೆ 6 ಕ್ಕೆ ಕವಿಗೋಷ್ಠಿ, ಸಂಜೆ 7 ಕ್ಕೆ ಬಂಜಾರಾ ನೃತ್ಯ ನಡೆಯಲಿದೆ, ಅದೇ ದಿನ ರಾತ್ರಿ 8 ಕ್ಕೆ ಗಣೇಶ ಕಾಂಬಳೆ - ರಮೇಶ ನಾಯಕ ಅವರಿಂದ ಪವಾಡ ಬಯಲು ಕಾರ್ಯಕ್ರಮ ನಡೆಯಲಿದೆ.
ಏ.11 ರಂದು ಶಿಕ್ಷಕ ದಂಪತಿ ಮೆರವಣಿಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಈ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಖ್ಯಾತ ಚಿಂತಕಿ ಡಾ.ಮೀನಾಕ್ಷಿ ಬಾಳಿ ದಿಕ್ಸೂಚಿ ಭಾಷಣ ಮಂಡಲಿಸದ್ದಾರೆ. ಸಂಜೆ 4 ಕ್ಕೆ ಲೇಖಕರೊಂದಿಗೆ ಸಂವಾದ ನಡೆಯಲಿದೆ, ಸಂಜೆ 6 ಕ್ಕೆ ಕವಿಗೋಷ್ಠಿ ನಡೆಯಲಿದೆ.
ಏ.12 ರಂದು ಬಸವಾದಿ ಶರಣರ ವಚನಗಳ ಪವಿತ್ರ ಕಟ್ಟುಗಳ ಮೆರವಣಿಗೆ ನಡೆಯಲಿದೆ, ನಂತರ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕಿ ಡಾ.ಎಚ್.ಎಸ್. ಅನುಪಮಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ನಂತರ ಮುದ್ರಣ ಗುಮ್ಮಟ ಎಂಬ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ, ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಏ.13 ರಂದು ಕಾಕಾ ಕಾರಖಾನೀಸರ ಸ್ಮರಣೆ ನಡೆಯಲಿದ್ದು, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಉಪನ್ಯಾಸ ಮಂಡಿಸಲಿದ್ದಾರೆ,
ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಅರ್. ಅಂಬೇಡ್ಕರ್ ಜಯಂತ್ಯುತ್ಸವ ನಡೆಯಲಿದ್ದು, ಖ್ಯಾತ ಚಿಂತಕ ಶಿವಸುಂದರ ಪ್ರಧಾನ ಭಾಷಣ ಮಂಡಿಸಲಿದ್ದಾರೆ ಎಂದರು.
ಮುಖಂಡರಾದ ರಾಜಶೇಖರ ಯಡಹಳ್ಳಿ, ಅನೀಲ ಹೊಸಮನಿ, ಡಾ.ದೊಡ್ಡಣ್ಣ ಭಜಂತ್ರಿ ಇತರರಿದ್ದರು.