ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ವಸಂತ ಹೊನಮೋಡೆ, ನಾಗರಾಜ ಲಂಬು, ಫಯಾಜ್ ಕಲಾದಗಿ ಇದ್ದಾರೆ.
- ಸಚಿವ ಎಂ.ಬಿ. ಪಾಟೀಲರ ಪ್ರಯತ್ನದ ಫಲ
- ಮೂರು ತಿಂಗಳಲ್ಲಿ ವಿಮಾನ ಹಾರಾಟದ ನಿರೀಕ್ಷೆ
- ಎಸ್.ಎಂ. ಪಾಟೀಲ ಗಣಿಹಾರ ಬಿಚ್ಚಿಟ್ಟ ವಿವರ
- ತೆರೆಮರೆ ಹಿಂದಿನ ಹಕೀಕತ್ ಹೇಳಿದ ನಾಯಕ
ವಿಜಯಪುರ: ‘ಅರ್ಧಕ್ಕೆ ನಿಂತಿರುವ ಬಾರಾಕಮಾನ್‌ನಂತಾಗಿದ್ದ ವಿಮಾನ ನಿಲ್ದಾಣ ಯೋಜನೆಯನ್ನು ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಡಾ.ಎಂ.ಬಿ. ಪಾಟೀಲರು, ಕೇವಲ ಮೂರೇ ಮೂರು ತಿಂಗಳಲ್ಲಿ ವಿಮಾನ ಹಾರಾಟ ಆರಂಭಿಸುವುದಾಗಿ ನೀಡಿರುವ ಭರವಸೆ ಹೊಸ ಆಶಾಭಾವ ಸೃಷ್ಠಿಸಿದೆ’ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಹರ್ಷ ವ್ಯಕ್ತಪಡಿಸಿದರು.
‘ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಸಚಿವ ಎಂ.ಬಿ. ಪಾಟೀಲರ ಪಾತ್ರ ಬಹುದೊಡ್ಡದು. ಮೂಲ ಸೌಕರ್ಯ ಸಚಿವರಾಗಿ ಅವರು ನೀಡಿದ ಕಾಣಿಕೆ, ಪಟ್ಟ ಪರಿಶ್ರಮ, ತಾಂತ್ರಿಕ ತೊಂದರೆ ನಿಭಾಯಿಸುವಲ್ಲಿ ವಹಿಸಿರುವ ಪಾತ್ರ, ನ್ಯಾಯಾಂಗ ಹೋರಾಟ ಅವಿಸ್ಮರಣೀಯ ಮತ್ತು ಅನುಪಮ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಕೊಂಡಾಡಿದರು.
‘ಕಿತ್ತೂರು ಕರ್ನಾಟಕದ ಕೇಂದ್ರಭಾಗವಾಗಿರುವ ವಿಜಯಪುರವನ್ನು ಸಮಗ್ರ ಅಭಿವೃದ್ಧಿಗೊಳಪಡಿಸುವಲ್ಲಿ ಸಚಿವರ ಪಾತ್ರ ಅಮೋಘ. ನೀರಾವರಿ ಯೋಜನೆಗಳು, ಹೈನುಗಾರಿಕೆ, ವೃಕ್ಷ ಆಂದೋಲನ, ಶೈಕ್ಷಣಿಕ ಕ್ರಾಂತಿ ಹೀಗೆ ಅನೇಕ ಕ್ಷೇತ್ರಗಳ ಅಭಿವೃದ್ಧಿ ಬಳಿಕ ಇದೋಗ ವಿಮಾನ ನಿಲ್ದಾಣ ಕೂಡ ಅವರ ಪ್ರಯತ್ನದಿಂದಾಗಿಯೇ ಕಾರ್ಯಗತಗೊಳ್ಳುತ್ತಿರುವುದು ಐತಿಹಾಸಿಕ ಮೈಲಿಗಲ್ಲು’ ಎಂದರು.
ಎಂ.ಬಿ. ಪಾಟೀಲರ ಪಾತ್ರ
‘ವಿಮಾನ ನಿಲ್ದಾಣ ಯೋಜನೆಗೆ ಈ ಹಿಂದೆ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸಚಿವರಾಗಿದ್ದಾಗ ಆರಂಭಗೊಂಡಿತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದ್ದರು. ಬಳಿಕ ದಶಕಗಳ ಕಾಲ ಯೋಜನೆ ನೆಲಕಚ್ಚಿತು. ಮತ್ತದೇ ಬಿಜೆಪಿ ಆಡಳಿತಾವಧಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳರ ಪ್ರಯತ್ನದಿಂದಾಗಿ ಭೂಮಿ ಪೂಜೆ ನೆರವೇರಿತು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಮತ್ತೆ ಯೋಜನೆ ನೆನೆಗುದಿಗೆ ಬೀಳುವಂತಾಯಿತು. ಆರಂಭದಲ್ಲಾದ ಯಡವಟ್ಟಿನಿಂದಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತಾಯಿತು. ಎಲ್ಲರೂ ಉದಾಸೀನ ತೋರಿದಾಗ ಸಚಿವ ಎಂ.ಬಿ. ಪಾಟೀಲರು ವಿಶೇಷ ಮುತುವರ್ಜಿ ವಹಿಸಿದರು. ನ್ಯಾಯಾಂಗ ಹೋರಾಟ ನಡೆಸಿದರು. ಇಲ್ಲದೇ ಹೋದರೆ ವಿಮಾನ ನಿಲ್ದಾಣ ಎರಡನೇ ಬಾರಾಕಮಾನ್ ಆಗುತ್ತಿತ್ತು’ ಎಂದು ಗಣಿಹಾರ ವಿವರಿಸಿದರು.
ಮೂರೇ ಮೂರು ತಿಂಗಳಲ್ಲಿ ಸಾಕಾರ
‘ಸದ್ಯ ಸುಪ್ರೀಂ ಕೋರ್ಟ್‌ನಿಂದ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಬಹುದೊಡ್ಡ ಗಂಡಾಂತರಿಂದ ಪಾರಾಗಿದ್ದು, ಕೇವಲ ಮೂರೇ ಮೂರು ತಿಂಗಳಲ್ಲಿ ವಿಮಾನ ಹಾರಾಟ ಆರಂಭಿಸಲಿದೆ. ಇದರಿಂದಾಗಿ ವಿಜಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೃಷಿ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆ ಎಲ್ಲದಕ್ಕೂ ದೊಡ್ಡ ನೆರವು ಸಿಗಲಿದೆ. ವಾಸ್ತವವಾಗಿ, ಹಿಂದಿನ ಸರ್ಕಾರ ಕೈಗೆತ್ತಿಕೊಂಡಿದ್ದ ವಿಮಾನ ನಿಲ್ದಾಣ ಯೋಜನೆ ಚಿಕ್ಕದಾಗಿತ್ತು. ಆದರೆ ಎಂ.ಬಿ. ಪಾಟೀಲರು, ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು, ವಿಜಯಪುರಕ್ಕೆ ಅಂತರ ರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವೇ ಆಗಬೇಕೆಂದು, ಅದನ್ನು ಪಟ್ಟು ಹಿಡಿದು ಸಾಧಿಸಿದ್ದಾರೆ. ಈ ಯೋಜನೆಗೆ ಇದುವರೆಗೂ 614.76 ಕೋಟಿ ರೂ. ವಿನಿಯೋಗಿಸಲಾಗಿದೆ. ಅಗತ್ಯ ಸಹಕಾರದೊಂದಿಗೆ ಸಚಿವ ಎಂ.ಬಿ. ಪಾಟೀಲರು ವಿಮಾನ ಹಾರಾಟಕ್ಕೆ ಅನುಕೂಲ ಕಲ್ಪಿಸಿರುವುದಾಗಿ ಹೇಳಿದ್ದು, ಈ ಭಾಗದ ಜನ ಅವರನ್ನು ನಿತ್ಯ ಸ್ಮರಿಸುವರು’ ತಿಳಿಸಿದರು.
‘ಶೀಘ್ರದಲ್ಲೇ ವಿಜಯಪುರ ವಿಮಾನ ನಿಲ್ದಾಣದಲ್ಲಿ ಆಗಿರುವ ಕೆಲಸಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯ ಮಹಾನಿರ್ದೇಶಕರು ಖುದ್ದಾಗಿ ಬಂದು ನೋಡಲಿದ್ದಾರೆ. ಅದೊಂದು ಮುಗಿದರೆ, ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದ್ದು ಬಹುದಿನದ ಕನಸೊಂದು ನನಸು ಮಾಡಿದ ಕೀರ್ತಿ ಸಚಿವ ಎಂ.ಬಿ. ಪಾಟೀಲರಿಗೆ ಸಿಗಲಿದೆ’ ಎಂದು ಗಣಿಹಾರ ಹೆಮ್ಮೆಯಿಂದ ನುಡಿದರು.
ಮುಖಂಡರಾದ ವಸಂತ ಹೊನಮೋಡೆ, ನಾಗರಾಜ ಲಂಬು, ಫಯಾಜ್ ಕಲಾದಗಿ ಇತರರಿದ್ದರು.