ಮುದ್ದೇಬಿಹಾಳ : ನಗರದ ವಿಜಯಪುರ ರಸ್ತೆಯ ಢವಳಗಿ ಲೇಔಟ್ನ ಮನೆಯೊಂದರಲ್ಲಿ ವಾಸವಾಗಿರುವ ಬಸರಕೋಡ ಗ್ರಾಮದ ಯೋಧ ಸಲೀಂ ಮಲಿಕಸಾಬ ಅಂಗಡಗೇರಿ ಅವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಸೋಮವಾರ ನಡೆದಿದ್ದು, ಗುರುವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಮೂಲಕ ಬೆಳಕಿಗೆ ಬಂದಿದೆ.
ಸಲೀಂ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಅ.25ರಂದು ಮಂತ್ರಾಲಯಕ್ಕೆ ತೆರಳಿದ್ದರು. ಅ.26ರಂದು ಮಧ್ಯಾಹ್ನ ಮರಳಿ ಮನೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. 30 ಗ್ರಾಂ ನೆಕ್ಲೆಸ್ (ಮೌಲ್ಯ 1.20 ಲಕ್ಷ), 10 ಗ್ರಾಂ ಚೈನ್ (40000), 10 ಗ್ರಾಂ ಬೋರಮಾಳ ಹಾಗೂ ಗಂಟೆ ಸರ (40000), 5 ಗ್ರಾಂ ಮಕ್ಕಳ ಚಿನ್ನದ ಕೈಕಟ್ಟು (20000) ಸೇರಿ 2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಹೇಳಲಾಗಿದೆ.
ಜೊತೆಗೆ ಮನೆಯ ವರಾಂಡಾದಲ್ಲಿ ನಿಲ್ಲಿಸಿದ್ದ ಬೈಕನ್ನು ಕದ್ದೊಯ್ಯಲು ಯತ್ನಿಸಿರುವ ಕಳ್ಳರು ಅದನ್ನು ಸಾಗಿಸಲಾಗದೆ ಮನೆಯಿಂದ ಸ್ವಲ್ಪ ದೂರದಲ್ಲಿ ಬಿಟ್ಟು ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಮಹಮ್ಮದ್ ಫಸಿವುದ್ದೀನ್, ಪಿಎಸ್ಐ ವಿಜಯಕುಮಾರ ತಳವಾರ, ಕ್ರೈಂ ಪಿಎಸ್ಐ ಆರ್.ಎಸ್. ಬಂಗಿ, ಪೊಲೀಸ್ ಸಿಬ್ಬಂದಿ ಆಗಮಿಸಿ ಪ್ರಾಥಮಿಕ ಪ್ರಕ್ರಿಯೆ ಪೂರೈಸಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಸಲೀಂ ನೀಡಿರುವ ದೂರಿನನ್ವಯ ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.