ವಿಜಯಪುರ ನಗರದ ಬಿಎಲ್‌ಡಿ ಗೆಸ್ಟ್‌ಹೌಸ್‌ನಲ್ಲಿ ಕೊಣ್ಣೂರ ಗ್ರಾಮಸ್ಥರು ಮತ್ತು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ ನೇತೃತ್ವದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸನ್ಮಾನಿಸಲಾಯಿತು. ಶರಣಯ್ಯ ಹಿರೇಮಠ, ರಹಿಮಸಾಬ ಅವಟಿ, ಯಲ್ಲಪ್ಪ ಮಾದರ ಮತ್ತಿತರರಿದ್ದರು. 
ವಿಜಯಪುರ

ಕೊಣ್ಣೂರ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಸಮಸ್ಯೆ ಕ್ರಮಕ್ಕೆ ಸಚಿವ ಸತೀಶ ಜಾರಕಿಹೋಳಿ ಭರವಸೆ
  • ಕೊಣ್ಣೂರ ಗ್ರಾಮಸ್ಥರು, ಸಿ.ಬಿ. ಅಸ್ಕಿ ನೇತೃತ್ವದಲ್ಲಿ ಸನ್ಮಾನ

ತಾಳಿಕೋಟೆ: ತಾಲೂಕಿನ ಕೊಣ್ಣೂರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೂಡಲೇ ಸುಮಾರು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ, ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕೆಂದು ವಿಜಯಪುರ ನಗರದ ಬಿಎಲ್‌ಇಡಿ ಗೆಸ್ಟ್‌ಹೌಸ್‌ನಲ್ಲಿ ಕೊಣ್ಣೂರ ಗ್ರಾಮಸ್ಥರು ಮತ್ತು ಅಸ್ಕಿ ಫೌಂಡೇಶನ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ ನೇತೃತ್ವದಲ್ಲಿ ಭಾನುವಾರ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

ಕೊಣ್ಣೂರ ಗ್ರಾಮದ ರಸ್ತೆ ಸಮಸ್ಯೆಗಳ ಕುರಿತು ಸಚಿವರಿಗೆ ಮನವರಿಕೆ ಮಾಡಿದ ಸಿ.ಬಿ.ಅಸ್ಕಿ, ಕೊಣ್ಣೂರ ಗ್ರಾಮದ ಸರ್ಕಾರಿ ವಸತಿ ಪ್ರದೇಶದ ಸಮೀಪದಲ್ಲಿರುವ ಸುಮಾರು 300 ಮೀ. ಉದ್ದದ ನಾಲ್ಕು ಸಿಸಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ನಾಲ್ಕು ಆಂತರಿಕ ರಸ್ತೆಗಳ ಅಭಿವೃದ್ಧಿಗೆ ಸುಮಾರು 2 ಕೋಟಿ ರೂ. ಅನುದಾನದ ಅಗತ್ಯವಿದ್ದು, ತುರ್ತಾಗಿ ಅನುದಾನ ಬಿಡುಗಡೆ ಮಾಡಿ ರಸ್ತೆ ಅಭಿವೃದ್ದಿ ಪಡಿಸಿಕೊಡಬೇಕು ಎಂದು ಮನವಿ ಮಾಡಿದರು.
ನಂತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಜಾರಕಿಹೊಳಿ ಅವರು, ಎರಡು ತಿಂಗಳೊಳಗಾಗಿ 2 ಕೋಟಿ ರೂ. ಅನುದಾನ ಕೊಣ್ಣೂರ ಗ್ರಾಮದ ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡಿಸಿ ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶರಣಯ್ಯ ಹಿರೇಮಠ, ರಹಿಮಸಾಬ ಅವಟಿ, ಯಲ್ಲಪ್ಪ ಮಾದರ, ಅಸ್ಕಿ ಫೌಂಡೇಷನ್ ಉಪಾಧ್ಯಕ್ಷ ವಿರೇಶಗೌಡ ಅಸ್ಕಿ, ಶಾಂತಗೌಡ ಹಡಲಗೇರಿ, ಬಂದು ಮಡಿಕೇಶ್ವರ ಇತರರಿದ್ದರು.