ವಿಜಯಪುರ: ನಗರದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ರಸ್ತೆ ದುರಸ್ತಿ ಕಾಮಗಾರಿಯನ್ನು ಶುಕ್ರವಾರ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಪರಿಶೀಲಿಸಿದರು. ಇಟಗಿ ಪೆಟ್ರೋಲ್ ಪಂಪ್‌ದಿಂದ ತೊರವಿ, ಬಬಲೇಶ್ವರ ನಾಕಾ ಮತ್ತು ಕಾಮತ್ ಹೋಟೆಲ್ ರಸ್ತೆಗಳ ದುರಸ್ತಿ ಕಾಮಗಾರಿ ಹಾಗೂ ನಗರದಲ್ಲಿ ಚಾಲ್ತಿಯಲ್ಲಿರುವ ನೀರು ಸರಬರಾಜು ಯೋಜನೆಗಳನ್ನೂ ಪರಿಶೀಲಿಸಿದರು.
ಕೇಂದ್ರದ ಅಮೃತ್ ಯೋಜನೆಯ ಹೆಚ್ಚುವರಿ ಅನುದಾನದಲ್ಲಿ 21.98 ಕೋಟಿ ರೂ.ಗಳ ವೆಚ್ಚದಲ್ಲಿ ವಿಜಯಪುರ ನಗರದಲ್ಲಿ 2 ಝೋನ್‌ಗಳಿಗೆ ನಿರಂತರ ಒತ್ತಡಯುಕ್ತ ನೀರು ಸರಬರಾಜು ಹಾಗೂ ಇತರ ನೀರು ಸಂಗ್ರಹ ಸೇರಿ ವಿತರಣಾ ಘಟಕಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ನಗರದ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರವಿರುವ 10 ದಶಲಕ್ಷ ಸಾಮರ್ಥ್ಯದ ಪಂಪ್ ಹಾಗೂ ಪಂಪಿನ ಮನೆ, ಏರು ಕೊಳವೆ ಮಾರ್ಗ, ವಿತರಣಾ ಕೊಳವೆ ಮಾರ್ಗಗಳು ಪೂರ್ಣಗೊಂಡಿದ್ದು, ಅ.31ರಂದು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗುತ್ತಿದೆ. ಈ ಪಂಪಿನ ಮನೆಯಿಂದ ಝೋನ್ 5 ರಲ್ಲಿ (ವಾರ್ಡ್-31 (ಭಾ) ಇರುವ 3468 ಸಂಖ್ಯೆ ಗೃಹ ಸಂಪರ್ಕಗಳಿಗೆ 24x7 ಮಾದರಿಯ ನೀರು ಸರಬರಾಜು ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರೋತ್ಥಾನ ಹಂತ-3ರ ಅನುದಾನದಡಿ 15 ಕೋಟಿ ರೂ.ಗಳ ವೆಚ್ಚದಲ್ಲಿ ಭೂತನಾಳ ಕೆರೆಯ ಆವರಣದಲ್ಲಿ 10 ಎಂಎಲ್ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕವು ಮುಕ್ತಾಯ ಹಂತದಲ್ಲಿದ್ದು, ಈ ಘಟಕವನ್ನು ನ. 15 ರಂದು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಈ ಎರಡೂ ಯೋಜನೆಗಳು ಚಾಲನೆಗೊಂಡ ನಂತರ ನಗರದ 6 ಝೋನ್‌ಗಳ(ಝೋನ್ -1,2,3,4,5 ಹಾಗೂ 22) (ವಾರ್ಡ್-4,5,12,3 (ಭಾ) 6) ಒಟ್ಟು ಅಂದಾಜು 16,000 ಸಂಖ್ಯೆ ಗೃಹ ಸಂಪರ್ಕಗಳಿಗೆ 24*7 ಮಾದರಿಯ ನೀರು ಸರಬರಾಜು ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ನಗರದಲ್ಲಿ ಕೇಂದ್ರದ ಅಮೃತ್ ಯೋಜನೆಯಡಿ 24x7 ಮಾದರಿ ನೀರು ಸರಬರಾಜುವಿನ ಬಾಕಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ನಗರದ ಎಲ್ಲ ವಾರ್ಡ್‌ಗಳಿಗೆ 24x7 ಮಾದರಿಯ ಕುಡಿಯುವ ನೀರಿನ ವ್ಯವಸ್ಥೆ ವಿಸ್ತರಿಸಲು ಜಲಮಂಡಳಿಗೆ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ ಮತ್ತಿತರರಿದ್ದರು.