ವಿಜಯಪುರ: ಐತಿಹಾಸಿಕ ನಗರ ವಿಜಯಪುರದಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ವಿಜಯಪುರ ವಿಕಾಸ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವೇದಿಕೆ ಅಧ್ಯಕ್ಷ ನೀಲಕಂಠ ಕಂದಗಲ್ ಮಾತನಾಡಿ, ಐತಿಹಾಸಿಕ ನಗರ, ವಿಶ್ವಪ್ರಸಿದ್ಧ ಪ್ರವಾಸಿತಾಣ ವಿಜಯಪುರ ನಗರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದೆ ಹಿಂದುಳಿದಿದೆ. ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ನಗರದ ಅಭಿವೃದ್ಧಿ ಮರೀಚಿಕೆಯಾಗಿಯೆ ಉಳಿದಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರಗಳು ಬದಲಾದರೂ ವಿಜಯಪುರದ ಹಣೆಬರಹ ಬದಲಾಗಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಹುತೇಕ ರಸ್ತೆಗಳು ಹದಗೆಟ್ಟಿವೆ. ನಗರದಲ್ಲಿ ಒಂದು ಸುತ್ತು ಹಾಕಿದರೆ ನರಕದ ಪ್ರತ್ಯಕ್ಷ ದರ್ಶನ ಆಗುತ್ತದೆ. ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸಬೇಕಾದರೆ ಎದೆ ಝಲ್ಲೆನ್ನುತ್ತದೆ. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಓಡಿಸುವಂತಾಗಿದೆ. ಉತ್ತಮ ರಸ್ತೆ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಜನರು ಲೇವಡಿ ಮಾಡುತ್ತಿದ್ದಾರೆ. ಕೆಸರುಗದ್ದೆಯಂತಾದ ರಸ್ತೆಗಳಲ್ಲಿ ಆಟೋ ಚಾಲಕರು ಆಟೋ ಓಡಿಸುವಾಗ ಪಕ್ಕದಲ್ಲಿ ಹೊರಟವರ ಮುಖಕ್ಕೆ ಬಟ್ಟೆಗೆ ರಾಡಿ(ಕೆಸರು) ಸಿಡಿದು ಗಲಾಟೆ ಜಗಳ ಪ್ರತಿನಿತ್ಯ ನಡೆಯುತ್ತಿವೆ. ದೊಡ್ಡ ದೊಡ್ಡ ಗುಂಡಿ ಬಿದ್ದಿರುವ ಪ್ರಮುಖ ರಸ್ತೆಗಳಲ್ಲಿ ಬೈಕ್ ಓಡಿಸುವುದು ಹರ ಸಾಹಸವೇ ಸರಿ. ಗರ್ಭಿಣಿಯರು, ರೋಗಿಗಳು ರಸ್ತೆಗೆ ಇಳಿಯುವುದು ದುಸ್ಸಾಹಸಕ್ಕೆ ಕೈ ಹಾಕಿದಂತೆ. ಆದ್ದರಿಂದ ಶೀಘ್ರ ರಸ್ತೆಗಳ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಪುನೀತ ಸಜ್ಜನ, ರವಿ ಗಾಯಕವಾಡ, ಸಂಭಾಜಿ ಪಾಟೀಲ, ರಾಹುಲ್ ಪವಾರ, ಶಶಾಂಕ ಅಳ್ಳಿಮೊರೆ, ತೀರ್ಥಪ್ಪ ಪೂಜಾರಿ , ಕುಮಾರ ಜಾಧವ, ಗಂಗಾಧರ ಗೂಗದಡ್ಡಿ, ವಿಜಯಕುಮಾರ ಜಾಧವ, ರವಿ ರಾಠೋಡ, ಮುತ್ತಣ್ಣ ಭೋವಿ, ಸಿದ್ದು ಗೋಡೆಕರ, ಈರಣ್ಣ ಪಾಟೀಲ, ಶಶಿಧರ ಸಜ್ಜನ, ಕಾಶಿನಾಥ ಪವಾರ, ರವಿ ಸಜ್ಜನ, ಪ್ರಶಾಂತ ಖ್ಯಾಡಿ, ಸುನೀಲ ಜಾಧವ, ಪ್ರಶಾಂತ ಚವಾಣ್ ಮತ್ತಿತರರಿದ್ದರು.