ವಿಜಯಪುರ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಶುಕ್ರವಾರ ಜಿಲ್ಲಾದ್ಯಂತ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಯಾವುದೇ ಮಾಹಿತಿ ಇಲ್ಲದೆ ಜಿಲ್ಲೆ ಹಾಗೂ ತಾಲುಕು ಕೇಂದ್ರಗಳಿಗೆ ಆಗಮಿಸಿದ್ದ ಪ್ರಯಾಣಿಕರು ಮುಷ್ಕರದಿಂದಾಗಿ ಪರದಾಡಿದರು. ಬೆಳಗ್ಗೆ ಎಂದಿನಂತೆ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಸಾರಿಗೆ ನೌಕರರು ಪ್ರತಿಭಟನೆಗಿಳಿದರು. ಪ್ರಯಾಣಿಕರು ದಿಕ್ಕು ತೋಚದೆ ಕುಳಿತುಕೊಂಡರಲ್ಲದೆ ಹತ್ತಿರದ ಗ್ರಾಮ ಹಾಗೂ ನಗರ ಪ್ರದೇಶಗಳಿಗೆ ಹೋಗುವವರು ಖಾಸಗಿ ವಾಹನಗಳ ಮೊರೆ ಹೋದರು. ದೂರದೂರುಗಳ ಪ್ರಯಾಣಿಕರು ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದರು.
ಪೊಲೀಸರಿಂದ ಥಳಿತ
ಬೆಳಗ್ಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ, ಸಾರಿಗೆ ಸಿಬ್ಬಂದಿಯೋರ್ವನನ್ನು ಕೊರಳು ಪಟ್ಟಿ ಹಿಡಿದುಕೊಂಡು ಪೊಲೀಸ್ ಸಿಬ್ಬಂದಿ ಎಳೆದಾಡಿದರು. ಅದಾಗ್ಯೂ ಜಗ್ಗದ ಸಾರಿಗೆ ನೌಕರರನ್ನು ಥಳಿಸಿದ್ದು ಮುಷ್ಕರ ನಿರತರ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಯಿತು.
ಬಸ್‌ಗೆ ಕಲ್ಲು ತೂರಾಟ
ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ತಾಳಿಕೋಟೆ ಡಿಪೋಗೆ ಸೇರಿದ ಎರಡು ಬಸ್‌ಗಳಿಗೆ ಹಾಗೂ ವಿಜಯಪುರ ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ವೊಂದಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ ಪರಿಣಾಮ ಬಸ್ ಗಾಜುಗಳು ಪುಡಿಯಾಗಿವೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಬಸ್ ಹತ್ತಲು ನಿರಾಕರಿಸಿದ್ದು ಕಂಡು ಬಂತು. ವಿವಿಧ ನಗರ, ಪಟ್ಟಣ, ಊರುಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು.
ಜಿಲ್ಲೆಯಲ್ಲಿ ಒಟ್ಟು 622 ರೂಟ್‌ಗಳಲ್ಲಿ ಬೆಳಗ್ಗೆ ಬಸ್ ಸಂಚಾರ ಎಂದಿನಂತೆ ಆರಂಭವಾಯಿತು. ಬಳಿಕ ಚಾಲಕರು, ನಿರ್ವಾಹಕರು ಬಸ್ ಸಂಚಾರ ಸ್ಥಗಿತಗೊಳಿಸಿದ ಕಾರಣ ಶೇ.50ರಷ್ಟು ಬಸ್‌ಗಳು ಕಾರ್ಯಾಚರಿಸಲಿಲ್ಲ.
ನಾರಾಯಣಪ್ಪ ಕುರುಬರ, ವಿಭಾಗೀಯ ನಿಯಂತ್ರಣಾಧಿಕಾರಿ, ವಿಜಯಪುರ