ಜಿಲ್ಲೆ

ಖಾಸಗಿ ಬಸ್‌ಗಳತ್ತ ಪ್ರಯಾಣಿಕರ ಚಿತ್ತ

ವಿಜಯಪುರ: ಸಾರಿಗೆ ನೌಕರರ ಮುಷ್ಕರ ಮುಂದುವರಿದ ಹಿನ್ನೆಲೆ ಪ್ರಯಾಣಿಕರು ಖಾಸಗಿ ಬಸ್‌ಗಳ ಮೂಲಕ ಶನಿವಾರ ತಮ್ಮ ಊರುಗಳಿಗೆ ತೆರಳಿದರು.

ಯುಗಾದಿ ಹಬ್ಬದ ಸಂಭ್ರಮ ಒಂದೆಡೆಯಾದರೆ ಸಾಲು-ಸಾಲು ರಜೆಯಿಂದಾಗಿ ನೌಕರರು, ಜನರು ತಮ್ಮ ಗ್ರಾಮಗಳಿಗೆ ತೆರಳಲು ಖಾಸಗಿ ಬಸ್‌ಗಳನ್ನು ಅವಲಂಭಿಸಬೇಕಾಯಿತು.

ನಗರ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿ ಹಾಗೂ ಸತಾರಾ, ಸಾಂಗ್ಲಿ, ಹುಣಸಗಿ, ಯಾದಗಿರಿ, ರಾಯಚೂರು ಹಾಗೂ ಶ್ರೀಶೈಲಕ್ಕೆ ಹೋಗುವ ಪ್ರಯಾಣಿಕರಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದಿಂದ 31 ಬಸ್‌ಗಳ ಸಂಚಾರ ಆರಂಭಗೊಂಡಿತು. 245 ಜನ ಚಾಲಕ, ನಿರ್ವಾಹಕರು ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಅನ್ಯ ಜಿಲ್ಲೆಯ ಜನರ ಪರದಾಟ
ಸಾರಿಗೆ ನೌಕರರ ಮುಷ್ಕರದಿಂದಾಗಿ ಬೇರೆ ಜಿಲ್ಲೆಗಳಿಗೆ ಸರ್ಕಾರಿ ಬಸ್ ಸೌಲಭ್ಯ ಇಲ್ಲದಿರುವುದರಿಂದ ಬೇರೆ ಜಿಲ್ಲೆಯ ಜನರು ಪರದಾಡುವಂತಾಗಿದೆ. ಬೆಂಗಳೂರು ಸೇರಿ ಇತರ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಯುಗಾದಿ ಹಬ್ಬದ ಸಂಭ್ರಮ ಕಸಿದಂತಾಗಿದೆ. ಕೆಲವರು ಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುತ್ತಿದ್ದರೆ ಇನ್ನೂ ಕೆಲವರು ಹೆಚ್ಚುವರಿ ಹಣ ಕೊಡಲು ಹಿಂದೇಟು ಹಾಕುವಂತಾಗಿದೆ.

‘ಮಹಾ’ ಸಾರಿಗೆ ಆಸರೆ
ಗಡಿಜಿಲ್ಲೆ ವಿಜಯಪುರಕ್ಕೆ ಮಹಾರಾಷ್ಟ್ರದ ಬಸ್‌ಗಳು ಆಸರೆ ಆಗಿವೆ. ಇಂಡಿ, ಚಡಚಣ, ಧೂಳಖೇಡ, ತಿಕೋಟಾ, ಕಾತ್ರಾಳ, ಬಾಲಗಾಂವ ಗಡಿಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ, ಸರ್ಕಾರಿ ಇಲಾಖೆ ನೌಕರರಿಗೆ ಅನುಕೂಲವಾಗಿದೆ. ಸೋಲಾಪುರ, ಜತ್ತ್, ಸಾಂಗ್ಲಿಯಿಂದ ವಿಜಯಪುರಕ್ಕೆ ಮಹಾರಾಷ್ಟ್ರದ ಸಾರಿಗೆ ಬಸ್‌ಗಳು ಓಡಾಡುತ್ತಿರುವುದು ಬಹಳಷ್ಟು ಸಹಕಾರಿಯಾಗಿದೆ ಎನ್ನುತ್ತಾರೆ ಪ್ರಯಾಣಿಕರು.

ಯುಗಾದಿ ಹಬ್ಬಕ್ಕೆ ಶಿವಮೊಗ್ಗಕ್ಕೆ ತೆರಳಬೇಕಿದೆ. ಆದರೆ, ಸಾರಿಗೆ ಬಸ್ ವ್ಯವಸ್ಥೆ ಇಲ್ಲ. ಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ಹಣ ಕೇಳುತ್ತಾರೆ. ಆದ್ದರಿಂದ ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆದು, ಜನರಿಗೆ ತೊಂದರೆಯಾಗದಂತೆ ಸ್ಪಂದಿಸಬೇಕಿದೆ.
ಸಂತೋಷ ಕುಮಾರ್, ಪ್ರಯಾಣಿಕ

4 ದಿನದಲ್ಲಿ 2.39 ಕೋಟಿ ರೂ. ನಷ್ಟ
ಸಾರಿಗೆ ನೌಕರರ ಮುಷ್ಕರದಿಂದಾಗಿ ಕಳೆದ ನಾಲ್ಕು ದಿನದಲ್ಲಿ ವಿಜಯಪುರ ಘಟಕದಿಂದ 2.39 ಕೋಟಿ ರೂ. ನಷ್ಟ ಆಗಿದೆ. ಏ.7ರಂದು 38.70 ಲಕ್ಷ ರೂ., 8ರಂದು 67.37 ಲಕ್ಷ ರೂ., 9ರಂದು 74.12 ಲಕ್ಷ ರೂ., 10ರಂದು 57 ಲಕ್ಷ ರೂ. ನಷ್ಟ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಜಿಲ್ಲಾ ನಿಯಂತ್ರಣಾಧಿಕಾರಿ ನಾರಾಯಣ ಕುರುಬರ ಮಾಹಿತಿ ನೀಡಿದ್ದಾರೆ.

ಮೂವರಿಗೆ ವರ್ಗಾವಣೆ ಶಿಕ್ಷೆ
ಮುಷ್ಕರದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಮೂವರು ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಚಾಲಕ ಕಂ. ನಿರ್ವಾಹಕ ಭೀಮಪ್ಪ ಪರಶುರಾಮ ಸಿಂಗಾಡೆ ಅವರನ್ನು ಚಿಂಚೋಳಿಗೆ, ಚಾಲಕ ಜಾಫರ್ ಶರೀಫ ಚಾಂದಸಾಹೇಬ ಮುಲ್ಲಾ ಅವರನ್ನು ಭಾಲ್ಕಿಗೆ, ಚಾಲಕ ದಸ್ತಗಿರಿ ಸಾಬ ಚಪ್ಪರಬಂದ ಅವರನ್ನು ಗುರುಮಿಠಕಲ್‌ಗೆ ವರ್ಗಾಯಿಸಿ ಈ.ಕ.ರ.ಸಾ. ಸಂಸ್ಥೆ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.